ಚಂಡಿಗಢ: ನಮ್ಮಲ್ಲಿ ಎಷ್ಟೇ ಉನ್ನತಮಟ್ಟದ ಶಿಕ್ಷಣವನ್ನು ಪಡೆದರೂ ಅದಕ್ಕೆ ತಕ್ಕ ಉದ್ಯೋಗ ಸಿಗುವುದು ತುಸು ಕಷ್ಟ. ಸಿಕ್ಕರೂ ಶಿಕ್ಷಣ ಪಡೆದ ಎಲ್ಲರಿಗೂ ಅದೇ ಕ್ಷೇತ್ರದಲ್ಲಿ ಕೆಲಸ ಸಿಗುವುದು ಇನ್ನೂ ಕಷ್ಟ. ನಾಲ್ಕು ಸ್ನಾತಕೋತ್ತರ ಪದವಿಗಳು ಮತ್ತು ಪಿಎಚ್‌ಡಿಗಳನ್ನು ಪಡೆದಿರುವ ವ್ಯಕ್ತಿಯೊಬ್ಬರು ದಿನನಿತ್ಯದ ಜೀವನ ಸಾಗಿಸಲು ರಸ್ತೆ ಬದಿ ತರಕಾರಿ ಮಾರುವ ಸ್ಥಿತಿಗೆ ಬಂದಿದ್ದಾರೆ.
ಪಂಜಾಬ್ ಮೂಲದ 39 ವರ್ಷದ ಡಾ. ಸಂದೀಪ್ ಸಿಂಗ್ 11 ವರ್ಷಗಳ ಕಾಲ ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರಾಧ್ಯಾಪಕರಾಗಿದ್ದರು. ಎಲ್ಲವೂ ಅಂದುಕೊಂಡಂತೆ ಇದ್ದಿದ್ದರೆ ಅವರಿಂದು ತರಕಾರಿ ಮಾರುವ ಸ್ಥಿತಿಗೆ ಬರುತ್ತಿರಲಿಲ್ಲ.
ಕಾನೂನು ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ ಮತ್ತು ಪಂಜಾಬಿ, ಪತ್ರಿಕೋದ್ಯಮ ಮತ್ತು ರಾಜಕೀಯ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಈಗಲೂ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಪ್ರಾಧ್ಯಾಪಕರಾಗಿದ್ದ ಸಂದೀಪ್ ಅವರಿಂದು ತರಕಾರಿಯನ್ನು ಮಾರುತ್ತಿದ್ದಾರೆ. ʼಪಿಎಚ್ ಡಿ ಸಬ್ಜಿವಾಲಾʼ ಎನ್ನುವ ತಳ್ಳುಗಾಡಿಯಲ್ಲಿ ರಸ್ತೆಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ.
ಇದರ ಹಿಂದಿನ ಕಾರಣದ ಬಗ್ಗೆ ಮಾತನಾಡುವ ಅವರು, “ಸಂಬಳ ಕಡಿತ ಮತ್ತು ಸರಿಯಾದ ಸಮಯಕ್ಕೆ ವೇತನ ನೀಡುತ್ತಿರಲಿಲ್ಲ. ಇದರಿಂದ ಜೀವನ ಸಾಗಿಸುವುದು ಕಷ್ಟವಾಯಿತು. ಆ ಕಾರಣದಿಂದ ಕೆಲಸ ಬಿಡಬೇಕಾದ ಅನಿವಾರ್ಯತೆ ಎದುರಾಯಿತು. ನಿತ್ಯ ಜೀವನ ಸಾಗಿಸಲು ತರಕಾರಿ ಮಾರುವ ವ್ಯಾಪಾರವನ್ನು ಆರಂಭಿಸಿದೆ. ಪ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದ್ದೇನೆ. ನಿತ್ಯದ ವ್ಯಾಪಾರದ ಬಳಿಕ ಮನೆಗೆ ಹೋಗಿ ಪರೀಕ್ಷೆಗಾಗಿ ಓದುತ್ತೇನೆ. ಒಂದಲ್ಲ ಒಂದು ದಿನ ಹಣ ಉಳಿಸಿ ತನ್ನದೇ ಆದ ಟ್ಯೂಷನ್ ಸೆಂಟರ್ ನ್ನು ಆರಂಭಿಸಬೇಕೆನ್ನುವುದು ನನ್ನ ಉದ್ದೇಶ” ಎಂದು ಹೇಳುತ್ತಾರೆ.