Advertisement

ಅಪರಾಧ ಕೃತ್ಯ ಎಸಗಿದರೆ ತಕ್ಕ ಶಾಸ್ತಿ; ಪೊಲೀಸ್‌ ವರಿಷ್ಠಾಧಿಕಾರಿ

02:38 PM Aug 27, 2022 | Team Udayavani |

ಧಾರವಾಡ: ಸಾಮಾಜಿಕ ಜಾಲತಾಣದ ಮೂಲಕ ಕೋಮು ಸಾಮರಸ್ಯ ಹದಗೆಡಿಸುವವರು, ಅಪರಾಧ ಚಟುವಟಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಮತ್ತು ಅಗತ್ಯಬಿದ್ದರೆ ರೌಡಿಶೀಟ್‌ ತೆರೆಯಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಬಿ. ಜಗಲಾಸರ್‌ ಹೇಳಿದರು.

Advertisement

ರಂಗಾಯಣದಲ್ಲಿ ಧಾರವಾಡ ಜರ್ನಲಿಸ್ಟ್‌ ಗಿಲ್ಡ್‌ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ “ಮೀಟ್‌ ದಿ ಪ್ರಸ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಂತಿಭಂಗ ಅಥವಾ ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದು, ಯುವಕರು ನೌಕರಿಗೂ ಅನರ್ಹರಾಗುವ ಅಪಾಯ ತಂದುಕೊಳ್ಳಬಾರದು. ಇನ್ನು ಪುಂಡಾಟಿಕೆ ಮಾಡುವವರ ವಿರುದ್ಧ ರೌಡಿಶೀಟ್‌ ತೆರೆಯಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಡಿಜೆ ಸೌಂಡ್‌ ಮಾಡುವಂತಿಲ್ಲ: ಗಣೇಶ ಹಬ್ಬದ ಸಂದರ್ಭದಲ್ಲಿ ಡಿಜೆ ಬಳಸುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದು ಗಣೇಶ ಹಬ್ಬಕ್ಕೆ ಮಾತ್ರವಲ್ಲ ಎಲ್ಲಾ ಸಾರ್ವಜನಿಕ ಸಭೆ-ಸಮಾರಂಭಗಳಿಗೂ ಅನ್ವಯಿಸಲಿದೆ. ಈಗಾಗಲೇ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಡಿಜೆ ಪೂರೈಕೆದಾರರ ಸಭೆ ನಡೆಸಿ ಕಾನೂನಿನ ಕುರಿತು ಹೇಳಲಾಗಿದೆ. ನಿಗದಿಗಿಂತ ಹೆಚ್ಚಿನ ಡೆಸಿಬಲ್‌ ಶಬ್ದ ಹೊರಹೊಮ್ಮಿಸುವ ಡಿಜೆ ಬಳಸಿದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಇದಕ್ಕಾಗಿ ಅಧಿಕಾರಿಗಳಿಗೆ ಡೆಸಿಬಲ್‌ ಮೀಟರ್‌ ಕೂಡಾ ನೀಡಲಾಗಿದೆ ಎಂದರು.

ಇಲಾಖೆಯಲ್ಲಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಎಸ್‌ಪಿ ಕಚೇರಿ ಸೇರಿದಂತೆ ಹೆಚ್ಚುವರಿಯಾಗಿದ್ದ ಸಿಬ್ಬಂದಿಯನ್ನು ಠಾಣೆಗಳಿಗೆ ನಿಯೋಜಿಸುವ ಕೆಲಸ ಆಗಿದೆ. ಗೃಹರಕ್ಷಕ ದಳಕ್ಕೆ ಹೊಸದಾಗಿ 170 ಜನರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಇವರ ಸಂಖ್ಯೆ 800 ಆಗಲಿದೆ ಎಂದು ಹೇಳಿದರು.

ಅಕ್ರಮ ಮದ್ಯಕ್ಕೂ ಕಡಿವಾಣ: ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲಾಗಿದ್ದು, ಗಣನೀಯವಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೆಯೂ ಇಂಥ ಯಾವುದೇ ಪ್ರಕರಣಗಳ ಮಾಹಿತಿ ಲಭ್ಯವಾದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮೃತ್ಯುಕೂಪವಾಗಿರುವ ಬೈಪಾಸ್‌ನಲ್ಲಿ ಅಪಘಾತ ಸಂಖ್ಯೆ ಕಡಿಮೆ ಮಾಡಲು ಈ ಹಿಂದೆ ವಾಹನಗಳನ್ನು ನಿಲ್ಲಿಸಿ, ಬಿಡುವ ಪ್ರಯೋಗ ನಡೆಸಿದ್ದು, ಯಶಸ್ವಿಯಾಗಿತ್ತು. ಕೆಲವೇ ದಿನಗಳಲ್ಲಿ ಅದನ್ನು ಮರಳಿ ಜಾರಿಗೆ ತರಲಾಗುವುದು. ಬೈಪಾಸ್‌ ನಲ್ಲಿ ಎರಡರಿಂದ ಮೂರು ಸ್ಥಳಗಳಲ್ಲಿ ಇಂತಹ ಸ್ಥಳಗಳನ್ನು ಗುರುತಿಸಿ ನಿರಂತರವಾಗಿ ಈ ಪ್ರಕ್ರಿಯೆ ನಡೆಸಲಾಗುವುದು ಎಂದರು.

Advertisement

ಗಿಲ್ಡ್‌ ಕಾರ್ಯದರ್ಶಿ ಸುಧೀಂದ್ರ ಪ್ರಸಾದ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷ ಡಾ|ಬಸವರಾಜ ಹೊಂಗಲ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಸವರಾಜ ಅಳಗವಾಡಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ಬಾಕಿ ಉಳಿದ ಕಡತಗಳ ವಿಲೇವಾರಿಗೆ ಒತ್ತು
ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಅವಧಿ ಮೀರಿದ ಕಡತಗಳ ವಿಲೇವಾರಿ ಮುಂದಿನ ಎರಡು ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ. ಸದ್ಯ ಸುಮಾರು 1100 ಕಡತಗಳಿದ್ದು, ಕಳೆದ ಎರಡು ತಿಂಗಳಲ್ಲಿ 200ಕ್ಕೂ ಹೆಚ್ಚು ಕಡತಗಳನ್ನು ಅಧಿಕಾರಿಗಳು ವಿಲೇವಾರಿ ಮಾಡಿದ್ದಾರೆ. ಉಳಿದವೂ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಇದರೊಂದಿಗೆ 512 ಎಫ್‌ ಐಆರ್‌, 167 ಕಾಣೆ ಪ್ರಕರಣ ಹಾಗೂ 250 ಅಸಹಜ ಸಾವು ಪ್ರಕರಣಗಳ ವಿಲೇವಾರಿಯೂ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.

ನಾಗರಿಕ ಸೇವೆಯಲ್ಲಿ 261 ಬಂದೂಕು ಪರವಾನಗಿ ಮತ್ತು 86 ದೊಂಬಿ ಪ್ರಕರಣಗಳ ವಿಲೇವಾರಿಯಾಗಿದೆ. ಇದನ್ನು ಹೊರತುಪಡಿಸಿ 17 ಇಸ್ಪೀಟ್‌ ಪ್ರಕರಣ, 12 ಮಟಕಾ, 38 ಮದ್ಯ ಅಕ್ರಮ ಮಾರಾಟ, 3 ಗಾಂಜಾ ಮಾರಾಟ ಪ್ರಕರಣಗಳನ್ನೂ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಇದರ ಜತೆಯಲ್ಲಿ ಪುಂಡಾಟಿಕೆ, ಹುಡುಗಿಯರಿಗೆ ಚುಡಾಯಿಸುವಂತ ಸುಮಾರು ಒಂದು ಸಾವಿರ ಪ್ರಕರಣಗಳಲ್ಲಿ ಪಿಟ್ಟಿಕೇಸ್‌ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ರೌಡಿಶೀಟ್‌ ತೆರೆಯಲು ಮುಲಾಜಿಲ್ಲ: ಜಗಲಾಸರ
ಯಾವುದೇ ಪ್ರಕರಣಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುವುದು, ಸಮಸ್ಯೆಗಳನ್ನು ಸೃಷ್ಟಿಸುವುದು, ಒಂದಲ್ಲಾ ಒಂದು ಪ್ರಕರಣಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ. ಒಬ್ಬ ವ್ಯಕ್ತಿ ಮೇಲೆ ಇಂಥ ಹಲವು ಪ್ರಕರಣಗಳು ದಾಖಲಾದರೆ ಮುಲಾಜಿಲ್ಲದೆ ರೌಡಿಶೀಟರ್‌ ಪಟ್ಟಿಗೆ ಸೇರಿಸಲಾಗುವುದು. ಸದ್ಯ ಜಿಲ್ಲೆಯ ರೌಡಿಶೀಟರ್‌ ಪಟ್ಟಿ ಪರಿಷ್ಕರಿಸಲಾಗಿದೆ. 494 ರೌಡಿಶೀಟರ್‌ ಗಳ ಪಟ್ಟಿಯಿಂದ 140 ಜನರನ್ನು ವಿವಿಧ ಕಾರಣಗಳಿಂದ ಕೈಬಿಡಲಾಗಿದೆ ಎಂದು ಲೋಕೇಶ ತಿಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಅನೇಕ ಅಪರಾಧ ಪ್ರಕರಣಗಳಲ್ಲಿ ದೂರುದಾರರು ಪ್ರಕರಣ ದಾಖಲಿಸಲು ಇಚ್ಛಿಸಿದಲ್ಲಿ ಅಂಥವರ ಪ್ರಕರಣ ದಾಖಲಿಸಬೇಕು. ದಾಖಲಿಸದಿದ್ದರೆ ಹಿಂಬರಹವನ್ನು ಠಾಣಾಧಿಕಾರಿ ನೀಡಬೇಕು. ಆದರೆ ನ್ಯಾಯಪಂಚಾಯ್ತಿ ಮೂಲಕ ಬಗೆಹರಿಸುವುದು ಅಷ್ಟು ಸೂಕ್ತವಲ್ಲ.
ಲೋಕೇಶ ಬಿ. ಜಗಲಾಸರ್‌,
ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next