ಇನ್ನಂಜೆ ಪರಿಸರದ ವಿದ್ಯಾರ್ಥಿಗಳು ಇತ್ತೀಚೆಗೆ ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದಂದು ಕೆ.ಜಿ. ಕೃಷ್ಣ ನಿರ್ದೇಶನದಲ್ಲಿ ಯಕ್ಷಗಾನ ಶೈಲಿಯಲ್ಲಿ ಪುಣ್ಯಕೋಟಿ ಎಂಬ ನೃತ್ಯ ರೂಪಕ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಅಚ್ಚುಕಟ್ಟಾದ ವೇಷಭೂಷಣ, ಪರಿಪೂರ್ಣ ರಂಗನಡೆ ಈ ಪ್ರದರ್ಶನದ ಹೆಚ್ಚುಗಾರಿಕೆಯಾಗಿತ್ತು. ಭಾವಪೂರ್ಣ ಅಭಿನಯದ ಮೂಲಕ ಮತ್ತೂಮ್ಮೆ ಪ್ರೇಕ್ಷಕರೆಲ್ಲರೂ ಪುಣ್ಯಕೋಟಿಗಾಗಿ, ಕರುವಿಗಾಗಿ ಕಣ್ಣಂಚಿನಲ್ಲಿ ನೀರು ತರಿಸಿದ ಪ್ರದರ್ಶನ ಇದಾಗಿತ್ತು. ಪುಣ್ಯಕೋಟಿಯ ಹಾಡಿನ ಪ್ರತಿಯೊಂದು ಸಾಲುಗಳಿಗೂ ತಮ್ಮ ಭಾವನೆಗಳನ್ನು ತುಂಬಿ ಅರ್ಥಪೂರ್ಣವಾಗಿ ಪ್ರದರ್ಶಿಸಿ ಮುಕ್ತ ಪ್ರಶಂಸೆಗೆ ವಿದ್ಯಾರ್ಥಿಗಳು ಪಾತ್ರರಾದರು.
ಸತ್ಯನಿಷ್ಠೆ, ಧರ್ಮನಿಷ್ಠೆಯನ್ನೇ ತನ್ನ ಜೀವಾಳ ವಾಗಿಸಿಕೊಂಡ ಗೋವನ್ನು ಆಧರಿಸಿಕೊಂಡ ಕಥೆ ಪುಣ್ಯಕೋಟಿಯದ್ದು. ಮನೋಜ್ಞ ಭಾಗವತಿಕೆಗೆ ಸರಿಯಾದ ಭಾವ-ಅನುಭಾವ, ತಾಳಕ್ಕೆ ತಕ್ಕಂತೆ ಹೆಜ್ಜೆ-ಗೆಜ್ಜೆ, ರಂಗಕ್ಕೆ ತಕ್ಕುದಾದ ದೃಶ್ಯ-ಶ್ರಾವ್ಯಗಳು ಸಮ್ಮಿಲನಗೊಂಡು ಇಡೀ ನೃತ್ಯರೂಪಕ ಅದ್ಭುತವಾಗಿ ಮೂಡಿ ಮಂತ್ರಮುಗ್ಧಗೊಳಿಸಿದ ಪ್ರದರ್ಶನವಾಯಿತು. ಪುಣ್ಯಕೋಟಿ ಹಾಗೂ ಹುಲಿಯ ಪಾತ್ರಗಳ ಅದ್ಭುತ ನಟನೆ ಇಡೀ ರೂಪಕದ ಅಂದವನ್ನು ಮತ್ತಷ್ಟು ಹೆಚ್ಚಿಸಿತು. ಗೊಲ್ಲನ ಪಾತ್ರಧಾರಿ ಕುಮಾರಿ ನಿರೀಕ್ಷಾ ಅವರು ದನ-ಕರುಗಳೊಂದಿಗೆ ತೋರಿದ ಮಮತೆಯ ಅವಿನಾಭಾವ ಸಂಬಂಧ ಮೂಕವಿಸ್ಮಿತರನ್ನಾಗಿಸಿತು.
ಕರುವಿನ ಪಾತ್ರ ನಿರ್ವಹಿಸಿದ ಕುಮಾರಿ ಅಮೃತಾ, ತಾಯಿ ಪುಣ್ಯಕೋಟಿಯೊಂದಿಗೆ ಅಮ್ಮಾ ನೀನು ಸಾಯಲೇಕೆ? ನನ್ನ ತಬ್ಬಲಿ ಮಾಡಲೇಕೆ? ಎಂಬ ದುಃಖಭರಿತ ಹಾಡಿನ ಸಾಲಿಗೆ ಭಾವಪೂರ್ಣವಾಗಿ ಅಭಿನಯಿಸಿ, ಎಲ್ಲರ ಮಾತೃಹೃದಯ ಕರಗುವಂತೆ ಮಾಡಿತು. ಹುಲಿಯ ಪಾತ್ರದಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯ ಇವರು ಪಾತ್ರಕ್ಕೆ ತಕ್ಕುದಾಗಿ ಕ್ರೌರ್ಯ, ರೌದ್ರತೆಯನ್ನು ಅದ್ಭುತವಾಗಿ ಅಭಿನಯಿಸಿದರು. ಹಸಿದ ವೇಳೆಗೆ ಸಿಕ್ಕಿದೊಡವೆಯನ್ನು ಹಿಡಿಯುವ ರೀತಿ, ಪುಣ್ಯಕೋಟಿಯ ಭರವಸೆಯ ಮಾತುಗಳಿಗೆ ಒಪ್ಪಿ ಕಳುಹಿಸಿಕೊಡುವಾಗ ಅಂತಹ ಘೋರ ಪ್ರಾಣಿ ಹುಲಿಯಲ್ಲಿ ಕಂಡುಬಂದ ದಯಾಪರತೆ ನಂತರ ಕೊನೆಗೆ ಕೊಟ್ಟ ಮಾತಿಗೆ ತಪ್ಪದೆ ಮರಳಿದ, ಸತ್ಯಕ್ಕಾಗಿ ಪ್ರಾಣಾರ್ಪಣಕ್ಕೂ ಹಿಂಜರಿಯದ ಧೇನುವಿಗಾಗಿ ಹುಲಿ ಪ್ರಾಣ ತ್ಯಾಗ ಮಾಡುವ ಕರುಣಾದ್ರ ಸ್ಥಿತಿ ಭಾವಪರವಶರಾಗುವಂತೆ ಮಾಡಿತು.
ಇಡೀ ರೂಪಕದ ಕೇಂದ್ರ ಬಿಂದುವಾದ ಪುಣ್ಯಕೋಟಿಯ ಪಾತ್ರಕ್ಕೆ ಜೀವ ತುಂಬಿದ ವಿದ್ಯಾರ್ಥಿನಿ ಕು| ಪದ್ಮಶ್ರೀಯ ಭಾವಪೂರ್ಣ ಅಭಿನಯ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಕರುಳ ಕುಡಿಯನ್ನು ತಬ್ಬಲಿಯನ್ನಾಗಿಸಿ ಹುಲಿಗೆ ಆಹಾರವಾಗಲು ತೆರಳುವ ಸನ್ನಿವೇಶ ಸಹ ಕಲಾವಿದೆಯರೂ, ಇಡೀ ಸಭೆಯೂ ಕಣ್ಣೀರು ಸುರಿಸುವಂತಾಯಿತು.
ಕರು ಮತ್ತು ಪುಣ್ಯಕೋಟಿಯ ಸಂಭಾಷಣೆ, ಮಗುವಿನ ತಬ್ಬಲಿತನವನ್ನು ಅರ್ಥೈಸಿ ಅಕ್ಕ-ತಂಗಿ ಧೇನುಗಳಿಗೆ ಕಂದನ ಹೊಣೆಯನ್ನು ಹೊರಿಸಿ, ತಾನು ಹುಲಿಯ ಬಾಯಿಗೆ ಆಹಾರವಾಗಿ ಹೊರಡುವ ಗಂಭೀರತೆ ಯಾರನ್ನೂ ಅಳಿಸುವಂತದಾಗಿತ್ತು. ಒಟ್ಟಿನಲ್ಲಿ ಈ ರೂಪಕ ಸಹೃದಯರ ಮನಮಿಡಿಯುವಂತೆ ಮಾಡಿತು. ಕೆ.ಜೆ. ಸಹೋದರರ ಹಿಮ್ಮೇಳ ಸಹಕಾರವಿತ್ತು.
ಪ್ರದೀತಾ ಶ್ರೀಕಾಂತ ಆಚಾರ್ಯ