ಪುನೀತ್ ರಾಜಕುಮಾರ್ ಅಭಿನಯದ “ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಈ ಚಿತ್ರವು ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ ಐದರಂದು ಬಿಡುಗಡೆಯಾಗಲಿದೆ. ಅದೇ ಕಾರಣಕ್ಕೆ ಚಿತ್ರತಂಡದವರು ಸತತ ಚಿತ್ರೀಕರಣ ನಡೆಸುತ್ತಿದ್ದು, ಆದಷ್ಟು ಬೇಗ ಚಿತ್ರೀಕರಣ ಮುಗಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಅಂದಹಾಗೆ, “ನಟ ಸಾರ್ವಭೌಮ’ ಚಿತ್ರ ಮುಗಿಯುತ್ತಿದ್ದಂತೆ, ಹೊಂಬಾಳೆ ಪ್ರೊಡಕ್ಷನ್ಸ್‌ನ ಹೊಸ ಸಿನಿಮಾದಲ್ಲಿ ಪುನೀತ್ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್‌ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಇನ್ನು ಪುನೀತ್ ಅಭಿನಯದ “ರಾಜಕುಮಾರ’ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಆನಂದರಾಮ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ಅವರು ಕಥೆ ಮತ್ತು ಚಿತ್ರಕಥೆಯನ್ನು ಬಹುತೇಕ ಬರೆದು ಮುಗಿಸಿದ್ದಾರೆ. ಈ ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸುತ್ತಾರೆ ಮತ್ತು ತೆರೆಯ ಹಿಂದೆ ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬ ಕುತೂಹಲ ಸಹಜವಾದದ್ದೇ. ಹಾಗೆಯೇ, ಚಿತ್ರದ ಹೆಸರು ಏನಿರಬಹುದು ಎಂಬ ಕುತೂಹಲ ಸಹ ಎಲ್ಲೆಡೆ ಇದೆ. ಈ ಹಿಂದೆ ಸಂತೋಷ್ ಆನಂದರಾಮ್ ಹೇಳಿಕೊಂಡಂತೆ, ಡಾ. ರಾಜಕುಮಾರ್ ಅವರ ಚಿತ್ರದ ಶೀರ್ಷಿಕೆಯೇ, ಈ ಚಿತ್ರಕ್ಕೂ ಶೀರ್ಷಿಕೆಯಾಗಲಿದೆಯಂತೆ.
ಅದಕ್ಕೆ ಸರಿಯಾಗಿ, ಡಾ. ರಾಜಕುಮಾರ್ ಅವರ ಯಾವ ಚಿತ್ರದ ಹೆಸರು ಮರುಬಳಕೆಯಾಗಬಹುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, “ಪರಶುರಾಮ್’ ಎಂಬ ಹೆಸರನ್ನು ಪುನೀತ್ ಅವರ ಚಿತ್ರಕ್ಕೂ ಇಡಬಹುದು ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ.
ಇದು ನಿಜವೋ ಅಥವಾ ಬರೀ ಗಾಳಿಸುದ್ದಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಪುನೀತ್ ಹೊಸ ಚಿತ್ರದ ಹೆಸರು “ಪರಶುರಾಮ್’ ಎಂದು ಸುದ್ದಿಯಾಗುತ್ತಿದೆ. ಯಾವುದಕ್ಕೂ ಗಣಪತಿ ಹಬ್ಬದವರೆಗೂ ಕಾಯಲೇಬೇಕು. ಏಕೆಂದರೆ, ಗಣಪತಿ ಹಬ್ಬದಂದು ಸಂತೋಷ್, ಚಿತ್ರದ ಅಧಿಕೃತ ಹೆಸರನ್ನು ಬಹಿರಂಗಪಡಿಸಲಿದ್ದಾರಂತೆ.