ಪುಂಜಾಲಕಟ್ಟೆ:ಚಂಡಮಾರುತ ಪ್ರಭಾವದಿಂದ ನಿರಂತರವಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಹಳೆಯ ಕಟ್ಟಡದ ಎರಡು ತರಗತಿ ಕೊಠಡಿಗಳ ಮೇಲ್ಛಾವಣಿ ಶುಕ್ರವಾರ ತಡರಾತ್ರಿ ಕುಸಿದು ಬಿದ್ದಿದೆ.
ಶನಿವಾರ ಬೆಳಗ್ಗೆ ಘಟನೆ ಗಮನಕ್ಕೆ ಬಂದಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಹಳೆಯ ಕಟ್ಟಡವನ್ನು ಕೆಡವಲು ಇಲಾಖೆಗೆ ಮನವಿ ಮಾಡಲಾಗಿತ್ತು. ಹಳೆಯ ಕಟ್ಟಡದಲ್ಲಿಈ ಹಿಂದೆ ಪಿಯುಸಿ ವಿಭಾಗದ ತರಗತಿಗಳು ನಡೆಯುತ್ತಿದ್ದು, ಮೇಲ್ಛಾವಣಿ ಶಿಥಿಲಗೊಂಡ ಕಾರಣ ಕಳೆದ ವರ್ಷದಿಂದ ತರಗತಿ ನಡೆಸುತ್ತಿರಲಿಲ್ಲ.
ಇದನ್ನೂ ಓದಿ : ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ
ಘಟನೆಯಿಂದ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, ಹೆಂಚುಗಳು ಚೂರಾಗಿದೆ. ಬೆಳಗ್ಗೆ ಶಾಲೆಗೆ ಆಗಮಿಸಿದ ಉಪ ಪ್ರಾಂಶುಪಾಲ ಉದಯ ಕುಮಾರ್ ಅವರು ಮರ ಮಟ್ಟುಗಳನ್ನು ಹಾಗೂ ಕೊಠಡಿಯಲ್ಲಿದ್ದ ಪೀಠೋಪಕರಣಗಳನ್ನು ತೆರವುಗೊಳಿಸಲು ವ್ಯವಸ್ಥೆ ಮಾಡಿದ್ದಾರೆ. ಇತರ ಕೊಠಡಿಗಳ ಮೇಲ್ಛಾವಣಿಗೆ ಹಾನಿಯಾಗದಂತೆ ಪ್ಲಾಸ್ಟಿಕ್ ಹೊದಿಕೆ ಹಾಸಲಾಗಿದೆ. ಘಟನೆಯ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದಿದ್ದು, ಹಳೆಯ ಕಟ್ಟಡವನ್ನು ಶೀಘ್ರ ಕೆಡವಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.
ಮಡಂತ್ಯಾರು ಗ್ರಾಮ ಪಂಚಾಯತ್ ಪಿಡಿಒ ನಾಗೇಶ್ , ಗ್ರಾಮ ಕರಣಿಕರ ಸಹಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾ.ಪಂ. ಸದಸ್ಯ ಹನೀಫ್ ಪುಂಜಾಲಕಟ್ಟೆ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ ಪ್ರಸಾದ ಸಂಪಿಗೆತ್ತಾಯ ಅವರು ಭೇಟಿ ನೀಡಿದರು.