ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ, ಈ ಪಕ್ಷ ಆಧುನಿಕ ಈಸ್ಟ್ ಇಂಡಿಯಾ ಕಂಪನಿ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಪುಂಡಾಟದ ಹಿಂದೆ ದೊಡ್ಡ ಹುನ್ನಾರವೇ ಇರುವಂತಿದೆ: ಕುಮಾರಸ್ವಾಮಿ
ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿನ ಸಂಪತ್ತನ್ನು ಲೂಟಿ ಮಾಡುವ ಸಂಚು ಮಾಡಿದೆ. ಅಷ್ಟೇ ಅಲ್ಲ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ ಹಸುವಿನ ಹಾಲು ಕರೆಯುವುದು ಹೇಗೆಂಬುದು ಕೂಡಾ ತಿಳಿದಿಲ್ಲ ಎಂದು ಚನ್ನಿ ಟೀಕಿಸಿದ್ದಾರೆ.
ಪಂಜಾಬ್ ನಲ್ಲಿ ತಮ್ಮದೇ ಪಕ್ಷದ ಸಂಸದರು ವಿಶ್ವಾಸ ಕಳೆದುಕೊಂಡು ವಲಸೆ ಹೋಗುತ್ತಿದ್ದಾರಲ್ಲ ಈ ಬಗ್ಗೆ ಕೇಜ್ರಿವಾಲ್ ವಿವರಣೆ ನೀಡುತ್ತಾರಾ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಚನ್ನಿ, 2014ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ನಾಲ್ವರು ಆಪ್ ಸಂಸದರಲ್ಲಿ ಮೂವರು ಪಕ್ಷವನ್ನು ತ್ಯಜಿಸಿದ್ದಾರೆ. ಅದೇ ರೀತಿ 2017ರಲ್ಲಿ ಆಯ್ಕೆಯಾದ 20 ಮಂದಿ ಶಾಸಕರಲ್ಲಿ 11 ಮಂದಿ ಪಕ್ಷವನ್ನು ತೊರೆದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಆಮ್ ಆದ್ಮಿ ಪಕ್ಷ ನಿಧಾನಕ್ಕೆ ಕಣ್ಮರೆಯಾಗುತ್ತಿರುವುದರ ಸಂಕೇತವಾಗಿದೆ ಎಂದು ಚನ್ನಿ ಆರೋಪಿಸಿದ್ದಾರೆ. ರಾಜ್ಯದ ಬಗ್ಗೆ ಕೇಜ್ರಿವಾಲ್ ಗೆ ಯಾವುದೇ ತಿಳಿವಳಿಕೆ ಇಲ್ಲ. ಪಂಜಾಬ್ ನ ಪ್ರತಿಯೊಬ್ಬ ಯುವಕನು ತಮ್ಮ ಮನೆಯನ್ನು ನಿರ್ವಹಿಸಲು ವಿವಿಧ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಚನ್ನಿ ಹೇಳಿದರು.