ಚಂಡೀಗಢ್: ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶ ನೀಡಿದೆ.
ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಸೀದಿಗಳು ಹಾಗೂ ಗುರುದ್ವಾರಗಳಲ್ಲಿಯೂ ಜಿಲ್ಲಾಧಿಕಾರಿಗಳ ಲಿಖಿತ ಅನುಮತಿ ಇಲ್ಲದೇ ಲೌಡ್ ಸ್ಪೀಕರ್ ಗಳನ್ನು ಬಳಸುವುದಕ್ಕೆ ನಿರ್ಬಂಧ ಹೇರಿದೆ.
ಬೆಳಗ್ಗೆ 6ಗಂಟೆಯಿಂದ ರಾತ್ರಿ 10ಗಂಟೆವರೆಗೆ ಯಾವುದೇ ಲೌಡ್ ಸ್ಪೀಕರ್ ಆಗಲಿ ಅಥವಾ ಸಂಗೀತ ಸಾಧನಗಳನ್ನು ಬಳಸುವುದಕ್ಕೆ ಅವಕಾಶ ಇಲ್ಲ. ಅಷ್ಟೇ ಅಲ್ಲ ಸಂಗೀತ ರಸಮಂಜರಿ, ಸಂಗೀತ ಕಾರ್ಯಕ್ರಮಗಳಲ್ಲಿ ಶಬ್ದ 10 ಡೆಸಿಬಲ್ಸ್ ಗಿಂತ ಹೆಚ್ಚಾಗಿರಬಾರದು ಎಂದು ಕೋರ್ಟ್ ಆದೇಶ ನೀಡಿದೆ.
ಏತನ್ಮಧ್ಯೆ ವಾರ್ಷಿಕವಾಗಿ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಲೌಡ್ ಸ್ಪೀಕರ್ ಬಳಸಲು ಅವಕಾಶ ನೀಡಿದೆ. ರಾತ್ರಿ 10ರಿಂದ ಮಧ್ಯರಾತ್ರಿವರೆಗೆ ಲೌಡ್ ಸ್ಪೀಕರ್ ಬಳಸಬಹುದಾಗಿದೆ ಎಂದು ಕೋರ್ಟ್ ತಿಳಿಸಿದೆ.
ರಾಜ್ಯದಲ್ಲಿ ಈ ಆದೇಶವನ್ನು ಜಾರಿಗೊಳಿಸುವಂತೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಜಿಲ್ಲಾಧಿಕಾರಿಗಳಿಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ಪೀಠದ ನ್ಯಾಯಾಧೀಶರಾದ ರಾಜೀವ್ ಶರ್ಮಾ ಮತ್ತು ಹರೀಂದರ್ ಸಿಂಗ್ ಸಿಧು ನಿರ್ದೇಶನ ನೀಡಿದ್ದಾರೆ.