ಚಿತ್ರದುರ್ಗ: “ಯುವರತ್ನ’ ಚಲನಚಿತ್ರದ ಪ್ರಚಾರಕ್ಕಾಗಿ ಸೋಮವಾರ ನಗರಕ್ಕೆ ಆಗಮಿಸಿದ್ದ ನಟ ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಗಳು ಪುಷ್ಪವೃಷ್ಟಿಗೈದು ಸ್ವಾಗತ ಕೋರಿದರು. ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ನಟರಾದ ಪುನೀತ್ ರಾಜಕುಮಾರ್ ಹಾಗೂ ಡಾಲಿ ಧನಂಜಯ್ ವೇದಿಕೆಗೆ ಆಗಮಿಸುತ್ತಲೇ ಸುತ್ತಲೂ ಇದ್ದ ಜೆಸಿಬಿಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಇದೇ ವೇಳೆ 200 ಕೆಜಿ ತೂಕದ ಸೇಬುಹಣ್ಣಿನ ಹಾರವನ್ನು ಕ್ರೇನ್ ನಿಂದ ಹಾಕಿ ಸಂಭ್ರಮಿಸಲಾಯಿತು. ಆಗ ಮೈದಾನದ ತುಂಬೆಲ್ಲ ಅಪ್ಪು ಎಂಬ ಶಬ್ದ ಮಾರ್ದನಿಸಿತು. “ಯುವರತ್ನ’ ಪ್ರಚಾರಾರ್ಥ ಇಡೀ ರಾಜ್ಯ ಸುತ್ತುತ್ತಿರುವ ಚಿತ್ರ ತಂಡ ಚಿತ್ರದುರ್ಗಕ್ಕೆ ಮಧ್ಯಾಹ್ನ 3:30ಕ್ಕೆ ಆಗಮಿಸಿತು. ಬಿರುಬಿಸಿಲಿನಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿ ಅಭಿಮಾನ ಮೆರೆದರು.
ನಮಸ್ಕಾರ ಚಿತ್ರದುರ್ಗ, ಹೇಗಿದ್ದೀರಿ?: ವೇದಿಕೆ ಏರಿ ಮೈಕ್ ಹಿಡಿದ ನಟ ಪುನೀತ್ ರಾಜಕುಮಾರ್ ನಮಸ್ಕಾರ, ಚಿತ್ರದುರ್ಗ, ಹೇಗಿದ್ದೀರಿ ಎಂದು ಮಾತು ಆರಂಭಿಸಿದರು. ಮಧ್ಯಾಹ್ನ 1:30ಕ್ಕೆ ಇಲ್ಲಿಗೆ ಬರಬೇಕಾಗಿತ್ತು. ಆದರೆ ತಡವಾಗಿದೆ, ಕ್ಷಮಿಸಿ ಎಂದರು.
ಅಪ್ಪು ಮಾತು ಕೇಳಿ ಸಂತಸಗೊಂಡು ಅಭಿಮಾನಿಗಳು ಜೋರಾಗಿ ಘೋಷಣೆ ಕೂಗಿದರು. ಮುಂದುವರೆದು ಮಾತನಾಡಿದ ಪವರ್ ಸ್ಟಾರ್, ಚಿತ್ರದುರ್ಗ ಎಂದಾಕ್ಷಣ ಐತಿಹಾಸಿಕ ಕಲ್ಲಿನ ಕೋಟೆ ನೆನಪಾಗುತ್ತದೆ. “ಹುಡುಗರು’ ಚಿತ್ರದ ಚಿತ್ರೀಕರಣಕ್ಕೆ ಕೋಟೆಯಲ್ಲಿ ಅವಕಾಶ ಸಿಕ್ಕಿತ್ತು. ಸುತ್ತಲಿನ ಹಲವು ಊರುಗಳಲ್ಲಿ ನಡೆದ ಹಲವು ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. “ದೊಡ್ಮನೆ ಹುಡುಗ’ ಚಿತ್ರೀಕರಣ ಕೂಡ ಇಲ್ಲಿಯೇ ನಡೆದಿತ್ತು ಎಂದು ಸ್ಮರಿಸಿಕೊಂಡರು.
ವಿದ್ಯಾರ್ಥಿಗಳು, ಶಿಕ್ಷಣ ಹಾಗೂ ಯುವ ಸಮೂಹವನ್ನು ಇಟ್ಟುಕೊಂಡು “ಯುವರತ್ನ’ ಚಿತ್ರ ಮಾಡಲಾಗಿದೆ. ಇದೊಂದು ಉತ್ತಮ ಸಂದೇಶ ನೀಡುವ ಚಿತ್ರವಾಗಿದ್ದು, ಕುಟುಂಬ ಸಮೇತ ಬಂದು ವೀಕ್ಷಿಸಬಹುದು ಎಂದರು.
ನಟ ಡಾಲಿ ಧನಂಜಯ ಮಾತನಾಡಿ, ಚಿತ್ರದುರ್ಗದಲ್ಲಿ ಅಭಿಮಾನಿಗಳನ್ನು ಕಂಡು ಸಂತೋಷವಾಗಿದೆ. ಏಪ್ರಿಲ್ 1 ರಂದು “ಯುವರತ್ನ’ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ. ಅಂದು ಹಬ್ಬದ ವಾತಾವರಣ ನಿರ್ಮಾಣವಾಗಲಿ. ಚಿತ್ರ ಬಿಡುಗಡೆಯಾದ ನಂತರ ಮತ್ತೆ ಬರುತ್ತೇವೆ ಎಂದು ತಿಳಿಸಿದರು. ಈ ವೇಳೆ ಯುವರತ್ನ ನಿರ್ದೇಶಕ ಸಂತೋಷ್ ಆನಂದರಾಮ್, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್, ಅಪ್ಪು ಅಭಿಮಾನಿಗಳ ಸಂಘದ ಅಧ್ಯಕ್ಷ ಮೋಹನ್ ಮತ್ತಿತರರು ಇದ್ದರು.