ಪಂಜಾಬ್ ಮತ್ತೆ ಆತಂಕವಾದದ ಕಪಿಮುಷ್ಟಿಗೆ ಸಿಲುಕುವ ಅಪಾಯದಲ್ಲಿದೆಯೇ? ಇತ್ತೀಚೆಗೆ ಅಮೃತಸರದ ಸನಿಹದ ಹಳ್ಳಿಯೊಂದರಲ್ಲಿ ನಡೆದ ಬಾಂಬ್ ದಾಳಿಯಷ್ಟೇ ಅಲ್ಲ, ಕಳೆದ ಎರಡು ಮೂರು ವರ್ಷಗಳಿಂದ ವಿಶ್ವದಾದ್ಯಂತ ಖಲಿಸ್ತಾನ ಪರ ಶಕ್ತಿಗಳು ಬಲಿಷ್ಠವಾಗುತ್ತಿರುವುದೂ ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಭಾನುವಾರ ನಿರಂಕಾರಿ ಪಂಗಡದವರ ಧಾರ್ಮಿಕ ಸಮಾವೇಶವನ್ನು ಗುರಿ ಇರಿಸಿ ನಡೆದಿದ್ದ ಗ್ರೆನೇಡ್ ದಾಳಿಯಲ್ಲಿ ಮೂವರು ಬಲಿಯಾಗಿ ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.ಕೃತ್ಯವೆಸಗಿದವರಲ್ಲಿ ಒಬ್ಬ ಸಿಕ್ಕಿಬಿದ್ದಿದ್ದಾನೆ. ಮೇಲ್ನೋಟಕ್ಕೆ ಈ ಕೃತ್ಯದಲ್ಲಿ ಪಾಕಿಸ್ಥಾನದ ಕೈವಾಡವಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಈ ಅನುಮಾನಕ್ಕೆ ಕಾರಣವಿಲ್ಲವೆಂದಲ್ಲ, ಭಾರತವನ್ನು ಅಭದ್ರವಾಗಿಡಲು ಪಾಕಿಸ್ಥಾನದ ಐಎಸ್‌ಐ ಮತ್ತು ಪಾಕ್ ಸೇನೆ ಕೆ2(ಕಾಶ್ಮೀರಿ-ಖಲಿಸ್ತಾನಿ) ಎನ್ನುವ ತಂತ್ರವನ್ನು ಅನುಸರಿಸುತ್ತಾ ಬಂದಿದೆ. ಕಾಶ್ಮೀರಿ ಮತ್ತು ಖಲಿಸ್ಥಾನಿ ಉಗ್ರರನ್ನು ಒಂದಾಗಿಸಿ ಭಾರತದ ಮೇಲೆ ದಾಳಿ ಸಾರುವುದು ಈ ತಂತ್ರದ ಮೂಲ ಗುರಿ. ಕೆಲ ಸಮಯದಿಂದ ಪಂಜಾಬ್‌ನಲ್ಲಿ ಪಾಕಿಸ್ಥಾನಿ ಮತ್ತು ಕಾಶ್ಮೀರಿ ಜೈಷ್-ಎ-ಮಹಮ್ಮದ್ ಉಗ್ರರು ನುಸುಳಿರುವ, ಸಕ್ರಿಯವಾಗಿರುವ ಸುದ್ದಿಗಳು ಹೊರಬರುತ್ತಲೇ ಇವೆ. ಪಂಜಾಬ್ ಪೊಲೀಸರೂ ಕೂಡ ಭದ್ರತೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಆದರೆ ರಾಜಕೀಯ ಬೆಂಬಲ ಪೂರ್ಣವಾಗಿ ಇಲ್ಲದೇ, ಇದೆಲ್ಲವನ್ನೂ ತಡೆಯಲು ಪೊಲೀಸರಿಗೆ ಸಾಧ್ಯವಿಲ್ಲ.
80ರ ದಶಕದಲ್ಲಿ ಖಲಿಸ್ತಾನವಾದಿಗಳು ನಿರಂಕಾರಿ ಪಂಗಡದವರ ಮೇಲೆ ದಾಳಿ ಮಾಡಿಯೇ ತಮ್ಮ ಹಿಂಸಾಕಾಂಡ ಆರಂಭಿಸಿದ್ದು ನೆನಪಾಗುತ್ತದೆ. ಮೊದಲಿನಿಂದಲೂ ಖಲಿಸ್ಥಾನ ಪರ ಉಗ್ರರು ದುರ್ಬಲ ಸಮುದಾಯ ಗಳನ್ನೇ ಗುರಿಯಾಗಿಸುತ್ತಾ ಶಾಸನದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಾ ಬಂದಿವೆ. ಸತ್ಯವೇನೆಂದರೆ ಆಪರೇಷನ್ ಬ್ಲೂಸ್ಟಾರ್ ಮತ್ತು ಹಲವಾರು ವರ್ಷಗಳ ಪೊಲೀಸ್ ಕಾರ್ಯಾಚರಣೆಗಳಿಂದಾಗಿ ಖಲಿಸ್ಥಾನ ಸಮರ್ಥಕರ ಸಂಖ್ಯೆ ಕಡಿಮೆಯಾಗಿತ್ತು.ಆದರೆ ಕೆಲ ವರ್ಷಗಳಿಂದ ಪಂಜಾಬ್‌ನಲ್ಲಿ ಮತ್ತು ವಿಶ್ವದಲ್ಲಿ ಖಲಿಸ್ಥಾನಿ ಶಕ್ತಿಗಳು ಬಲಪಡೆದುಬಿಟ್ಟಿವೆ.
ದುರಂತವೆಂದರೆ, ಭಾರತದೊಂದಿಗೆ ಸ್ನೇಹದ ಸೋಗುಹಾಕುವ ರಾಷ್ಟ್ರಗಳೂ ಈ ಶಕ್ತಿಗಳಿಗೆ ಸೊಪ್ಪು ಹಾಕುತ್ತಿವೆ ಎನ್ನುವುದು. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬ್ರಿಟನ್‌ನಲ್ಲಿ “ಸಿಖ್ ಫಾರ್ ಜಸ್ಟಿಸ್’ ಗುಂಪು ಆಯೋಜಿಸಿದ್ದ ಖಲಿಸ್ತಾನ ಪರ ರ್ಯಾಲಿಯಲ್ಲಿ ನೂರಾರು ಜನ ಭಾಗವಹಿಸಿದ್ದರು. ಈ ರ್ಯಾಲಿಗೆ ಬ್ರಿಟನ್‌ನ ಅನೇಕ ರಾಜಕಾರಣಿಗಳು ಬಹಿರಂಗವಾಗಿ ಬೆಂಬಲ ನೀಡಿದರು ಎನ್ನುವುದೇ ಆಘಾತಕಾರಿ ವಿಷಯ.
ಇನ್ನು ಪಾಕಿಸ್ಥಾನದ ವಿಚಾರಕ್ಕೆ ಬರುವುದಾದರೆ, ನವೆಂಬರ್ 4ರಂದು ಐಎಸ್‌ಐನ ಮುಖ್ಯಸ್ಥ ಅಸೀಮ್ ಮುನೀರ್ ಅನೇಕ ಖಲಿಸ್ತಾನಿ ಉಗ್ರರ ಜೊತೆ ಸಭೆ ನಡೆಸಿದ್ದಷ್ಟೇ ಅಲ್ಲದೆ, ಅವರೆಲ್ಲರೂ “ಸಿಖ್ ಫಾರ್ ಜಸ್ಟಿಸ್’ಗೆ ಪೂರ್ಣ ಬೆಂಬಲ ಕೊಡಬೇಕೆಂದೂ ಹೇಳಿದ್ದಾರೆ ಎನ್ನುತ್ತಿವೆ ನಮ್ಮ ಗುಪ್ತಚರ ವರದಿಗಳು. ಸಿಖ್ ಫಾರ್ ಜಸ್ಟಿಸ್ ಸಂಘಟನೆ 2020ರಲ್ಲಿ ಖಲಿಸ್ತಾನಕ್ಕಾಗಿ ಜಾಗತಿಕ ಜನಮತ ಸಂಗ್ರಹಿಸುವ ಯೋಚನೆಯಲ್ಲಿದೆ. ಖಲಿಸ್ಥಾನ ಹೋರಾಟಕ್ಕೆ ಮತ್ತೆ ಜೀವ ಕೊಡಲು ಇಂಥ ಗುಂಪುಗಳಿಗೆ ಸೌದಿ ಅರೇಬಿಯಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಕೆನಡಾ, ಇಟಲಿ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಹಣ ಹರಿದು ಬರುತ್ತಿದೆ ಎನ್ನಲಾಗುತ್ತದೆ. ಅದರಲ್ಲೂ ಕೆನಡಾ ಪ್ರಧಾನಿ ಜಸ್ಟಿನ್ ಟ್ಯೂಡ್ನೂ ಅಂತೂ ಬಹಿರಂಗವಾಗಿಯೇ ಖಲಿಸ್ಥಾನಿ ಪರ ವ್ಯಕ್ತಿಗಳೊಂದಿಗೆ ಕಾಣಿಸಿಕೊಳ್ಳುವವರು!
ದುರಂತವೆಂದರೆ, ಈ ವಿಷಯವನ್ನು ಕೆಲ ವರ್ಷಗಳಿಂದ ಪಂಜಾಬ್ ಅಥವಾ ಕೇಂದ್ರ ಸರ್ಕಾರವಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಪಂಜಾಬ್‌ನ ಅನೇಕ ರಾಜಕಾರಣಿಗಳು ತಾತ್ಕಾಲಿಕ ಲಾಭಕ್ಕಾಗಿ ಕಟ್ಟರ್‌ಪಂಥಿಗಳ ಎದುರು ತಲೆಬಾಗುತ್ತಲೇ ಬಂದವರು. ಪೂರ್ವ ಮುಖ್ಯಮಂತ್ರಿ ಬಿಅಂತ್ ಸಿಂಗ್ ಹತ್ಯೆಯ ದೋಷಿ ರಾಜೌನಾ ಮತ್ತು ದೆಹಲಿ ಸ್ಫೋಟದ ದೋಷಿ ಭುಲ್ಲರ್‌ಗೆ ನೇಣುಶಿಕ್ಷೆಯಾಗುವುದನ್ನು ತಡೆಯಲು ಅಕಾಲಿ ಸರ್ಕಾರ ಕಸರತ್ತು ನಡೆಸಿದಾಗ ಖಲಿಸ್ಥಾನಿ ಪರ ಶಕ್ತಿಗಳಿಗೆ ಮತ್ತಷ್ಟು ಬಲ ಸಿಕ್ಕಿತು. ಕಾಂಗ್ರೆಸ್ ಸರ್ಕಾರ ಕೂಡ ದೈವನಿಂದನೆ ಕಾನೂನು ತಂದು ಅದೇ ಶಕ್ತಿಗಳನ್ನು ಸಂತುಷ್ಟಗೊಳಿಸಲು ಪ್ರಯತ್ನಿಸಿತು. ಇದೆಲ್ಲದರ ಫಲಿತಾಂಶ ಕಣ್ಣೆದುರಿದೆ. ಪಂಜಾಬ್ ಸರಿದಾರಿಗೆ ಬರಬೇಕೆಂದರೆ ಖಲಿಸ್ಥಾನಿ ಶಕ್ತಿಗಳ ವಿರುದ್ಧ ಪಂಜಾಬ್‌ನ ರಾಜಕೀಯ ಪಕ್ಷಗಳೆಲ್ಲವೂ ಒಂದಾಗಬೇಕು(ಮುಖ್ಯವಾಗಿ ಕಾಂಗ್ರೆಸ್, ಅಕಾಲಿ ದಳ ಮತ್ತು ಆಮ್ ಆದ್ಮಿ ಪಾರ್ಟಿ).
ಇತ್ತ ಭಾರತ ಸರ್ಕಾರವೂ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಸೌದಿ, ಇಟಲಿ, ಅಮೆರಿಕ ಸೇರಿದಂತೆ, ಖಲಿಸ್ಥಾನ ಪರ ಶಕ್ತಿಗಳಿಗೆ ಬೆನ್ನುತಟ್ಟುತ್ತಿರುವ ದೇಶಗಳಿಗೆಲ್ಲ ಖಡಕ್ ಎಚ್ಚರಿಕೆ ಕಳುಹಿಸಲೇಬೇಕಿದೆ. ಇಲ್ಲದಿದ್ದರೆ ಪಂಜಾಬ್ ಮತ್ತೂಂದು ಕಾಶ್ಮೀರವಾಗುವುದರಲ್ಲಿ ಹೆಚ್ಚು ಕಾಲ ಹಿಡಿಯದು.