ಬೀದರ್: ನಗರದ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಕುಲತಾರ್‌ಸಿಂಗ್ ಅವರು ಪಂಜಾಬ್ ವಿಧಾನ ಸಭೆಯ ಸ್ಪೀಕರ್ ಹುದ್ದೆ ಅಲಂಕರಿಸಿದ್ದಾರೆ. ಕುಲತಾರ್‌ಸಿಂಗ್ ಅವರು 1993ರ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದು, ಆಟೋಮೊಬೈಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.
ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬೀದರ್ ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಡಾ. ಸರ್ದಾರ್ ಬಲಬೀರ್‌ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್ ಅವರು ಸ್ಪೀಕರ್ ಕುಲತಾರ್‌ಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಇದನ್ನೂ ಓದಿ: ಮನುಷ್ಯತ್ವ ಬೇಕೋ,ಕೋಮುವಾದ ಬೇಕೋ? ನೀವೇ ನಿರ್ಧರಿಸಿ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಸಮಾರಂಭದಲ್ಲಿ ಮಾತನಾಡಿದ ರೇಷ್ಮಾ ಕೌರ್, ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯೊಬ್ಬರು ವಿಧಾನಸಭೆಯ ಸ್ಪೀಕರ್ ಹುದ್ದೆಗೇರಿದ್ದು ಹೆಮ್ಮೆಯ ಸಂಗತಿ. ಕುಲತಾರ್‌ಸಿಂಗ್‌ಅವರ ಸಾಧನೆ ನಿಜಕ್ಕೂ ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡಿದ ಕಾಲೇಜಿನ ಬೆಳವಣಿಗೆಗೆ ನೆರವು ನೀಡಬೇಕು ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ ವಿವಿಧ ಬ್ಯಾಚ್‌ಗಳಲ್ಲಿ ಅಭ್ಯಾಸ ಮಾಡಿದ 140ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಳೆ ವಿದ್ಯಾರ್ಥಿಗಳ ಸಂಘದ ಡೀನ್ ಪ್ರೊ. ಗುರುಪ್ರಸಾದ್, ಪ್ರೊ. ರಾಜಶೇಖರ ಗಾಯತೊಂಡ, ದೈಹಿಕ ಶಿಕ್ಷಣ ನಿರ್ದೇಶಕ ಮೊಹ್ಮದ್ ಅಬ್ದುಲ್ ಗಫಾರ್ ಉಪಸ್ಥಿತರಿದ್ದರು.