Advertisement

ಅಭಿಮಾನಿಗಳಿಂದ ಪುನೀತ್‌ ಹುಟ್ಟುಹಬ್ಬ

09:35 AM Mar 19, 2020 | Lakshmi GovindaRaj |

ನಟ ಪುನೀತ್‌ ರಾಜಕುಮಾರ್‌ ಮಂಗಳವಾರ 45ನೇ ವಸಂತಕ್ಕೆ ಕಾಲಿಟ್ಟರು. ಇನ್ನು ಎಂದಿನಂತೆ ಈ ಬಾರಿಯೂ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ತಮ್ಮ ನೆಚ್ಚಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ತಿಂಗಳ ಮುಂಚೆಯೇ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದರು.

Advertisement

ಆದರೆ ಕೊರೊನಾ ಭೀತಿಯಿಂದಾಗಿ ಈ ಬಾರಿ ಅಭಿಮಾನಿಗಳ ಜೊತೆ, ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸದಿರುವ ನಿರ್ಧಾರಕ್ಕೆ ಪುನೀತ್‌ ಬಂದಿದ್ದರಿಂದ, ಕೊನೆಕ್ಷಣದಲ್ಲಿ ಪುನೀತ್‌ ರಾಜಕುಮಾರ್‌ ಅದ್ಧೂರಿ ಬರ್ತ್‌ಡೇ ಆಚರಣೆಗೆ ಬ್ರೇಕ್‌ ಬಿದ್ದಿತ್ತು. ಇನ್ನು ಕೆಲ ದಿನಗಳ ಹಿಂದಷ್ಟೇ ಪುನೀತ್‌ ರಾಜಕುಮಾರ್‌ ವಿಡಿಯೋ ಮೂಲಕ ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ. ಮನೆ ಹತ್ತಿರ ಯಾರೂ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಬಹುತೇಕ ಅಭಿಮಾನಿಗಳು ಸ್ಪಂದಿಸಿ, ಸೋಶಿಯಲ್‌ ಮೀಡಿಯಾಗಳಲ್ಲಿ ಶುಭಕೋರಿದ್ದು ವಿಶೇಷವಾಗಿತ್ತು.

ಇವೆಲ್ಲದರ ನಡುವೆಯೂ ಪ್ರತಿವರ್ಷದಂತೆ ಈ ವರ್ಷ ಕೂಡ ತಮ್ಮ ನೆಚ್ಚಿನ ನಟನನ್ನು ನೋಡಲು ಹುಟ್ಟುಹಬ್ಬದ ದಿನದಂದು ಪುನೀತ್‌ ಮನೆ ಮುಂದೆ ಒಂದಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಮೊದಲೇ ತಿಳಿಸಿದಂತೆ, ಪುನೀತ್‌ ರಾಜಕುಮಾರ್‌ ತಮ್ಮ ಕುಟುಂಬ ವರ್ಗದವರೊಂದಿಗೆ ಹುಟ್ಟುಹಬ್ಬದ ಪ್ರಯುಕ್ತ ಹೊರಗಿದ್ದ ಕಾರಣ, ಮನೆ ಬಳಿ ಬಂದ ಅಭಿಮಾನಿಗಳು ವಾಪಾಸಾಗುತ್ತಿದ್ದ ದೃಶ್ಯ ಕಂಡು ಬಂತು.

ಪುನೀತ್‌ ಬರ್ತ್‌ಡೇಗೆ ಶುಭಕೋರಿದ ಸ್ಟಾರ್: ಇನ್ನು ಎಂದಿನಂತೆ ಈ ಬಾರಿ ಕೂಡ ಪುನೀತ್‌ ರಾಜಕುಮಾರ್‌ ಹುಟ್ಟಹಬ್ಬಕ್ಕೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದಿಂದ ಶುಭಾಶಯಗಳ ಮಹಾಪೂರವೆ ಹರಿದು ಬಂದಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಕಿಚ್ಚ ಸುದೀಪ್‌, ನೆನಪಿರಲಿ ಪ್ರೇಮ್, ಯುವರತ್ನ ನಾಯಕಿ ಸಯೇಶಾ ಸೈಗಲ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ತಮಿಳು ನಟ ಆರ್ಯ ಹೀಗೆ ಚಿತ್ರರಂಗದ ಸಾಕಷ್ಟು ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಬರ್ತ್‌ಡೇಗೆ “ಯುವರತ್ನ’ನ ಸ್ಪೆಷಲ್‌ ಗಿಫ್ಟ್!: “ಯುವರತ್ನ’ ಚಿತ್ರತಂಡ ಪುನೀತ್‌ ರಾಜಕುಮಾರ್‌ ಬರ್ತ್‌ಡೇ ಪ್ರಯುಕ್ತ ಸ್ಪೆಷಲ್‌ ಗಿಫ್ಟ್ ಆಗಿ “ಯುವರತ್ನ’ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. “ಯುವರತ್ನ’ ಚಿತ್ರದ ಟೀಸರ್‌ ಯೂ-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಟೀಸರ್‌ ಹೊರಬಂದ ಕೆಲವೇ ನಿಮಿಷಗಳಲ್ಲಿ 15 ಸಾವಿರಕ್ಕೂ ಅಧಿಕ ವೀವ್ಸ್‌ ಪಡೆದುಕೊಂಡಿದೆ.

Advertisement

ಸುಮಾರು 1.39 ನಿಮಿಷದ ಟೀಸರ್‌ನಲ್ಲಿ “ಗಂಡಸ್ತನ, ಛರ್ಬಿ, ಮೀಟರ್‌, ಮಾರ್ಕೇಟ್‌ ಇವೆಲ್ಲ ಇರೋನೊಬ್ಬ ಬೇಕು? ಸಿಗ್ತಾನಾ..’ ಎಂದು ಹೇಳುವ “ಡಾಲಿ’ ಧನಂಜಯ್‌ ಡೈಲಾಗ್‌ನೊಂದಿಗೆ ಟೀಸರ್‌ ತೆರೆದುಕೊಳ್ಳುತ್ತದೆ. “ಸೀಟ್ಗಾಗಿ ಹೊಡೆದಾಡೋನು ಡಾನ್‌, ಅದರ ಮೇಲೆ ಕುಳಿತುಕೊಳ್ಳೋನು…’, “ಖದರ್‌ ಇಲ್ಲದ ಕಡೆ ನಮ್‌ ಹುಡುಗರೇ ಓಡಾಡೊಲ್ಲ, ಇನ್ನು ನಾನು ಇರ್ತೀನಾ’, “ನಾವ್‌ ನಂಬಿಕೆ ಕಳೆದುಕೊಂಡಿಲ್ಲ, ಕಳೆದ್ಕೊಳ್ಳೋದೂ ಇಲ್ಲ’,

“ಬ್ಯಾಟು-ಬಾಲ್‌ ಇದೆ ಅಂಥ ಫೀಲ್ಡಿಗೆ ಇಳಿದೋನಲ್ಲ ನಾನು, ಹೊಡಿತೀವಿ ಅಂತ ಕಾನ್ಫಿಡೆನ್ಸ್‌ ಇರೋದ್ರಿಂದಲೇ ಫೀಲ್ಡಿಗೆ ಇಳಿತಿರೋದು’ ಅನ್ನೋ ಕಿಕ್‌ ಕೊಡುವ ಡೈಲಾಗ್ಸ್‌ ಮಾಸ್‌ ಆಡಿಯನ್ಸ್‌ಗೆ ಅದರಲ್ಲೂ ಪುನೀತ್‌ ಫ್ಯಾನ್ಸ್‌ಗೆ ಭರ್ಜರಿಯಾಗಿ ಖುಷಿ ಕೊಡುವಂತಿವೆ. ಇನ್ನು ಈ ಟೀಸರ್‌ನಲ್ಲಿ ಪುನೀತ್‌ ರಾಜಕುಮಾರ್‌, ಡಾಲಿ ಧನಂಜಯ್‌, ನಾಯಕಿ ಸಯೇಷಾ ಸೈಗಲ್‌ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆ ಕುತೂಹಲ ಮೂಡಿಸುವಲ್ಲಿ ಟೀಸರ್‌ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next