Advertisement

Punjalkatte – ಚಾರ್ಮಾಡಿ ರಸ್ತೆ ಕೆಸರು ಗದ್ದೆ

01:55 PM Aug 09, 2024 | Team Udayavani |

ಬೆಳ್ತಂಗಡಿ: ಬಹು ನಿರೀಕ್ಷೆಯ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ 73ರ ದ್ವಿಪಥ ರಸ್ತೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಅವ್ಯವಸ್ಥೆ ಕಂಡು ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆದುಹೋಗಿದೆ. ರಾಜಕಾರಣಿ ಗಳ ಇಚ್ಛಾಶಕ್ತಿಯ ಕೊರತೆ, ಆಡಳಿತ ವ್ಯವಸ್ಥೆಯ ಮೌನದಿಂದಾಗಿ ಜನರು ಸಂಕಷ್ಟಪಡುವಂತಾಗಿದೆ. ಇವರನ್ನು ಹೇಳುವವರು ಕೇಳುವವರು ಯಾರೂ ಇಲ್ಲವೇ ಎನ್ನುವ ಆಕ್ರೋಶ ಭುಗಿಲೆದ್ದಿದೆ. ಸುಮಾರು 718 ಕೋಟಿ ರೂ. ಅನುದಾನದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾ. ಹೆ.ಯ 40 ಕಿ.ಮೀ. ನಿಂದ 75 ಕಿ.ಮೀ. ವರೆಗಿನ ವ್ಯಾಪ್ತಿಯ ದ್ವಿಪಥ ರಸ್ತೆ ರಚನೆಗೆ ಪೂರಕವಾಗಿ ಭೂ ಸಮತಟ್ಟು ಕೆಲಸ ಮಳೆಗಾಲದ ಮುನ್ನ ಆರಂಭಗೊಂಡಿತ್ತು. ಖಾಸಗಿ ಭೂಮಿ ಸಮತಟ್ಟು ಗೊಳಿಸಿ ಇದ್ದ ರಸ್ತೆ ತೆರವುಗೊಳಿಸಿ ಮಣ್ಣಿನ ರಸ್ತೆ ನಿರ್ಮಿಸಿ ಬಿಟ್ಟಿರುವುದು ಸದ್ಯ ಸಂಚಾರವನ್ನು ಮೂರಾಬಟ್ಟೆ ಮಾಡಿದೆ.

Advertisement

ಎಲ್ಲೆಲ್ಲಿ ಭಯಾನಕ ಪರಿಸ್ಥಿತಿ?

ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಎಲ್ಲ ಕಡೆ ರಸ್ತೆ ಹಾಳಾಗಿ ಹೋಗಿದೆ. ಅದರಲ್ಲೂ ಪುಂಜಾಲಕಟ್ಟೆ, ಮಡಂತ್ಯಾರು, ಮಾಲಾಡಿ, ಗುರುವಾಯನಕರೆ, ಕುವೆಟ್ಟು, ಸೋಣಂದೂರು, ಕಾಶಿಬೆಟ್ಟು, ಟಿ.ಬಿ.ಕ್ರಾಸ್‌, ಅನುಗ್ರಹ ಶಾಲೆ, ಮುಂಡಾಜೆ ಸೀಟು, ಸೋಮಂತಡ್ಕಗಳಲ್ಲಂತೂ ಪರಿಸ್ಥಿತಿ ಭಯಾನಕವಾಗಿದೆ. ಲಾರಿಗಳೇ ಈ ಕೆಸರಿ ನಲ್ಲಿ ಹೂತು ಹೋಗುತ್ತಿವೆ. ಇನ್ನು ದ್ವಿಚಕ್ರ ಸವಾರರ ಪರದಾಟ ದೇವರಿಗೇ ಪ್ರೀತಿ. ವಾಹನಿಗರು ಎಲ್ಲ ರೀತಿಯ ತೆರಿಗೆ ನೀಡಿ ವಾಹನ ಖರೀದಿಸುತ್ತಾರೆ. ರಸ್ತೆ ಸಂಚಾರಕ್ಕೆ ತೆರಿಗೆ ಕಟ್ಟುತ್ತಾರೆ. ಆದರೆ, ರಸ್ತೆ ಯಲ್ಲಿ ಸುರಕ್ಷತೆಯೇ ಇಲ್ಲ ಎನ್ನುವ ಸ್ಥಿತಿ ಇಲ್ಲಿದೆ.

ಮುಂಡಾಜೆ ಸೀಟು ನಿತ್ಯ ಪರದಾಟ

ಗುತ್ತಿಗೆ ವಹಿಸಿಕೊಂಡಿರುವ ನಾಗಪುರದ ಪ್ರಸಿದ್ಧ ಗುತ್ತಿಗೆದಾರರಾದ ಡಿ.ಬಿ.ಜೈನ್‌ ಕಂಪೆನಿ ಮುಂಡಾಜೆ ಸುತ್ತಮುತ್ತ ಹಾಕಿರುವ ಜಲ್ಲಿ ರಾಶಿಯಲ್ಲಿ ಸಂಪೂರ್ಣ ರಸ್ತೆಯನ್ನೇ ನಿರ್ಮಿಸಬಹುದಿತ್ತು. ಆದರೆ ತೀವ್ರ ಮಳೆಗೆ ಎಷ್ಟೇ ಸರಿಪಡಿಸಿದರೂ ನಿಲ್ಲುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ರಸ್ತೆಗೆ ಕಾಲಿಟ್ಟರೆ ಹೂತು ಹೋಗುವ ಸ್ಥಿತಿಯಿದೆ. ಈ ಬಗ್ಗೆ ರಾಜಕೀಯ ನಾಯಕರನ್ನು ಕೇಳಿದರೆ ಮಳೆಗಾಲ ವರೆಗೆ ಸುಧಾರಿಸಿಕೊಳ್ಳಿ ಎನ್ನುತ್ತಾರೆ. ಹಾಗಿ ದ್ದರೆ ಮಳೆಗಾಲಕ್ಕೆ ಮೊದಲು ಯಾಕೆ ಕೆಲಸ ಮುಗಿಸಿಲ್ಲ, ಅಥವಾ ಮಳೆಗಾಲಕ್ಕೆ ಮೊದಲು ಇಡೀ ರಸ್ತೆಯನ್ನು ಹೀಗೆ ಅಗೆದು ಹಾಕಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಅಗೆದು ಹಾಕಿರುವ ಸ್ಥಳವನ್ನಾದರು ಡಾಂಬರೀಕರಣ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶ.

Advertisement

ಗುತ್ತಿಗೆದಾರ ನಾಪತ್ತೆ;

ನೌಕರರಿಂದ ಮುಷ್ಕರ ಗುತ್ತಿಗೆದಾರ ಕಂಪೆನಿ ತನ್ನ ನೌಕರರನ್ನು ದುಡಿಸುವಷ್ಟು ದುಡಿಸಿ ಸಂಬಳ ನೀಡದೆ ಕೈಚೆಲ್ಲಿ ಕುಳಿತಿದೆ. ಗುತ್ತಿಗೆದಾರ ಎಂಜಿನಿಯರ್‌ಗಳ ಕರೆ ಸ್ವೀಕರಿಸಿದೆ ಭೂಗತವಾಗಿದ್ದಾನೆ. ಈ ಪ್ರದೇಶದ ಸ್ಥಿತಿಗತಿ ಕುರಿತು ತಿಳಿಸಿ ಕಾಮಗಾರಿ ನಡೆಸಬೇಕಿದ್ದ ಹೆದ್ದಾರಿ ಇಲಾಖೆ ಸುಮ್ಮನಿದೆ. ಗುತ್ತಿಗೆದಾರರನ್ನು ಅಮಾನತುಗೊಳಿಸಬೇಕು, ಬ್ಲ್ಯಾಕ್‌ ಲಿಸ್ಟ್‌ಗೆ ಹಾಕಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ರಸ್ತೆಯ ಅವ್ಯವಸ್ಥೆ ಕಂಡು ಮಡಂತ್ಯಾರಿನ ವರ್ತಕರು ತಾವೇ ಶ್ರಮದಾನ ಮಾಡುವ ಮೂಲಕ ಹೆದ್ದಾರಿ ದುರಸ್ತಿಗೆ ಮುಂದಾಗಿದ್ದಾರೆ.

ಎಂಥಾ ಪರಿಸ್ಥಿತಿ ಇದೆ ಎಂದರೆ…

ಸೋಮಂತಡ್ಕ ರಸ್ತೆಯಲ್ಲಿ ಲಾರಿ ಮೊದಲಾದ ದೊಡ್ಡ ವಾಹನಗಳೇ ಹೂತುಹೋಗಿ ಸಂಚಾರ ಬ್ಲಾಕ್‌ ಆಗುತ್ತಿದೆ.

ಮುಂಡಾಜೆ ಸೀಟು ಭಾಗದಲ್ಲಿ ರಸ್ತೆಯ ಹೊಂಡಗಳಿಗೆ ಬಿದ್ದು ಒದ್ದಾಡುವ ವಾಹನಗಳನ್ನು ಬೇರೆ ವಾಹನದವರು, ಸ್ಥಳೀಯರು ತಳ್ಳಿ ಮೇಲೆತ್ತಬೇಕಾದ ಪರಿಸ್ಥಿತಿ ಇದೆ.

ಕಾಶಿಬೆಟ್ಟು, ಮಡಂತ್ಯಾರಿನಲ್ಲಿ ಗುರುವಾರವೂ ಲಾರಿ, ಬಸ್‌ಗಳು ಕೆಸರಿನಲ್ಲಿ ಮುಂದೆ ಚಲಿಸಲು ಆಗದೆ ಸಿಕ್ಕಿಹಾಕಿಕೊಂಡವು.

ಸರಕಾರಿ, ಖಾಸಗಿ ಬಸ್‌ ಮತ್ತು ಶಾಲಾ ಬಸ್‌ಗಳ ಕಥೆ ಯಂತೂ ಹೇಳತೀರದಾಗಿದೆ.

ದ್ವಿಚಕ್ರ ವಾಹನಗಳಂತೂ ಈ ರಸ್ತೆ ಯಲ್ಲಿ ಸಾಗುವ ಹಾಗೇ ಇಲ್ಲ. ಹೀಗಾಗಿ ಹೆಚ್ಚಿನವರು ಬಸ್‌ಗೆ ಶಿಫ್ಟ್ ಆಗಿದ್ದಾರೆ.

ದ್ವಿಚಕ್ರ ವಾಹನಗಳಲ್ಲಿ ಇದುವರೆಗೆ 80ರಷ್ಟು ಅಪಘಾತಗಳು ಸಂಭವಿಸಿವೆ, ಕೆಲವರ ಬೆನ್ನುಮೂಳೆಯೂ ಮುರಿದಿದೆ.

ಆ್ಯಂಬುಲೆನ್ಸ್‌ನಲ್ಲೇ ಜೀವ ಹೋಗುವಸ್ಥಿತಿ ಇಲ್ಲಿದೆ !

ತುರ್ತಾಗಿ ಸಾಗಬೇಕಾದ ಆ್ಯಂಬು ಲೆನ್ಸ್‌ಗಳು ಕೆಸರಿನಲ್ಲಿ ಸಿಕ್ಕಾಕಿಕೊಂಡಿ ದ್ದನ್ನು ನೋಡಿದರೆ, ಆ್ಯಂಬುಲೆನ್ಸ್‌ ನಲ್ಲೇ ಜೀವ ಹೋಗುವ ಪರಿಸ್ಥಿತಿ ಇರುವಂತೆ ಕಾಣುತ್ತಿದೆ.

ಆ್ಯಂಬುಲೆನ್ಸ್‌ ಅಥವಾ ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ಸಾಗಿಸಲು ಹರಸಾಹಸಪಡಬೇಕಾಗಿದೆ. ಮೂಳೆ ಮುರಿದ ಗಾಯಾಳುಗಳ ಇನ್ನಷ್ಟು ಮೂಳೆ ಮುರಿದು ಜೀವನ ಪರ್ಯಂತ ಸಮಸ್ಯೆಗೆ ಒಳಗಾಗುವ ಅಪಾಯವಿದೆ ಎನ್ನುತ್ತಾರೆ ಆ್ಯಂಬುಲೆನ್ಸ್‌ ಚಾಲಕರು.

ಹೆದ್ದಾರಿಯಲ್ಲೇ ಹಗ್ಗ ಜಗ್ಗಾಟ?!

ಮುಂಡಾಜೆ ಭಾಗದಲ್ಲಿ ಪರಿಸ್ಥಿತಿ ಯಾವ ಹಂತದಲ್ಲಿದೆ ಎಂದರೆ ಕೆಸರುಗದ್ದೆಗಿಂತಲೂ ಕಡೆಯಾಗಿದೆ. ಇಲ್ಲಿ ಹೆದ್ದಾರಿಯಲ್ಲೇ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಿ ಪ್ರತಿಭಟನೆ ಸಲ್ಲಿಸಲು ಯುವಕರು ಮುಂದಾಗಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮಾಡಿರುವ ಅವಾಂತರ ನಡುವೆ ಇರುವ ರಸ್ತೆಗಳು ಹೊಂಡಮಯವಾಗಿರುವುದರಿಂದ ರೋಗಿಗಳನ್ನು ಕರೆದೊಯ್ಯುವುದು ಸವಾಲಾಗಿದೆ. 40 ನಿಮಿಷದಲ್ಲಿ ಮಂಗಳೂರಿಗೆ ಹೋಗುತ್ತಿದ್ದ ನಮಗೆ ಈಗ 90 ನಿಮಿಷ ಬೇಕಾಗುತ್ತದೆ. ಅದೂ ಒಮ್ಮೊಮ್ಮೆ ಸಾಲುವುದಿಲ್ಲ. ಹೊಂಡಕ್ಕೆ ಬೀಳುವುದರಿಂದ ಮೂಳೆ ಮುರಿತಕ್ಕೆ ಒಳಗಾದವರನ್ನು, ಸಮಯಕ್ಕೆ ಸರಿಯಾಗಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ.

-ಹಮೀದ್‌, ಸಮುದಾಯ ಆಸ್ಪತ್ರೆ ಆ್ಯಂಬುಲೆನ್ಸ್‌ ಚಾಲಕ

ಉಜಿರೆ-ಜಿ.ಕೆರೆ: 30 ಮೀ. ವಿಸ್ತರಣೆ

ಗುರುವಾಯನಕೆರೆಯಿಂದ ಉಜಿರೆವರೆಗೆ ಸರ್ವೀಸ್‌ ರಸ್ತೆ ಒಳಗೊಂಡಂತೆ 30 ಮೀಟರ್‌ ರಸ್ತೆ ವಿಸ್ತರಣೆಯಾಗಲಿದೆ. ಪ್ರಸಕ್ತ ನಿರ್ಮಿಸಿರುವ ಚರಂಡಿಯಲ್ಲಿ ಹೂಳು ತುಂಬಿದೆ. ಮುಂದೆ ಇದು ಉಪಯೋಗಕ್ಕೆ ಬರುವುದೇ ಆನುಮಾನ ಎಂಬಂತಾಗಿದೆ.

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next