Advertisement
ಶ್ರೀಕ್ಷೇತ್ರ ಪೂಂಜ ಇದರ ಆಸ್ರಣ್ಣ ಪ್ರಕಾಶ್ ಆಚಾರ್ಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕುಡುಬಿ ಸಮು ದಾಯ ದವರು ಸಂಪ್ರದಾಯ ಪ್ರಕಾರ ಬೆಳಗ್ಗೆಯಿಂದ ಸಂಜೆ ವರೆಗೆ ದೇವಸ್ಥಾನದಲ್ಲಿ ಕುಡುಬಿಯವರ ವಿಶಿಷ್ಟ ಮರಾಠಿ ಭಾಷೆಯಲ್ಲಿ ರಾಮಾಯಣ, ಮಹಾಭಾರತ, ಪುರಾಣ ಕತೆ ಹಾಡುತ್ತಾ ನೃತ್ಯ ಮಾಡಿದರು. ತಲೆಗೆ ರುಮಾಲು (ಕೆಲವರು ಪೇಟ ಕಟ್ಟುತ್ತಾರೆ), ಅಬ್ಬಲ್ಲಿಗೆ, ಮಲ್ಲಿಗೆ ಹೂವಿನ ಮಾಲೆ, ಹಾಕಿಕೊಂಡು, ವಿಶೇಷ ವಾದ್ಯ ಗುಮ್ಮಟೆ ಬಡಿಯುತ್ತಾ ನೃತ್ಯ ಪ್ರದರ್ಶಿಸಿದರು. ಹುಲಿ, ಕರಡಿ, ಸಿಂಹ, ಹಂದಿ ಬೇಟೆ ವೇಷಗಳ ನೃತ್ಯ, ಗುಮ್ಮಟೆ-ಕೋಲಾಟ ಪ್ರದರ್ಶನ ನಡೆಯಿತು. ಶ್ರೀರಾಮ-ಸೀತಾ ಸ್ವಯಂವರ, ಕೋಲಾಟದಲ್ಲಿ ಸೇತುವೆ ಕಟ್ಟುವುದು ವಿಶಿಷ್ಟವಾಗಿತ್ತು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಓಕೋಳಿ ಅಗ್ನಿಸೇವೆಯೊಂದಿಗೆ ಮಂಗಳ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚಿಸಿ, ಶ್ರಮಿಕ ಸಮಾಜದ ಕಡುಬಿ ಸಮುದಾಯದವರು ಹೋಳಿಯನ್ನು ಸಮಾಜದ ಸಂಘಟನಾತ್ಮಕವಾದ ಧಾರ್ಮಿಕ ಕ್ರಿಯೆಯನ್ನಾಗಿ ಪರಿವರ್ತಿಸಿ ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಗುರಿಕಾರ ಪರಂಪರೆಯೊಂದಿಗೆ ತಮ್ಮೊಳಗಿರುವ ದ್ವೇಷ-
ಅಸೂಯೆಗಳನ್ನು ಮರೆತು ಒಂದಾಗಿರುವ ವ್ಯವಸ್ಥೆ ಈ ಹೋಳಿ ಹಬ್ಬದಲ್ಲಿದೆ. ಧಾರ್ಮಿಕತೆ ಹೆಸರಲ್ಲಿ ಆಚರಿಸಿಕೊಂಡು ಬರುತ್ತಿರುವ ಪರಂಪರೆಯನ್ನು ಉಳಿಸಿ-ಬೆಳೆಸಿದಲ್ಲಿ ನಮ್ಮ ಸಂಸ್ಕೃತಿ ಉಳಿದೀತು ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವಂತೆ ವಿನಂತಿಸಿದರು.