ನಟ ಪುನೀತ್ ರಾಜಕುಮಾರ್ ಯಾವುದೇ ಹೊಸಬರ ತಂಡ ಸಿನಿಮಾ ಮಾಡಬೇಕೆಂದು ಮುಂದೆ ಬಂದರೂ ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಪುನೀತ್ ಅಗಲಿ ವರ್ಷವೇ ಆದರೂ ಸಾಕಷ್ಟು ಜನ ಅವರಿಂದಾದ ಕಾರ್ಯಗಳನ್ನು ಸ್ಮರಿಸಿಕೊಂಡು ಬರುತ್ತಿದ್ದಾರೆ. ಈಗ “ಓ’ ಎಂಬ ಹಾರರ್ ಚಿತ್ರತಂಡಕ್ಕೂ ಪುನೀತ್ ಹಾಡುವ ಮೂಲಕ ಸಾಥ್ ನೀಡಿರುವುದು ಬಹಿರಂಗವಾಗಿದೆ.
ವಾಮಾಚಾರದ ಜೊತೆಗೆ ಹಾರರ್ ಕಂಟೆಂಟ್ ಒಳಗೊಂಡಿರುವ “ಓ’ ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಅಕ್ಕ-ತಂಗಿಯರಾಗಿ ನಟಿಸಿದ್ದಾರೆ. ಪ್ರೇಮಕಥಾಹಂದರ ಇರುವ ಈ ಹಾರರ್-ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ಮಹೇಶ್ ಸಿ. ಅಮ್ಮಲ್ಲಿದೊಡ್ಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರು ಹಾಡಿರುವ “ಏನೋ ಆಗಿದೆ, ಜಾದೂ ಆಗಿದೆ..’ ಎಂಬ ಹಾಡು ಬಿಡುಗಡೆಯಾಗಿದೆ. ಭರ್ಜರಿ ಚೇತನ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಕಿರಣ್ ತಲಕಾಡು ಚಿತ್ರದ ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ, “ಇದು ಹಾರರ್ ಚಿತ್ರವೇ ಆದರೂ ಹೊಸತನದ ನಿರೂಪಣೆಯಿದೆ. ಈ ಹಾಡನ್ನು ಅಪ್ಪು ಅವರ ಕೈಯಲ್ಲೇ ಹಾಡಿಸಬೇಕೆಂದು ನಮ್ಮ ಆಸೆಯಾಗಿತ್ತು. ಅದರಂತೆ ನೇರವಾಗಿ ಪುನೀತ್ ಅವರನ್ನು ಸಂಪರ್ಕಿಸಿ, ಹಾಡಿನ ವಿಶೇಷತೆ ಕುರಿತು ಹೇಳಿದಾಗ ಆವರು ನಾನು ಖಂಡಿತ ಇದನ್ನು ಹಾಡುತ್ತೇನೆ. ಚಿಂತೆ ಮಾಡಬೇಡಿ ಎಂದು ಹೇಳಿ ಕಳಿಸಿದರು. ಅಲ್ಲದೆ ಹಾಡಿನ ಬಿಡುಗಡೆ ಸಮಯದಲ್ಲಿ ನನಗೆ ಇನ್ ಫಾರ್ಮ್ ಮಾಡಿ ಬರುತ್ತೇನೆ ಅಂತಲೂ ಹೇಳಿದ್ದರು. ಅದರಂತೆ ಹಾಡಿದ್ದಾರೆ. ಒಂದು ಮನೆಯಲ್ಲಿ ಅಕ್ಕ ತಂಗಿಯರ ನಡೆಯುವ ಕಥೆ ಇದಾಗಿದ್ದು, ಚಿತ್ರದಲ್ಲಿ ವಾಮಾಚಾರ ಮಾಡುವುದು ತಪ್ಪು ಎಂದು ತೋರಿಸಿದ್ದೇವೆ. ಚಿತ್ರವೀಗ ಸೆನ್ಸಾರ್ ಮುಗಿಸಿದ್ದು, ನ.11ಕ್ಕೆ ಬಿಡುಗಡೆಯಾಗುತ್ತಿದೆ’ ಎಂಬ ಮಾಹಿತಿ ಹಂಚಿಕೊಂಡರು.
ನಂತರ ನಿರ್ಮಾಪಕ ಕಿರಣ್ ತಲಕಾಡು ಮಾತನಾಡುತ್ತಾ, ಈ ಹಾಡನ್ನು ಪುನೀತ್ ರಾಜ್ ಕುಮಾರ್ ಅವರಿಂದಲೇ ಹಾಡಿಸಬೇಕೆಂದು ಕಾದು ಹಾಡಿಸಿದೆವು. ಈ ಹಾಡು ಜನರಿಗೆ ಖಂಡಿತ ಇಷ್ಟವಾಗುತ್ತದೆ’ ಎಂದರು.
ನಾಯಕಿಯರಲ್ಲಿ ಒಬ್ಬರಾದ ಅಮೃತಾ ಅಯ್ಯಂಗಾರ್ ಮಾತನಾಡಿ ನಾನು ಚಿಕ್ಕವಳಿದ್ದಾಗಿನಿಂದಲೂ ಅಪ್ಪು ಅವರ ಅಭಿಮಾನಿ. ಅವರನ್ನು ನಾವೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಈ ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನೂ ಎಲ್ಲಾ ಥರದ ಎಮೋಷನ್ ಇರೋ ಪಾತ್ರವನ್ನು ಮಾಡಿದ್ದೇನೆ ಎಂದರು. ನಾಯಕ ಸಿದ್ದು ಮೂಲಿಮನಿ ಕೂಡಾ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು.
ಚಿತ್ರದಲ್ಲಿ ನಾಯಕಿಯರ ತಾಯಿಯಾಗಿ ಹಿರಿಯ ನಟಿ ಸಂಗೀತಾ ನಟಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ದಿಲೀಪ್ ಚಕ್ರವರ್ತಿ, ಸಂಗೀತ ನಿರ್ದೇಶಕರಾಗಿ ಕಿರಣ್ ರವೀಂದ್ರನಾಥ್ ಕೆಲಸ ಮಾಡಿದ್ದಾರೆ. ಸತೀಶ್ ಬಾಬು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.