Advertisement

2008ರಿಂದಲೇ ಇತ್ತು ನೀರವ್‌ ಹಗರಣ

06:00 AM Feb 22, 2018 | Team Udayavani |

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಉದ್ಯಮಿ ನೀರವ್‌ ಮೋದಿ ಮಾಡಿರುವ 11 ಸಾವಿರ ಕೋಟಿ ರೂ. ಮೋಸ, 2008ರಿಂದಲೇ ಪ್ರಾರಂಭವಾಗಿತ್ತು ಎಂದು ಬಂಧನಕ್ಕೊಳಗಾಗಿರುವ ಪಿಎನ್‌ಬಿ ಮುಂಬೈ ಶಾಖೆ ಮ್ಯಾನೇಜರ್‌ ಗೋಕುಲ್‌ನಾಥ ಶೆಟ್ಟಿ ಹೇಳಿದ್ದಾರೆ. 

Advertisement

ಮಂಗಳೂರಿನ ಮೂಲ್ಕಿ ಮೂಲದ ಶೆಟ್ಟಿ, ನೀರವ್‌ ಸಂಸ್ಥೆಗೆ ನಕಲಿ ಲೆಟರ್‌ ಆಫ್ ಅಂಡರ್‌ಸ್ಟಾಂಡಿಂಗ್‌ ನೀಡುತ್ತಿದ್ದರು. ಇದರ ಆಧಾರದಲ್ಲಿ ಸಂಸ್ಥೆ ಇತರ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿತ್ತು. ಈ ಪ್ರಕ್ರಿಯೆ 2008ರಿಂದಲೇ ನಡೆಯುತ್ತಿದೆ ಎಂದು ಶೆಟ್ಟಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. 2011ರಿಂದಲೂ ಈ ಅವ್ಯವಹಾರ ನಡೆಯುತ್ತಿದೆ ಎಂದು ಊಹಿಸಲಾಗಿತ್ತು.

ಈ ಮಧ್ಯೆ ಪಿಎನ್‌ಬಿ ಜನರಲ್‌ ಮ್ಯಾನೇಜರ್‌ ರಾಜೇಶ್‌ ಜಿಂದಾಲ್‌ ಅವರನ್ನು ಸಿಬಿಐ ಬಂಧಿಸಿದೆ. ಇವರು ಮುಂಬೈನ ಬ್ರಾಡಿ ಹೌಸ್‌ ಶಾಖೆಯಲ್ಲಿ 2009-11ರ ಅವಧಿಯಲ್ಲಿ ಜನರಲ್‌ ಮ್ಯಾನೇಜರ್‌ ಆಗಿದ್ದರು. ಇವರ ಅವಧಿಯಲ್ಲೇ ಹಗರಣ ಆರಂಭವಾಗಿದೆ ಎಂದು ಊಹಿಸಲಾಗಿದೆ.

ಜನಪ್ರಿಯತೆಗಾಗಿ ಪಿಐಎಲ್‌:
ಪಿಎನ್‌ಬಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಬೇಕು ಎಂದು ಆಗ್ರಹಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿರುದ್ಧ ಸುಪ್ರೀಂಕೋರ್ಟ್‌ ಕಿಡಿಕಾರಿದೆ. ಈ ಅರ್ಜಿಯನ್ನು ಜನಪ್ರಿಯತೆಗಾಗಿ ಸಲ್ಲಿಸಲಾಗಿದೆ. ದಿನಪತ್ರಿಕೆಗಳ ಶೀರ್ಷಿಕೆ ನೋಡಿಕೊಂಡು ಸಲ್ಲಿಸಲಾಗಿರುವ ಅರ್ಜಿ ಇದು ಎಂದು ಕಿಡಿಕಾರಿದ್ದಲ್ಲದೆ, ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಯಾವುದೇ ನಿರ್ದೇಶನ ನೀಡದಿರಲು ನಿರ್ಧರಿಸಿದೆ. ಅರ್ಜಿ ವಿಚಾರಣೆ ಮಾ.16ಕ್ಕೆ ಮುಂದೂಡಿದೆ.

ಶೋಧ ಮುಂದುವರಿಕೆ:
ಪ್ರಕರಣ ಬೆಳಕಿಗೆ ಬಂದ ವಾರದ ನಂತರವೂ ಜಾರಿ ನಿರ್ದೇಶನಾಲಯ ಶೋಧ ಮುಂದುವರಿಸಿದೆ. ಬುಧವಾರ 17 ಸ್ಥಳಗಳಲ್ಲಿ ಶೋಧ ನಡೆದಿದೆ. ಮುಂಬೈ ಸೇರಿ ದೇಶದ ವಿವಿಧ ಸ್ಥಳಗಳಲ್ಲಿ ನೀರವ್‌ ಹಾಗೂ ಗೀತಾಂಜಲಿ ಜೆಮ್ಸ್‌ ಮಾಲೀಕ ಮೆಹುಲ್‌ ಚೋಕ್ಸಿ ಒಡೆತನದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

Advertisement

ನಗದು ಹಿಂಪಡೆತ ಮಿತಿಯಿಲ್ಲ:
ಹಗರಣದಿಂದಾಗಿ ಗ್ರಾಹಕರ ನಗದು ಹಿಂಪಡೆತಕ್ಕೆ ಮಿತಿ ವಿಧಿಸಿದೆ ಎಂಬ ಊಹಾಪೋಹಗಳ ಮಧ್ಯೆ ಪಿಎನ್‌ಬಿ ಸ್ಪಷ್ಟನೆ ನೀಡಿದೆ. ಬ್ಯಾಂಕ್‌ನ ಹಣಕಾಸು ಸ್ಥಿತಿಗತಿ ಉತ್ತಮವಾಗಿದೆ. ಬ್ಯಾಂಕ್‌ಗೆ 123 ವರ್ಷಗಳ ಇತಿಹಾಸವಿದ್ದು, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದಿದೆ. ಈ ಸನ್ನಿವೇಶವನ್ನು ನಿರ್ವಹಿಸುವ ಸಾಮರ್ಥ್ಯ ಬ್ಯಾಂಕ್‌ಗಿದ್ದು, ಸಂಸ್ಥೆಯ ಹಿತಾಸಕ್ತಿಯನ್ನು ಕಾಯುತ್ತೇವೆ ಎಂದು ಬ್ಯಾಂಕ್‌ ನೋಟಿಸ್‌ ಪ್ರಕಟಿಸಿದೆ.

ಸುಸ್ತಿದಾರರಾದ ವಿಜಯ್‌ ಮಲ್ಯ, ಲಲಿತ್‌ ಮೋದಿ ಮತ್ತು ನೀರವ್‌ ಮೋದಿಯಂಥವರನ್ನು ಭಾರತದಿಂದ ಪ್ರಧಾನಿ ಮೋದಿ ಅದೃಶ್ಯಗೊಳಿಸಿ, ವಿದೇಶದಲ್ಲಿ ಪತ್ತೆ ಮಾಡಿದ್ದಾರೆ. ಮೋದಿ ನಮ್ಮ ಪ್ರಜಾಪ್ರಭುತ್ವವನ್ನೂ ಶೀಘ್ರದಲ್ಲೇ ಅದೃಶ್ಯಗೊಳಿಸಲಿದ್ದಾರೆ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next