Advertisement
“ಟೀಸರ್ ಬಿಡುಗಡೆ ಚೆನ್ನಾಗಿ ಆಯ್ತು. ಟೀಸರ್ ಬಿಡುಗಡೆಗೆ ಒಳ್ಳೆಯ ವೇದಿಕೆ ಸಿಕ್ಕಿತು. ನಾನು ಈ ಬಾರಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಅದೇ ಸಮಯದಲ್ಲಿ, ಟೀಸರ್ ಸಹ ರೆಡಿ ಇತ್ತು. ಅಲ್ಲೇ ಬಿಡುಗಡೆ ಮಾಡಿದರೆ ಹೇಗೆ ಅಂತ ಹೇಮಂತ್ ಪ್ಲಾನ್ ಮಾಡಿದರು. ಅದರಂತೆ ಅಲ್ಲೇ ಬಿಡುಗಡೆಯಾಯಿತು. ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಪ್ರತಿಕ್ರಿಯೆ ಸಿನಿಮಾ ಬಿಡುಗಡೆಗೂ ಸಿಕ್ಕಿದರೆ ಚೆನ್ನಾಗಿರುತ್ತದೆ ಅಂತ ಹೇಮಂತ್ ಹೇಳುತ್ತಿದ್ದರು. ಚಿತ್ರದ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಬಹುಶಃ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಡುಗಡೆ ಆಗಬಹುದು. ಇದರಲ್ಲಿ ನನ್ನ ಇನ್ವಾಲ್Ì ಮೆಂಟ್ ಏನೂ ಇಲ್ಲ. ಐದಾರು ಬಾರಿ ಲೊಕೇಶನ್‌ಗೆ ಹೋಗಿದ್ದೆ ಅಷ್ಟೇ. ಕ್ರಿಯೇಟಿವ್ ಸೈಡ್‌ನಲ್ಲಿ ನಂದೇನು ಇಲ್ಲ. ಸಿನಿಮಾಗೇನು ಬೇಕೋ ಕೊಟ್ಟಿದ್ದೀವಿ ಅಷ್ಟೇ’ ಎನ್ನುತ್ತಾರೆ ಪುನೀತ್ ರಾಜಕುಮಾರ್.
ಪುನೀತ್ ಸದ್ಯಕ್ಕೆ ತಮ್ಮ ಪಿಆರ್‌ಕೆ ಬ್ಯಾನರ್ನಿಂದ “ಕವಲು ದಾರಿ’ ಮತ್ತು “ಮಾಯಾ ಬಜಾರ್ 2016′ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ಇನ್ನೂ ಒಂದು ಚಿತ್ರವನ್ನು ಶುರು ಮಾಡುವ ಯೋಚನೆ ಅವರಿಗಿದೆ. ಸದ್ಯಕ್ಕೆ ಮಾತುಕತೆಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹೊಸ ಚಿತ್ರದ ಬಗ್ಗೆ ತಿಳಿಸುವುದಾಗಿ ಹೇಳುವ ಪುನೀತ್, “ನಮ್ಮ ಸಿನಿಮಾಗಳಲ್ಲದೆ, ಬೇರೆಯವರ ಸಿನಿಮಾಗಳು ಮಾಡಬೇಕು ಅಂತ ಆಸೆ ಇದೆ. ನನಗೆ ಕಮರ್ಷಿಯಲ್, ಕಲಾತ್ಮಕ, ಅವಾರ್ಡ್ ಸಿನಿಮಾ ಅಂತೆಲ್ಲಾ ಗೊತ್ತಿಲ್ಲ. ನನ್ನ ಪ್ರಕಾರ ಜನ ನೋಡುವ ಸಿನಿಮಾ ಮಾಡಬೇಕು. ಅದಕ್ಕೆ ಅವಾರ್ಡ್ ಸಹ ಬರಬೇಕು. ನಾನು ನಟನಾಗಿ ಕೆಲವು ರಿಸ್ಕ್ಗಳನ್ನು ತೆಗೆದುಕೊಳ್ಳುವುದಕ್ಕಾಗಲ್ಲ. ಅದಕ್ಕೆ ಕಾರಣ ಕಮರ್ಷಿಯಲ್ ಚೌಕಟ್ಟು. ಬ್ರಿಡ್ಜ್ ಮಾಡಿ ತೆಗೆದುಬಿಟ್ಟರೆ ಓಕೆ. ಆ ತರಹ ಕಾನ್ಸೆಪ್ಟ್ ಸಿಗಲಿಲ್ಲ ಅಂದರೆ ಜನರಿಗೆ ತಲುಪಿಸೋದು ಕಷ್ಟ. ಸದ್ಯದ ದಿನಗಳಲ್ಲಿ ಬ್ರಿಡ್ಜ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪುತ್ತಿದೆ. ರಿಷಭ್ ಶೆಟ್ಟಿ ಅವರ “ಸರ್ಕಾರಿ ಶಾಲೆ’ ಚೆನ್ನಾಗಿ ಹೋಗುತ್ತಿದೆ ಅಂತ ಕೇಳಿದ್ದೇನೆ’ ಎಂದು ಹೇಳುತ್ತಲೇ, ಆ ಚಿತ್ರ ಹೇಗಾಗುತ್ತಿದೆ ಎಂದು ಕೇಳುವ ಮೂಲಕ ಕುತೂಹಲ ತೋರಿಸಿದರು.
Related Articles
ಪುನೀತ್ ಹೊಸ ಬ್ಯಾನರ್ ಹುಟ್ಟುಹಾಕಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಸುದ್ದಿಯಾದಾಗ, ಹಲವರು ಕಥೆ ತಂದರಂತೆ. ಆದರೆ, ಸಿನಿಮಾ ತಾನಾಗಿಯೇ ಕೂಡಿಬರಬೇಕು ಎನ್ನುವುದು ಪುನೀತ್ ಅಭಿಪ್ರಾಯ. “ತುಂಬಾ ಜನ ಕೇಳ್ತಾರೆ. ಅದು ತಾನಾಗಿಯೇ ಆಗಿ ಬರಬೇಕು. ಎರಡು ಚಿತ್ರಗಳು ಆಗಿದ್ದು ಸಹ ಅದೇ ರೀತಿಯಲ್ಲಿ. ಇನ್ನು ಕೆಲವೇ ತಿಂಗಳುಗಳಲ್ಲಿ ಇನ್ನೊಂದು ಚಿತ್ರ ಶುರುವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಅದು ಡಿಸ್ಕಷನ್ ಹಂತದಲ್ಲಿದೆ. ಖಂಡಿತವಾಗಲೂ ಮೂರು ಸಿನಿಮಾ ಆಗತ್ತೆ. ನನಗೆ ನನ್ನ ಸಿನಿಮಾ ಬಗ್ಗೆ ಮಾತಾಡೋಕೆ ಗೊತ್ತಿಲ್ಲ. ಆದರೆ, ಈ ಸಿನಿಮಾಗಳನ್ನ ನಾನು ಮಾರ್ಕೆಟ್ ಮಾಡಬೇಕು, ಜನ ನೋಡಬೇಕು ಅನಿಸುತ್ತೆ. ಇವತ್ತು ಡಿಜಿಟಲ್ ಮೀಡಿಯಂ ಸಿಕ್ಕಾಪಟ್ಟೆ ಬೆಳೆದಿದೆ.
Advertisement
ವರ್ಲ್ಡ್ ಸಿನಿಮಾ ಈಗ ಕೈಯಲ್ಲೇ ಸಿಗುತ್ತದೆ. ಚಿತ್ರದ ಗುಣಮಟ್ಟ ಚೆನ್ನಾಗಿದ್ದರೆ, ಅದು ಇನ್ನೊಂದು ಭಾಷೆಯ ಅಥವಾ ಇನ್ನೊಂದು ರಾಜ್ಯದ ಸಿನಿಮಾ ಅನಿಸಲ್ಲ. ಬೇರೆ ದೇಶದಲ್ಲಿರುವವರಿಗೆ ಕನ್ನಡ, ತೆಲುಗು, ತಮಿಳು ಅಂತಿರಲ್ಲ. ಅದು ಇಂಡಿಯನ್ ಸಿನಿಮಾ ಆಗಿರತ್ತೆ. ನಾನೇ ಸ್ಪಾನಿಶ್, ಕೊರಿಯನ್ ಸಿನಿಮಾ ತುಂಬಾ ನೋಡ್ತೀನಿ’ ಎನ್ನುತ್ತಾರೆ ಪುನೀತ್.
ಸಂತೋಷ, ಭಯ ಎರಡೂ ಇದೆಪುನೀತ್ ಅಭಿನಯದ “ನಟಸಾರ್ವಭೌಮ’ ಚಿತ್ರವು ಅಕ್ಟೋಬರ್ 5ರಂದು ಬಿಡುಗಡೆಯಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಇನ್ನು ಅಂತ ಟೈಟಲ್ ಕುರಿತು ಮಾತನಾಡುವ ಅವರು, “ಆ ಹೆಸರಿಡೋದು ನಿರ್ದೇಶಕರು ಮತ್ತು ನಿರ್ಮಾಪಕರ ನಿರ್ಧಾರ. ನಿಜ ಹೇಳಬೇಕೆಂದರೆ, ಮೊದಲು ನನಗೆ ಟೈಟಲ್ ಹೇಳಿದಾಗ, ಐ ವಾಸ್ ನಾಟ್ ಓಕೆ. ಆ ಹೆಸರಿಗೆ ತುಂಬಾ ತೂಕ ಇದೆ, ಅದು ಬೇಕಾ ಅಂತನಿಸಿತ್ತು. “ರಾಜಕುಮಾರ’ ಅಂತ ಹೆಸರು ಇಟ್ಟಾಗಲೂ ಯಾಕೆ ಇದೆಲ್ಲಾ ಮಾಡ್ತಾರೆ ಅಂತ ಅನಿಸೋದು. ಆದರೆ, ಅಂತಿಮವಾಗಿ ಅದು ನಿರ್ದೇಶಕರ ವಿಷನ್. ಅಂಥದ್ದೊಂದು ಟೈಟಲ್ ಬಗ್ಗೆ ಸಂತೋಷವಿದೆಯಾದರೂ, ಭಯ ಇದೆ’ ಎಂಬುದು ಪುನೀತ್ ಅಭಿಪ್ರಾಯ. ಜಾಸ್ತಿ ಸಿನಿಮಾ ಮಾಡಬೇಕು
ಇನ್ನು “ನಟಸಾರ್ವಭೌಮ’ ನಂತರ ಪುನೀತ್, ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಚಿತ್ರಕ್ಕೆ ಹೆಸರಿಟ್ಟಿಲ್ಲವಂತೆ. ಎರಡೂ¾ರು ತಿಂಗಳಲ್ಲಿ ಎಲ್ಲವೂ ಪಕ್ಕಾ ಆಗಲಿದೆ ಎನ್ನುವ ಅವರು, ನಂತರ ತಮ್ಮ ಬ್ಯಾನರ್‌ನಲ್ಲೇ ಇನ್ನೊಂದು ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ. ಈ ವರ್ಷ ಸಿನಿಮಾ ಕಡಿಮೆಯಾಯಿತು ಎಂಬುದನ್ನು ಪುನೀತ್ ಸಹ ಒಪ್ಪಿಕೊಳ್ಳುತ್ತಾರೆ. ದೊಡ್ಡ ಹೀರೋಗಳೆಲ್ಲಾ ಹೆಚ್ಚುಹೆಚ್ಚು ಚಿತ್ರಗಳಲ್ಲಿ ನಟಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅವರ ಮಾತನ್ನು ನೆನಪಿಸಿದಾಗ, “ಅವರು ಹೇಳುವುದು ಸರಿ. ಈ ವರ್ಷ “ನಟಸಾರ್ವಭೌಮ’ ಜೊತೆಗೆ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದರೆ, ಆಗಲಿಲ್ಲ. ಎಲ್ಲರೂ ಸಿನಿಮಾ ಮಾಡುತ್ತಿದ್ದಾರೆ. ಯಾಕೋ ನಿಧಾನವಾಗುತ್ತಿದೆ. ಎಲ್ಲರೂ ಇನ್ನೂ ಜಾಸ್ತಿ ಸಿನಿಮಾಗಳನ್ನು ಮಾಡಬೇಕು. ಕಳೆದ ಎಂಟು ತಿಂಗಳುಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದು ಕಡಿಮೆಯೇ. ಇನ್ನು ಮುಂದೆ ಒಂದರಹಿಂದೊಂದು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತದೆ. ಖಂಡಿತಾ ಇಂಪ್ರೂವ್ ಆಗುತ್ತದೆ’ ಎಂದರು ಪುನೀತ್ ರಾಜಕುಮಾರ್. ಅಷ್ಟರಲ್ಲಿ, “ಗ್ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆ ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ ಎಂದು ಮಾತು ನಿರೂಪಕರಿಂದ ಕೇಳಿಸುತ್ತಿದ್ದಂತೆಯೇ, ಪುನೀತ್ ಎದ್ದು ವೇದಿಕೆ ಕಡೆ ಹೊರಟರು. ನನಗೆ ನನ್ನ ಸಿನಿಮಾ ಬಗ್ಗೆ ಮಾತಾಡೋಕೆ ಗೊತ್ತಿಲ್ಲ. ಆದರೆ, ಈ ಸಿನಿಮಾಗಳನ್ನ ನಾನು ಮಾರ್ಕೆಟ್ ಮಾಡಬೇಕು, ಜನ ನೋಡಬೇಕು ಅನಿಸುತ್ತೆ. ಇವತ್ತು ಡಿಜಿಟಲ್ ಮೀಡಿಯಂ ಸಿಕ್ಕಾಪಟ್ಟೆ ಬೆಳೆದಿದೆ. ವರ್ಲ್ಡ್ ಸಿನಿಮಾ ಈಗ ಕೈಯಲ್ಲೇ ಸಿಗುತ್ತದೆ… – ಚೇತನ್ ನಾಡಿಗೇರ್