Advertisement

Kukke Shree Subrahmanya 7 ಲ. ರೂ. ಮೌಲ್ಯದ ಪುಂಗನೂರು ಹಸುಗಳು

12:44 AM Aug 22, 2023 | Team Udayavani |

ಸುಬ್ರಹ್ಮಣ್ಯ: ನಾಗರಪಂಚಮಿಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ಷೇತ್ರದ ಭಕ್ತ ಮತ್ತು ಹೈದರಾಬಾದ್‌ನ ಎಎಂಆರ್‌ ಗ್ರೂಪ್‌ನ ಆಡಳಿತ ನಿರ್ದೇಶಕ ಎ. ಮಹೇಶ್‌ ರೆಡ್ಡಿ ಸುಮಾರು 7 ಲಕ್ಷ ರೂ. ಮೌಲ್ಯದ ಪುಂಗನೂರು ತಳಿಯ 4 ಗೋವುಗಳನ್ನು ದಾನವಾಗಿ ನೀಡಿದರು.

Advertisement

ಶ್ವೇತ ವರ್ಣದ ಹಾಲು ಕರೆಯುವ 3 ಗೋವುಗಳು ಹಾಗೂ 1 ಕರುವನ್ನು ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದ ಬಳಿಗೆ ತಂದು ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿ ವೈದಿಕ ವಿಧಿ ವಿಧಾನಗಳ ಮೂಲಕ ದೇಗುಲಕ್ಕೆ ಹಸ್ತಾಂತರಿಸಲಾಯಿತು.

ಮಹೇಶ್‌ ರೆಡ್ಡಿ ಈ ಹಿಂದೆ 27 ಲಕ್ಷ ರೂ. ವೆಚ್ಚದಲ್ಲಿ ಭೋಜನ ಪ್ರಸಾದ ತಯಾರಿ ಮತ್ತು ಲಡ್ಡು ಪ್ರಸಾದ ತಯಾರಿ ಯಂತ್ರೋಪಕರಣಗಳನ್ನು ಹಾಗೂ ಷಣ್ಮುಖ ಪ್ರಸಾದ ಭೋಜನ ಶಾಲೆಗೆ ಭೋಜನ ಪ್ರಸಾದ ವಿತರಣೆಗೆ ಗಾಡಿಗಳನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಎಸ್‌. ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಪಿಜಿಎಸ್‌ಎನ್‌ ಪ್ರಸಾದ್‌, ಮನೋಹರ ರೈ, ಲೋಕೇಶ್‌ ಮುಂಡುಕಜೆ, ವನಜಾ ವಿ. ಭಟ್‌, ಶೋಭಾ ಗಿರಿಧರ್‌, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್‌ ಮೊದಲಾದವರಿದ್ದರು.

ಚಂದ್ರಯಾನ ಯಶಸ್ಸಿಗೆ ಕುಕ್ಕೆಯಲ್ಲಿ ಸೇವೆ
ಸುಬ್ರಹ್ಮಣ್ಯ: ಬಾಹ್ಯಾಕಾಶ ಸಂಶೋಧನ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿಯ ಶುಭದಿನವಾದ ಸೋಮವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇಗುಲದ ಆಡಳಿದ ಮಂಡಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಲಾಯಿತು.

Advertisement

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ 3 ನೌಕೆಯು ಚಂದ್ರನಲ್ಲಿಳಿದು ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ನಮ್ಮ ರಾಷ್ಟ್ರದ ಹೆಸರು ಪ್ರಪಂಚದಲ್ಲೇ ಅಗ್ರಗಣ್ಯವಾಗಲಿ ಎಂದು ಕುಕ್ಕೆ ಸುಬ್ರಹ್ಮಣ್ಯನಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇಸ್ರೋ ಸಂಸ್ಥೆಯ ಪರವಾಗಿ ನಾಗರಾಜನಿಗೆ ಹಾಲು ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next