Advertisement

ಐಪಿಎಲ್‌: ಗುಜರಾತ್‌ ಟೈಟಾನ್ಸ್‌ ಗೆ ಬಿಸಿ ಮುಟ್ಟಿಸಿದ ಪಂಜಾಬ್‌ ಕಿಂಗ್ಸ್‌

11:27 PM May 03, 2022 | Team Udayavani |

ಮುಂಬಯಿ: ಪಂಜಾಬ್‌ ಕಿಂಗ್ಸ್‌ ತಂಡದ ಬಿಗಿ ದಾಳಿಗೆ ಪರದಾಡಿ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದ ಗುಜರಾತ್‌ ಟೈಟಾನ್ಸ್‌ ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ 8 ವಿಕೆಟ್‌ ಸೋಲಿಗೆ ತುತ್ತಾಗಿದೆ.

Advertisement

ಇದು ಅಗ್ರಸ್ಥಾನಿ ಗುಜರಾತ್‌ಗೆ 10 ಪಂದ್ಯಗಳಲ್ಲಿ ಎದುರಾದ ಕೇವಲ 2ನೇ ಸೋಲು. ಇನ್ನೊಂದೆಡೆ ಪಂಜಾಬ್‌ 10 ಪಂದ್ಯಗಳಲ್ಲಿ 5ನೇ ಜಯ ಸಾಧಿಸಿ 5ನೇ ಸ್ಥಾನಕ್ಕೆ ನೆಗೆಯಿತು.

ಗುಜರಾತ್‌ 8 ವಿಕೆಟಿಗೆ 143 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಪಂಜಾಬ್‌ 16 ಓವರ್‌ಗಳಲ್ಲಿ ಎರಡೇ ವಿಕೆಟ್‌ ನಷ್ಟದಲ್ಲಿ 145 ರನ್‌ ಬಾರಿಸಿತು. ಆಗ ಶಿಖರ್‌ ಧವನ್‌ 62 ರನ್‌ (53 ಎಸೆತ, 8 ಬೌಂಡರಿ, 1 ಸಿಕ್ಸರ್‌) ಮತ್ತು ಇಂಗ್ಲೆಂಡಿನ ಬಿಗ್‌ ಹಿಟ್ಟರ್‌ ಲಿಯಮ್‌ ಲಿವಿಂಗ್‌ಸ್ಟೋನ್‌ 30 ರನ್‌ ಬಾರಿಸಿ ಅಜೇಯರಾಗಿದ್ದರು.

ಕೊನೆಯ 5 ಓವರ್‌ಗಳಲ್ಲಿ ಪಂಜಾಬ್‌ ಜಯಕ್ಕೆ 27 ರನ್‌ ಅಗತ್ಯವಿತ್ತು. ಆದರೆ ಲಿವಿಂಗ್‌ಸ್ಟೋನ್‌ ಇದನ್ನು ಒಂದೇ ಓವರ್‌ನಲ್ಲಿ ಸಿಡಿಸಿ 4 ಓವರ್‌ ಬಾಕಿ ಇರುವಾಗಲೇ ಗುಜರಾತ್‌ಗೆ ಬಲವಾದ ಗುದ್ದು ಕೊಟ್ಟರು.

ಮೊಹಮ್ಮದ್‌ ಶಮಿ ಎಸೆದ 16ನೇ ಓವರ್‌ನಲ್ಲಿ ಸಿಡಿದು ನಿಂತ ಲಿವಿಂಗ್‌ಸ್ಟೋನ್‌ 28 ರನ್‌ ಸೂರೆಗೈದರು. ಮೊದಲು ಹ್ಯಾಟ್ರಿಕ್‌ ಸಿಕ್ಸರ್‌, ಬಳಿಕ ಫೋರ್‌, ಅನಂತರ 2 ರನ್‌, ಕೊನೆಯಲ್ಲಿ ಮತ್ತೊಂದು ಫೋರ್‌… ಹೀಗೆ ಸಾಗಿತ್ತು ಲಿವಿಂಗ್‌ಸ್ಟೋನ್‌ ಅಬ್ಬರ. ಅಲ್ಲಿಗೆ ಪಂಜಾಬ್‌ ಜಯಭೇರಿಯೂ ಮೊಳಗಲ್ಪಟ್ಟಿತು!

Advertisement

ಜಾನಿ ಬೇರ್‌ಸ್ಟೊ (1) ಮತ್ತು ಭನುಕ ರಜಪಕ್ಸ (40) ವಿಕೆಟ್‌ ಕೀಳಲಷ್ಟೇ ಗುಜರಾತ್‌ಗೆ ಸಾಧ್ಯವಾಯಿತು.

ಸುದರ್ಶನ್‌ ಏಕಾಂಗಿ ಹೋರಾಟ
ಸಾಯಿ ಸುದರ್ಶನ್‌ ಏಕಾಂಗಿ ಹೋರಾಟದೊಂದಿಗೆ ಅಜೇಯ ಅರ್ಧ ಶತಕ ಬಾರಿಸಿ ಗುಜರಾತ್‌ ನೆರವಿಗೆ ನಿಂತರೆ, ವೇಗಿ ರಬಾಡ ಘಾತಕ ಬೌಲಿಂಗ್‌ ಮೂಲಕ ಪಂಜಾಬ್‌ಗ ಮೇಲುಗೈ ಒದಗಿಸಿದರು.

ಸಾಯಿ ಸುದರ್ಶನ್‌ ಕೊಡುಗೆ 64 ರನ್‌. 50 ಎಸೆತ ಎದುರಿಸಿದ ಅವರು 5 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು.

ಓಪನಿಂಗ್‌ ವೈಫ‌ಲ್ಯ
ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಗುಜರಾತ್‌ ಓಪನಿಂಗ್‌ ವೈಫ‌ಲ್ಯ ಅನುಭವಿಸಿತು. ಆರಂಭಿಕರಾದ ಶುಭಮನ್‌ ಗಿಲ್‌ ಮತ್ತು ವೃದ್ಧಿಮಾನ್‌ ಸಾಹಾ 4 ಓವರ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಇವರಲ್ಲಿ ಗಿಲ್‌ ರನೌಟಾಗಿ ನಿರ್ಗಮಿಸಿದರು. ಕವರ್‌ ವಿಭಾಗದಿಂದ ರಿಷಿ ಧವನ್‌ ಎಸೆದ ಡೈರೆಕ್ಟ್ ತ್ರೋ ಗಿಲ್‌ ಅವರನ್ನು ವಂಚಿಸಿತು. ಗಿಲ್‌ ಗಳಿಕೆ ಕೇವಲ 9 ರನ್‌.

ಸಾಹಾ ಎಂದಿನ ಹೊಡಿಬಡಿ ಆಟಕ್ಕೆ ಮುಂದಾಗಿದ್ದರು. ಆದರೆ ಇನ್ನಿಂಗ್ಸ್‌ ವಿಸ್ತರಿಸಲು ರಬಾಡ ಬಿಡಲಿಲ್ಲ. ರಬಾಡ ಎಸೆತಗಳನ್ನು ಫೋರ್‌, ಸಿಕ್ಸರ್‌ಗೆ ಬಾರಿಸಿದ ಬೆನ್ನಲ್ಲೇ ಅಗರ್ವಾಲ್‌ಗೆ ಕ್ಯಾಚ್‌ ನೀಡಿದರು. ಸಾಹಾ ಗಳಿಕೆ 17 ಎಸೆತಗಳಿಂದ 21 ರನ್‌ (3 ಬೌಂಡರಿ, 1 ಸಿಕ್ಸರ್‌). ಪವರ್‌ ಪ್ಲೇ ಮುಗಿಯುವಾಗ ಗುಜರಾತ್‌ 2 ವಿಕೆಟಿಗೆ 42 ರನ್‌ ಮಾಡಿತ್ತು.

ಬ್ಯಾಟಿಂಗ್‌ ಕುಸಿತದ ವೇಳೆ ಭಡ್ತಿ ಪಡೆದು ಬರುವ ನಾಯಕ ಹಾರ್ದಿಕ್‌ ಪಾಂಡ್ಯ ಇಲ್ಲಿ ತಂಡದ ನೆರವಿಗೆ ನಿಲ್ಲಲಿಲ್ಲ. 7 ಎಸೆತಗಳಿಂದ ಕೇವಲ ಒಂದು ರನ್‌ ಮಾಡಿ ಧವನ್‌ಗೆ ವಿಕೆಟ್‌ ಒಪ್ಪಿಸಿದರು.

ಡೆವೀಡ್‌ ಮಿಲ್ಲರ್‌ ಮೇಲಿನ ನಿರೀಕ್ಷೆಯೂ ಹುಸಿಯಾಯಿತು. 14 ಎಸೆತ ಎದುರಿಸಿದ ಅವರು 11 ರನ್‌ ಮಾಡಿ ಲಿವಿಂಗ್‌ಸ್ಟೋನ್‌ ಎಸೆತದಲ್ಲಿ ಔಟಾದರು. ಇದರಲ್ಲಿ ಒಂದೂ ಬೌಂಡರಿ ಹೊಡೆತ ಇರಲಿಲ್ಲ. 67 ರನ್ನಿಗೆ ಗುಜರಾತ್‌ 4 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಆದರೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಸಾಯಿ ಸುದರ್ಶನ್‌ ಗುಜರಾತ್‌ ಇನ್ನಿಂಗ್ಸ್‌ ಬೆಳೆಸಲು ಗರಿಷ್ಠ ಪ್ರಯತ್ನ ಮಾಡುತ್ತ ಉಳಿದರು. ಜತೆಯಲ್ಲಿ ಬಿಗ್‌ ಹಿಟ್ಟರ್‌ ರಾಹುಲ್‌ ತೆವಾಟಿಯ ಇದ್ದರು. ಆದರೆ ಈ ಕಾಂಬಿನೇಶನ್‌ ಯಶಸ್ಸು ಕಾಣಲಿಲ್ಲ. 17ನೇ ಓವರ್‌ನಲ್ಲಿ ಕಾಗಿಸೊ ರಬಾಡ ಬೆನ್ನು ಬೆನ್ನಿಗೆ 2 ವಿಕೆಟ್‌ ಉಡಾಯಿಸಿ ಪಂಜಾಬ್‌ಗ ಭರ್ಜರಿ ಮೇಲುಗೈ ತಂದಿತ್ತರು.

ರಬಾಡ ಎಸೆತಗಳಿಗೆ ವಿಕೆಟ್‌ ಉರುಳಿಸಿಕೊಂಡವರು ತೆವಾಟಿಯ ಮತ್ತು ರಶೀದ್‌ ಖಾನ್‌. ಇಬ್ಬರೂ ಪ್ರಚಂಡ ಫಿನಿಶಿಂಗ್‌ ಮೂಲಕ ಈ ಐಪಿಎಲ್‌ನ ಹೀರೋಗಳಾಗಿದ್ದರು.

ತೆವಾಟಿಯ 13 ಎಸೆತಗಳಿಂದ 11 ರನ್‌ ಮಾಡಿ ಮೊದಲು ನಿರ್ಗಮಿಸಿದರು. ಮುಂದಿನ ಎಸೆತದಲ್ಲೇ ರಶೀದ್‌ ಖಾನ್‌ ವಾಪಸಾದರು. ಆದರೆ ಪ್ರದೀಪ್‌ ಸಂಗ್ವಾನ್‌ ಹ್ಯಾಟ್ರಿಕ್‌ ನಿರಾಕರಿಸಿದರು. ರಬಾಡ ಸಾಧನೆ 33ಕ್ಕೆ 4
ಈ ನಡುವೆ ಆರ್ಷದೀಪ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಸಾಯಿ ಸುದರ್ಶನ್‌ ಅರ್ಧ ಶತಕ ಪೂರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next