Advertisement

ಆರ್‌ಸಿಬಿ ವಿರುದ್ಧ ರಾಹುಲ್‌, ಬ್ರಾರ್‌ ದರ್ಬಾರ್‌ ; ಪಂಜಾಬ್‌ ಗೆ 34 ರನ್‌ಗಳ ಜಯ

11:33 PM Apr 30, 2021 | Team Udayavani |

ಅಹ್ಮದಾಬಾದ್‌: ಕೊನೆಯ ತನಕವೂ ಕ್ರೀಸ್‌ ಆಕ್ರಮಿಸಿಕೊಂಡು ನಿಂತ ನಾಯಕ ಕೆ.ಎಲ್‌. ರಾಹುಲ್‌, ಸ್ಫೋಟಿಸಿದ ಕ್ರಿಸ್‌ ಗೇಲ್‌ ಹಾಗೂ ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಬೌಲಿಂಗ್‌ ದಾಳಿ ಸಂಘಟಿಸಿದ ಹರ್‌ಪ್ರೀತ್‌ ಬ್ರಾರ್‌ ಸಾಹಸದಿಂದ ಆರ್‌ಸಿಬಿ ಎದುರಿನ ಮಹತ್ವದ ಪಂದ್ಯದಲ್ಲಿ ಪಂಜಾಬ್‌ 34 ರನ್‌ ಜಯಭೇರಿ ಮೊಳಗಿಸಿದೆ.

Advertisement

ಪಂಜಾಬ್‌ 5 ವಿಕೆಟಿಗೆ 179 ರನ್‌ ಪೇರಿಸಿದರೆ, ನಾಟಕೀಯ ಕುಸಿತ ಅನುಭವಿಸಿದ ಕೊಹ್ಲಿ ಪಡೆ 8 ವಿಕೆಟಿಗೆ 145 ರನ್‌ ಗಳಿಸಿತು.
ಪಡಿಕ್ಕಲ್‌, ಮ್ಯಾಕ್ಸ್‌ವೆಲ್‌ ಮತ್ತು ಎಬಿಡಿ ಅವರ ಬ್ಯಾಟಿಂಗ್‌ ವೈಫಲ್ಯ ಆರ್‌ಸಿಬಿಗೆ ಮುಳುವಾಗಿ ಪರಿಣಮಿಸಿತು. ಇವರಲ್ಲಿ ಮ್ಯಾಕ್ಸ್‌ವೆಲ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ಕೊಹ್ಲಿ, ಮ್ಯಾಕ್ಸ್‌ವೆಲ್‌ ಮತ್ತು ಎಬಿಡಿ ವಿಕೆಟ್‌ಗಳನ್ನು ಎಡಗೈ ಸ್ಪಿನ್ನರ್‌ ಬ್ರಾರ್‌ ಕೇವಲ 19 ರನ್‌ ವೆಚ್ಚದಲ್ಲಿ ಉರುಳಿಸಿ ತಮ್ಮ ಐಪಿಎಲ್‌ ಪ್ರವೇಶವನ್ನು ಸ್ಮರಣೀಯಗೊಳಿಸಿದರು.
35 ರನ್‌ ಮಾಡಿದ ಕೊಹ್ಲಿ ಆರ್‌ಸಿಬಿ ಸರದಿಯ ಗರಿಷ್ಠ ಸ್ಕೋರರ್‌. ಪಾಟೀದಾರ್‌ ಮತ್ತು ಹರ್ಷಲ್‌ ಪಟೇಲ್‌ ತಲಾ 31 ರನ್‌ ಹೊಡೆದರು.

ರಾಹುಲ್‌ ಕಪ್ತಾನನ ಆಟ
ರಾಹುಲ್‌ ಅವರ ಕಪ್ತಾನನ ಆಟದಿಂದ ಪಂಜಾಬ್‌ ಸವಾಲಿನ ಮೊತ್ತ ಪೇರಿಸಿತು. 57 ಎಸೆತ ನಿಭಾಯಿಸಿದ ರಾಹುಲ್‌ 5 ಸಿಕ್ಸರ್‌, 7 ಬೌಂಡರಿ ನೆರವಿನಿಂದ ತಮ್ಮ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಗೇಲ್‌ ಗಳಿಕೆ 46 ರನ್‌. ಇವರಿಬ್ಬರನ್ನು ಹೊರತುಪಡಿಸಿದರೆ ಹರ್‌ಪ್ರೀತ್‌ ಬ್ರಾರ್‌ ಅವರ ಅಜೇಯ 25 ರನ್‌ ಅನಂತರದ ದೊಡ್ಡ ಮೊತ್ತವಾಗಿತ್ತು.

ಅಗರ್ವಾಲ್‌ ಬದಲು ಅವಕಾಶ ಪಡೆದ ಪ್ರಭ್‌ಸಿಮ್ರಾನ್‌ ಸಿಂಗ್‌ (7) ಅವರನ್ನು ಬೇಗನೇ ಕಳೆದುಕೊಂಡರೂ ಕ್ರಿಸ್‌ ಗೇಲ್‌ ಸಿಡಿದು ನಿಂತರು. ಕೈಲ್‌ ಜಾಮೀಸನ್‌ ಅವರ ಒಂದೇ ಓವರ್‌ನಲ್ಲಿ 5 ಬೌಂಡರಿ ಬಾರಿಸಿ ಅಬ್ಬರಿಸಿದರು. ಪವರ್‌ ಪ್ಲೇ ಅವಧಿಯಲ್ಲಿ 49 ರನ್‌ ಒಟ್ಟುಗೂಡಿತು.

Advertisement

ಇಲ್ಲಿಂದ ಮುಂದೆ ಪಂಜಾಬ್‌ ಬ್ಯಾಟಿಂಗ್‌ ಇನ್ನಷ್ಟು ಬಿರುಸುಗೊಂಡಿತು. ರಾಹುಲ್‌ ಕೂಡ ಮುನ್ನುಗ್ಗಿ ಬಾರಿಸತೊಡಗಿದರು. ಚಹಲ್‌ ಚೆನ್ನಾಗಿ ದಂಡಿಸಿಕೊಂಡರು. 10 ಓವರ್‌ ಮುಕ್ತಾಯಕ್ಕೆ ಒಂದೇ ವಿಕೆಟಿಗೆ 90 ರನ್‌ ಒಟ್ಟುಗೂಡಿಸಿದ ಪಂಜಾಬ್‌ ಬೃಹತ್‌ ಮೊತ್ತದ ಸೂಚನೆ ನೀಡಿತು. ರಾಹುಲ್‌-ಗೇಲ್‌ ಜೋಡಿಯಿಂದ 2ನೇ ವಿಕೆಟಿಗೆ 43 ಎಸೆತಗಳಿಂದ 80 ರನ್‌ ಸಂಗ್ರಹಗೊಂಡಿತು. 24 ಎಸೆತಗಳಿಂದ 46 ರನ್‌ ಮಾಡಿದ ಗೇಲ್‌ (6 ಬೌಂಡರಿ, 2 ಸಿಕ್ಸರ್‌) ವಿಕೆಟ್‌ ಸ್ಯಾಮ್ಸ್‌ ಪಾಲಾಯಿತು.

ಅನಂತರದ ಕ್ರೀಸ್‌ ಇಳಿದ ನಿಕೋಲಸ್‌ ಪೂರಣ್‌ ಅವರದು ಮತ್ತೂಂದು ಶೂನ್ಯ ಸಾಧನೆ ಎನಿಸಿತು. ಈ ಋತುವಿನ 6ನೇ ಪಂದ್ಯದಲ್ಲಿ ಅವರು 4ನೇ ಸೊನ್ನೆ ಸುತ್ತಿ ವಾಪಸಾದರು.

ಈ ನಡುವೆ ರಾಹುಲ್‌ ಅರ್ಧ ಶತಕ ಬಾರಿಸಿ ಮುನ್ನಡೆ ಯುತ್ತಿದ್ದರು. ಆದರೆ ದೀಪಕ್‌ ಹೂಡಾ (5) ವಿಫ‌ಲರಾದರು. ಶಾರೂಖ್‌ ಖಾನ್‌ ಖಾತೆ ತೆರೆಯುವ ಮೊದಲೇ ಚಹಲ್‌ ಬಲೆಗೆ ಬಿದ್ದರು. 15ನೇ ಓವರ್‌ ಅಂತ್ಯಕ್ಕೆ 119ಕ್ಕೆ 5 ವಿಕೆಟ್‌ ಕೀಳುವ ಮೂಲಕ ಆರ್‌ಸಿಬಿ ತಿರುಗಿ ಬಿತ್ತು. ಒಂದಕ್ಕೆ 99 ರನ್‌ ಬಾರಿಸಿ ದೊಡ್ಡ ಮೊತ್ತದ ಸೂಚನೆ ನೀಡಿದ್ದ ಪಂಜಾಬ್‌ 19 ರನ್‌ ಅಂತರದಲ್ಲಿ 4 ವಿಕೆಟ್‌ ಕಳೆದುಕೊಂಡಿತು.

ಆದರೆ ಡೆತ್‌ ಓವರ್‌ಗಳಲ್ಲಿ ರಾಹುಲ್‌-ಹರ್‌ಪ್ರೀತ್‌ ಬ್ರಾರ್‌ ಒಟ್ಟುಗೂಡಿದ ಬಳಿಕ ಮತ್ತೆ ಪಂಜಾಬ್‌ ರನ್‌ಗತಿಯಲ್ಲಿ ಮತ್ತೆ ಪ್ರಗತಿ ಕಂಡುಬಂತು. ಮುರಿಯದ 6ನೇ ವಿಕೆಟಿಗೆ 32 ಎಸೆತಗಳಿಂದ 61 ರನ್‌ ಹರಿದು ಬಂತು. 72 ರನ್‌ ಗಳಿಸಿದ ವೇಳೆ ರಾಹುಲ್‌ “ಆರೇಂಜ್‌ ಕ್ಯಾಪ್‌’ ಹೆಗ್ಗಳಿಕೆಗೆ ಪಾತ್ರರಾದರು.

ಕೊರೊನಾ: ನೆರವಿಗೆ ನಿಂತ ಪೂರಣ್‌, ಧವನ್‌, ಉನಾದ್ಕತ್‌
ಕೊರೊನಾ ವೈರಸ್‌ ವಿರುದ್ಧ ಭಾರತ ಸತತ ಹೋರಾಟ ನಡೆಸುತ್ತಿದ್ದು, ಇದಕ್ಕಾಗಿ ಐಪಿಎಲ್‌ನಿಂದ ದೊಡ್ಡ ಮಟ್ಟದ ಆರ್ಥಿಕ ನೆರವು ಹರಿದುಬರಲಾರಂಭಿಸಿದೆ. ಇದೀಗ ಯುವ ವಿಂಡೀಸ್‌ ಕ್ರಿಕೆಟಿಗ, ಪಂಜಾಬ್‌ ಕಿಂಗ್ಸ್‌ ತಂಡದ ನಿಕೋಲಸ್‌ ಪೂರಣ್‌ ಸರದಿ. ತಮ್ಮ ಐಪಿಎಲ್‌ ವೇತನದ ಒಂದು ಭಾಗವನ್ನು ಭಾರತದ ಕೋವಿಡ್‌ ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ನೀಡಲು ಮುಂದಾಗಿದ್ದಾರೆ. “ದಯವಿಟ್ಟು ಎಲ್ಲರೂ ಲಸಿಕೆ ಪಡೆದುಕೊಳ್ಳಿ. ನಾನು ಭಾರತಕ್ಕಾಗಿ ಪ್ರಾರ್ಥಿಸುವುದನ್ನು ಮುಂದು ವರಿಸುತ್ತಿದ್ದೇನೆ. ನನ್ನ ಐಪಿಎಲ್‌ ವೇತನದ ಒಂದು ಭಾಗವನ್ನು ಈ ಬಿಕ್ಕಟ್ಟಿನ ಸಮಯದಲ್ಲಿ ದೇಣಿಗೆ ನೀಡಲು ಬಯಸುತ್ತೇನೆ’ ಎಂದು ಪೂರಣ್‌ ತಿಳಿಸಿದ್ದಾರೆ. ಪೂರಣ್‌ ಅವರನ್ನು ಪಂಜಾಬ್‌ ಫ್ರಾಂಚೈಸಿ 4.2 ಕೋಟಿ ರೂ. ನೀಡಿ ಖರೀದಿಸಿತ್ತು.

ಉನಾದ್ಕತ್‌, ಧವನ್‌ ನೆರವು
ರಾಜಸ್ಥಾನ್‌ ರಾಯಲ್ಸ್‌ ತಂಡದ ವೇಗಿ ಜೈದೇವ್‌ ಉನಾದ್ಕತ್‌ ಕೂಡ ಕೋವಿಡ್‌ ವಿರುದ್ಧದ ಹೊರಾಟಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಐಪಿಎಲ್‌ ಸಂಭಾವನೆಯ ಶೇ. 10ರಷ್ಟು ನೆರವು ನೀಡುವುದಾಗಿ ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಕಾರ ಧವನ್‌ 20 ಲಕ್ಷ ರೂ. ನೀಡಿದ್ದಾರೆ.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಕೆ.ಎಲ್‌. ರಾಹುಲ್‌ ಔಟಾಗದೆ 91
ಪ್ರಭ್‌ಸಿಮ್ರಾನ್‌ ಸಿ ಕೊಹ್ಲಿ ಬಿ ಜಾಮೀಸನ್‌ 7
ಕ್ರಿಸ್‌ ಗೇಲ್‌ ಸಿ ಎಬಿಡಿ ಬಿ ಸ್ಯಾಮ್ಸ್‌ 46
ಪೂರಣ್‌ ಸಿ ಶಾಬಾಜ್‌ ಬಿ ಜಾಮೀಸನ್‌ 0
ದೀಪಕ್‌ ಹೂಡಾ ಸಿ ರಜತ್‌ ಬಿ ಶಾಬಾಜ್‌ 5
ಶಾರೂಖ್‌ ಖಾನ್‌ ಬಿ ಚಹಲ್‌ 0
ಹರ್‌ಪ್ರೀತ್‌ ಔಟಾಗದೆ 25
ಇತರ 5
ಒಟ್ಟು(5 ವಿಕೆಟಿಗೆ) 179
ವಿಕೆಟ್‌ ಪತನ: 1-19, 2-99, 3-107, 4-117, 5-118.
ಬೌಲಿಂಗ್‌; ಡೇನಿಯಲ್‌ ಸ್ಯಾಮ್ಸ್‌ 4-0-24-1
ಮೊಹಮ್ಮದ್‌ ಸಿರಾಜ್‌ 3-0-24-0
ಕೈಲ್‌ ಜಾಮೀಸನ್‌ 3-0-32-2
ಯಜುವೇಂದ್ರ ಚಹಲ್‌ 4-0-34-1
ಹರ್ಷಲ್‌ ಪಟೇಲ್‌ 4-0-53-0
ಶಾಬಾಜ್‌ ಅಹ್ಮದ್‌ 2-0-11-1

ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಬಿ ಹರ್‌ಪ್ರೀತ್‌ 35
ದೇವದತ್ತ ಪಡಿಕ್ಕಲ್‌ ಬಿ ಮೆರೆಡಿತ್‌ 7
ಪಾಟೀದಾರ್‌ ಸಿ ಪೂರಣ್‌ ಬಿ ಜೋರ್ಡನ್‌ 31
ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿ ಹರ್‌ಪ್ರೀತ್‌ 0
ಡಿ ವಿಲಿಯರ್ ಸಿ ರಾಹುಲ್‌ ಬಿ ಹರ್‌ಪ್ರೀತ್‌ 3
ಶಾಬಾಜ್‌ ಅಹ್ಮದ್‌ ಸಿ ಹರ್‌ಪ್ರೀತ್‌ ಬಿ ರವಿ 8
ಡೇನಿಯಲ್‌ ಸ್ಯಾಮ್ಸ್‌ ಬಿ ರವಿ 3
ಕೈಲ್‌ ಜಾಮೀಸನ್‌ ಔಟಾಗದೆ 16
ಹರ್ಷಲ್‌ ಪಟೇಲ್‌ ಸಿ ರವಿ ಬಿ ಶಮಿ 31
ಮೊಹಮ್ಮದ್‌ ಸಿರಾಜ್‌ ಔಟಾಗದೆ 0
ಇತರ 11
ಒಟ್ಟು(8 ವಿಕೆಟಿಗೆ) 145
ವಿಕೆಟ್‌ ಪತನ:1-19, 2-62, 3-62, 4-69, 5-91, 6-96, 7-96
ಬೌಲಿಂಗ್‌; ರಿಲೀ ಮೆರೆಡಿತ್‌ 3.2-0-29-1
ಮೊಹಮ್ಮದ್‌ ಶಮಿ 3.4-0-28-1
ರವಿ ಬಿಷ್ಣೋಯಿ 4-0-17-2
ಹರ್‌ಪ್ರೀತ್‌ ಬ್ರಾರ್‌ 4-1-19-3
ಕ್ರಿಸ್‌ ಜೋರ್ಡನ್‌ 4-0-31-1
ದೀಪಕ್‌ ಹೂಡಾ 1-0-13-0

Advertisement

Udayavani is now on Telegram. Click here to join our channel and stay updated with the latest news.

Next