ನವದೆಹಲಿ: ರಸ್ತೆ ಸಮೀಪದ ವ್ಯಾಪಾರಿಯೊಬ್ಬರ ಬಳಿ ಆರು ಟ್ರೇ ಮೊಟ್ಟೆ ಖರೀದಿಸಿದ ನಂತರ ಹಣವನ್ನು ಪಾವತಿಸದೇ ಕಾರಿನಲ್ಲಿ ಪರಾರಿಯಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಬಂದು ರಸ್ತೆ ಬದಿ ವ್ಯಾಪಾರಿಯಲ್ಲಿ ಆರು ಟ್ರೇ ಮೊಟ್ಟೆ ಕೊಡುವಂತೆ ಕೇಳಿದ್ದ. ಆ ವ್ಯಕ್ತಿ ಆರು ಟ್ರೇ ಮೊಟ್ಟೆಯನ್ನು ಕಟ್ಟಿ, ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಹೋಗಿ ಕೊಡುತ್ತಾರೆ. ನಂತರ ವ್ಯಾಪಾರಿ ಆನ್ ಲೈನ್ ಪೇಮೆಂಟ್ ಗಾಗಿ ಕ್ಯೂ ಆರ್ ಕೋಡ್ ಸ್ಕ್ಯಾನರ್ ಕೊಟ್ಟಿದ್ದರು. ಅದರಲ್ಲಿ ಪಾವತಿಯಾಗದಿರುವುದಕ್ಕೆ, ವ್ಯಾಪಾರಿ ವಾಪಸ್ ಬಂದು ಕ್ಯೂ ಆರ್ ಕೋಡ್ ಸ್ಟ್ಯಾಂಡಿ ತೆಗೆದುಕೊಂಡು ಹೋಗುವ ಮೊದಲೇ ಕಾರು ವೇಗವಾಗಿ ಹೊರಟು ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸುಮಾರು 2,100 ರೂಪಾಯಿ ಮೊತ್ತದ ಮೊಟ್ಟೆಯನ್ನು ಖರೀದಿಸಿ, ಒಂದು ರೂಪಾಯಿ ಹಣ ಕೊಡದೇ ಹೊರಟು ಹೋಗಿರುವುದಾಗಿ ಬೀದಿ ಬದಿ ವ್ಯಾಪಾರಿ ಅಲವತ್ತುಕೊಂಡಿದ್ದರು. ಬೀದಿ ಬದಿ ವ್ಯಾಪಾರಿಗೆ ಹಣ ಕೊಡದೇ ಪರಾರಿಯಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಪರಿಣಾಮ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ತೆರಳಿದ್ದ ವ್ಯಕ್ತಿ ಮರುದಿನ ವ್ಯಾಪಾರಿ ಬಳಿ ಬಂದು ಹಣ ಪಾವತಿಸಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ಮೊದಲು ಕೊಟ್ಟ ಕ್ಯೂ ಆರ್ ಕೋಡ್ ನಲ್ಲಿ ಹಣ ಪಾವತಿಯಾಗಿದೆ ಎಂದು ಭಾವಿಸಿ ನಾವು ಹೊರಟು ಹೋಗಿದ್ದೇವು. ಆದರೆ ನಂತರ ಆನ್ ಲೈನ್ ಪಾವತಿ ಪ್ರೊಸೆಸ್ ಫೇಲ್ ಆಗಿರುವುದು ತಿಳಿದು, ಮತ್ತೆ ವ್ಯಾಪಾರಿ ಬಳಿ ತೆರಳಿ ಹಣ ಪಾವತಿಸಿರುವುದಾಗಿ ಸಮಜಾಯಿಷಿ ನೀಡಿರುವುದಾಗಿ ವರದಿ ತಿಳಿಸಿದೆ.