‘ಈ ತರಹದ ಸಿನಿಮಾ ಮಾಡೋದರಲ್ಲಿ ನನಗೆ ಖುಷಿ ಇದೆ’ – ಹೀಗೆ ಹೇಳಿ ನಕ್ಕರು ಪುನೀತ್ ರಾಜಕುಮಾರ್. ಅವರ ಪಕ್ಕದಲ್ಲಿ “ಕವಲುದಾರಿ’ ಎಂಬ ಬ್ಯಾನರ್ ಇತ್ತು. ಆದರೆ, ಪುನೀತ್ ರಾಜಕುಮಾರ್ ಅವರ ದಾರಿ ಮಾತ್ರ ಸ್ಪಷ್ಟವಾಗಿತ್ತು. ಅದು ಉತ್ತಮ ಕಥೆಗಳುಳ್ಳ ಸಿನಿಮಾಗಳನ್ನು ನಿರ್ಮಿಸಿ, ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವುದು. ಪುನೀತ್ ರಾಜಕುಮಾರ್ ಅಂದು ನಟರಾಗಿ ಮಾತನಾಡುತ್ತಿರಲಿಲ್ಲ, ನಿರ್ಮಾಪಕರಾಗಿ ತಮ್ಮ ಕನಸುಗಳ ಬಗ್ಗೆ ಮಾತನಾಡುತ್ತಾ ಹೋದರು.
ಪುನೀತ್ ರಾಜಕುಮಾರ್ ಪಿಆರ್‌ಕೆ ಎಂಬ ಸಂಸ್ಥೆ ಹುಟ್ಟುಹಾಕಿ, ಆ ಮೂಲಕ ಒಂದಷ್ಟು ಹೊಸ ಬಗೆಯ ಸಿನಿಮಾಗಳನ್ನು ನಿರ್ಮಿಸಲು ಹೊರಟಿರುವುದು ನಿಮಗೆ ಗೊತ್ತೇ ಇದೆ. ಅದರ ಮೊದಲ ಹಂತವಾಗಿ “ಕವಲುದಾರಿ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ರಿಷಿ, ಅನಂತ್‌ನಾಗ್ ಪ್ರಮುಖ ಪಾತ್ರ ಮಾಡಿದ್ದಾರೆ. ಹಾಗಾದರೆ, “ಕವಲುದಾರಿ’ ಹೇಗೆ ಮೂಡಿಬಂದಿದೆ ಎಂದರೆ, “ನನಗೆ ಗೊತ್ತಿಲ್ಲ, ಚೆನ್ನಾಗಿ ಬಂದಿರುವ ವಿಶ್ವಾಸವಿದೆ’ ಎನ್ನುತ್ತಾರೆ ಪುನೀತ್. ಹಾಗಾದರೆ ಪುನೀತ್ ಸಿನಿಮಾ ನೋಡಿಲ್ವಾ ಎಂದು ನೀವು ಕೇಳಬಹುದು. ಇಲ್ಲ ಎಂಬ ಉತ್ತರ ಪುನೀತ್ ಅವರಿಂದ ಬರುತ್ತದೆ. “ನಾನು ಮೂರ್‍ನಾಲ್ಕು ದೃಶ್ಯಗಳನ್ನಷ್ಟೇ ನೋಡಿದ್ದೇನೆ. ಒಳ್ಳೆಯ ತಂಡ ಸಿಕ್ಕಿದೆ. ಸಿನಿಮಾ ಚೆನ್ನಾಗಿ ಮಾಡಿರುತ್ತಾರೆಂಬ ವಿಶ್ವಾಸವಿದೆ’ ಎನ್ನುತ್ತಾರೆ. ಪುನೀತ್ ಖುಷಿಗೆ ಮತ್ತೂಂದು ಕಾರಣ ಎಲ್ಲ ಕಡೆಯಿಂದ ಸಿಗುತ್ತಿರುವ ಖುಷಿ. “ಚಿತ್ರರಂಗದ ಎಲ್ಲರಿಂದಲೂ ನನಗೆ ಬೆಂಬಲ, ಪ್ರೋತ್ಸಾಹ ಸಿಗುತ್ತಿದೆ. ಅದು ವಿತರಕರಿಂದ ಹಿಡಿದು ಕಲಾವಿದರವರೆಗೂ ನನ್ನ ಈ ಪ್ರಯತ್ನವನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎನ್ನುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ ಎಂಬುದು ಪುನೀತ್ ಮಾತು.
ಸಿನಿಮಾ ಹೇಗೆ ಕ್ರಿಯೇಟಿವ್ ಕ್ಷೇತ್ರವೋ ಹಾಗೆ ಬಿಝಿನೆಸ್ ಕೂಡಾ ಹೌದು. ಹಾಕಿದ ಹಣ ವಾಪಾಸ್ ಬರಬೇಕೆಂದು ಪ್ರತಿಯೊಬ್ಬ ನಿರ್ಮಾಪಕನು ಬಯಸುತ್ತಾನೆ. ಈ ವಿಚಾರದಲ್ಲಿ ಪುನೀತ್ ನಿಲುವೇನು ಎಂದು ನೀವು ಕೇಳಬಹುದು. “ಮೊದಲು ನಾನು ಕಥೆ ಚೆನ್ನಾಗಿದೆಯೇ ಎಂದು ನೋಡುತ್ತೇನೆ. ಬಂಡವಾಳ, ರಿಟರ್ನ್ಸ್ ಆಮೇಲಿನ ಮಾತು. ಕ್ರಿಯೇಟಿವ್ ಫೀಲ್ಡ್‌ನಲ್ಲಿ ಕಾರ್ಪೋರೇಟ್ ಶೈಲಿಯಲ್ಲಿ ನಡೆದುಕೊಳ್ಳಲು ಸಾಧ್ಯವಿಲ್ಲ. ಎರಡು ತಿಂಗಳಲ್ಲಿ ಸಿನಿಮಾ ಮಾಡಿ ಮುಗಿಸಬೇಕು ಎಂದು ಷರತ್ತು ಹಾಕಿ ಮಾಡಲು ಆಗೋದಿಲ್ಲ. ಸಿನಿಮಾ ಕ್ರಿಯೇಟಿವ್ ಕ್ಷೇತ್ರ. ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನನ್ನ ನಿರ್ಮಾಣದ ಎರಡು ಸಿನಿಮಾಗಳು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಈ ಆ ನಂತರ ಆರಂಭವಾದ ಎರಡು ಸಿನಿಮಾಗಳು ಚಿತ್ರೀಕರಣ ಮುಗಿಸಿವೆ. ಈ ವರ್ಷವೇ ಎಲ್ಲಾ ಸಿನಿಮಾಗಳು ಬಿಡುಗಡೆಯಾಗಲಿವೆ’ ಎನ್ನುವ ಮೂಲಕ ಸಿನಿಮಾ ಕ್ರಿಯೇಟಿವ್ ಕ್ಷೇತ್ರ, ಬಂಡವಾಳ ಆ ಮೇಲಿನ ಮಾತು ಎನ್ನುತ್ತಾರೆ ಪುನೀತ್. “ಕವಲು ದಾರಿ’ ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಈಗಾಗಲೇ ಮಾರಾಟವಾಗಿದೆ. ಬಿಡುಗಡೆಗೆ ಮುನ್ನವೇ ಒಂದು ಮಟ್ಟಕ್ಕೆ ಸೇಫ್ ಆಗಿದ್ದಾರೆ. “ಸಿನಿಮಾವನ್ನು ಜನ ಬಂದು ಥಿಯೇಟರ್ ನಲ್ಲಿ ನೋಡಬೇಕು. ಆ ಮೂಲಕ ಚಿತ್ರ ಜನರಿಗೆ ತಲುಪಬೇಕು’ ಎಂಬುದು ಪುನೀತ್ ಮಾತು.
ನಿರ್ಮಾಪಕರಾಗಿ ಪ್ರಯೋಗಾತ್ಮಕ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಪುನೀತ್, ನಟರಾಗಿ ಆ ರೀತಿಯ ಕಥೆಯನ್ನು ಯಾಕೆ ಒಪ್ಪಿಕೊಳ್ಳೋದಿಲ್ಲ ಎಂದು ನೀವು ಕೇಳಬಹುದು. ಅದಕ್ಕೂ ಪುನೀತ್ ಉತ್ತರಿಸಿದ್ದಾರೆ. “ಸಾಕಷ್ಟು ಕಥೆಗಳು ಬರುತ್ತಿವೆ. ಒಂದಷ್ಟು ಮಾತುಕತೆಗಳು ನಡೆಯುತ್ತಿವೆ. ಈಗಲೇ ಅದನ್ನು ಹೇಳಿದರೆ ಚೆನ್ನಾಗಿರೋದಿಲ್ಲ. ಎಲ್ಲವೂ ಅಂತಿ ಮವಾದಾಗ ನಾನೇ ಹೇಳುತ್ತೇನೆ. ಪ್ರಯೋಗಾತ್ಮಕ ಸಿನಿಮಾ ಮಾಡುವ ಆಸೆ ನನಗೂ ಇದೆ. ಅದೇ ಕಾರಣದಿಂದ ನಾನು “ಮೈತ್ರಿ’ ಮಾಡಿದ್ದು. ಆ ತರಹದ ಸಿನಿಮಾಗಳನ್ನು ಅದರದ್ದೇ ರೀತಿಯಲ್ಲಿ ರಿಲೀಸ್ ಮಾಡಬೇಕು. ಅದಕ್ಕೆ ಕಮರ್ಷಿಯಲ್ ಟಚ್ ಕೊಡಬಾರದು’ ಎನ್ನುತ್ತಾರೆ ಪುನೀತ್ ರಾಜಕುಮಾರ್.
ಪುನೀತ್ ನಿರ್ಮಾಣದಲ್ಲಿ ತಯಾರಾಗುವ ಸಿನಿಮಾಗಳ ಕಥೆಯನ್ನು ಅಂತಿಮವಾಗಿ ಆಯ್ಕೆ ಮಾಡೋದು ಯಾರು ಎಂದರೆ ಎಲ್ಲರೂ ಎನ್ನುತ್ತಾರೆ. “ನಾವು ಎಲ್ಲರ ಸಲಹೆ ಪಡೆಯುತ್ತೇವೆ. ಅಂತಿಮವಾಗಿ ಯಾವುದು ಬೆಸ್ಟ್ ಅನಿಸುತ್ತೋ ಅದನ್ನು ಮಾಡುತ್ತೇವೆ. ಅದು ಬಿಟ್ಟು, ಇನ್ನೂ ಸ್ಕ್ರಿಪ್ಟ್ ಕಾನ್ಸೆಪ್ಟ್ ಟೀಂ ಮಾಡಿಕೊಂಡಿಲ್ಲ’ ಎನ್ನುವ ಪುನೀತ್ ನಿರ್ಮಾಪಕರಾಗಿ ಖುಷಿಯಾಗಿದ್ದಾರಂತೆ. ಏಕೆಂದರೆ ನಟನೆ ಮಾಡುವಾಗ ಡಯೆಟ್ ಮಾಡಬೇಕು, ಅದೇ ನಿರ್ಮಾಣವಾದರೆ ತನಗೆ ಇಷ್ಟಬಂದಿದ್ದನ್ನು ತಿನ್ನಬಹುದು ಎನ್ನುವುದು ಅವರು ಕೊಡುವ ತಮಾಷೆಯ ಕಾರಣ.
— ರವಿಪ್ರಕಾಶ್ ರೈ