Advertisement

‘ಪುನೀತ್‌ ಪರ್ವ’ಕ್ಕೆ ತಯಾರಿ ಜೋರು: ಭಾಗಿಯಾಗಲಿದೆ ಗಣ್ಯರ ದಂಡು

11:19 AM Oct 18, 2022 | Team Udayavani |

ಪುನೀತ್‌ ರಾಜಕುಮಾರ್‌ ನಿರ್ಮಿಸಿ, ತೆರೆಮೇಲೆ ಕಾಣಿಸಿಕೊಂಡಿರುವ “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್‌ 28ರಂದು “ಗಂಧದ ಗುಡಿ’ ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿದ್ದು, ತಮ್ಮ ನೆಚ್ಚಿನ ನಟನನ್ನು ಮತ್ತೂಮ್ಮೆ ಬಿಗ್‌ಸ್ಕ್ರೀನ್‌ ಮೇಲೆ ಕಣ್ತುಂಬಿಕೊಳ್ಳಲು ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Advertisement

ಅದ್ಧೂರಿ ಪ್ರೀ-ರಿಲೀಸ್‌ ಇವೆಂಟ್‌: ಇನ್ನು “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾದ ಬಿಡುಗಡೆಗೂ ಮುನ್ನ ಅದ್ಧೂರಿಯಾಗಿ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮ ನಡೆಯಲಿದೆ.”ಪುನೀತ ಪರ್ವ’ ಕಾರ್ಯಕ್ರಮ ಅಕ್ಟೋಬರ್‌ 21ರ ಶುಕ್ರವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯಲಿದೆ.

ಪುನೀತ್‌ ರಾಜಕುಮಾರ್‌ ಪತ್ನಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಮತ್ತು ರಾಜ್‌ ಕುಟುಂಬ ಸ್ವತಃ ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ರಾಜಕೀಯ ರಂಗದ ಗಣ್ಯರು ಮತ್ತು ಚಿತ್ರರಂಗದ ಬಹುತೇಕ ತಾರೆಯರು ಮತ್ತು ಗಣ್ಯರನ್ನು “ಗಂಧದ ಗುಡಿ’ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ:ಜಡ್ಜ್ ಗಳ ನೇಮಕಾತಿ ಹಕ್ಕು ಕೇಂದ್ರ ಸರ್ಕಾರದ್ದು, ಕೊಲಿಜಿಯಂ ಬಗ್ಗೆ ಸಚಿವ ರಿಜಿಜು ಅಸಮಾಧಾನ

“ಗಂಧದ ಗುಡಿ’ ಪ್ರೀ-ರಿಲೀಸ್‌ ಇವೆಂಟ್‌ಗೆ “ಪುನೀತ ಪರ್ವ’ ಎಂದು ಹೆಸರಿಡಲಾಗಿದ್ದು, ಕನ್ನಡ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಮಾತ್ರವಲ್ಲದೆ. ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಹಲವಾರು ಸಿನಿತಾರೆಯರು ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

Advertisement

ವಾರಪೂರ್ತಿ ಅಪ್ಪು ನೆನಪಿನ ಕಾರ್ಯಕ್ರಮ: ಅಕ್ಟೋಬರ್‌ 21ರಿಂದ ಆರಂಭವಾಗಿ ಅಕ್ಟೋಬರ್‌ ಕೊನೆವರೆಗೂ ಪುನೀತ್‌ ರಾಜಕುಮಾರ್‌ ನೆನಪಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ. 26 ರಂದು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ರಾಜಕುಮಾರ್‌ ಸಮಾಧಿ ಬಳಿ ವಿಶ್ವ ದಾಖಲೆಗಾಗಿ ಪುನೀತ್‌ ರಾಜಕುಮಾರ್‌ ಅವರ ಬರೋಬ್ಬರಿ 75 ಕಟೌಟ್‌ ಗಳನ್ನು ನಿಲ್ಲಿಸಲಾಗುತ್ತದೆ. ಅ. 27ರಂದು ಈ ಎಲ್ಲಾ ಕಟೌಟ್‌ಗಳಿಗೂ ಅಭಿಮಾನಿಗಳಿಂದ ಭಾರೀ ಹೂವಿನ ಹಾರ ಹಾಕಲಾಗುತ್ತಿದ್ದು, ಅದೇ ದಿನ ಸಂಜೆ ಸ್ಮಾರಕದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ದೀಪಾಲಂಕಾರಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.

ಅ. 28 ರಂದು “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾ ಬಿಡುಗಡೆಯಾಗಲಿದ್ದು, ಅಂದು “ಗಂಧದ ಗುಡಿ’ ಬಿಡುಗಡೆಯಾಗುವ ಕೆ. ಜಿ ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆಗೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಅ. 29ರಂದು ಪುನೀತ್‌ ರಾಜಕುಮಾರ್‌ ಮೊದಲನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಸ್ಮಾರಕದ ಬಳಿ ಅಭಿಮಾನಿಗಳಿಗೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿದೆ. ಇದಾದ ಬಳಿಕ ನವೆಂಬರ್‌1ರಂದು ಸರ್ಕಾರದ ವತಿಯಿಂದ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ “ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ನೀಡಲಾಗುತ್ತಿದೆ.

ಮಾಹಿತಿ ಹಂಚಿಕೊಂಡ ಅಶ್ವಿ‌ನಿ ಪುನೀತ್‌ ರಾಜಕುಮಾರ್‌: “ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಈ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಪುನೀತ ಪರ್ವ’ ಕಾರ್ಯಕ್ರಮ ಅಕ್ಟೋಬರ್‌ 21ರ ಶುಕ್ರವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯಲಿದೆ. ಇನ್ನು ಈ ಕಾರ್ಯಕ್ರಮಕ್ಕೆ ಬರುವವರು ಬಿಳಿ ಬಣ್ಣದ ವಸ್ತ್ರವನ್ನು ಧರಿಸಿ ಬನ್ನಿ ಎಂದು ನಮೂದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next