Advertisement

ತಾಯಿಯ ಕನಸಿಗೆ ಪವರ್‌ ತಂದಿದ್ದ ಪುನೀತ್‌

11:22 PM Oct 29, 2021 | Team Udayavani |

ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ಕುಟುಂಬದ “ವಜ್ರೇಶ್ವರಿ ಕಂಬೈನ್ಸ್‌’ನಡಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಅದು ಅವರೇ ಹೀರೋ ಆಗಿ. ಆದರೆ, ಪುನೀತ್‌ ಅವರಿಗೊಂದು ಆಸೆ ಇತ್ತು. ಅದು ತನ್ನದೇ ಆದ ಒಂದು ಹೊಸ ಬ್ಯಾನರ್‌ ಹುಟ್ಟುಹಾಕಿ, ಆ ಮೂಲಕ ಒಂದಷ್ಟು ಹೊಸ ಬಗೆಯ ಸಿನಿಮಾಗಳನ್ನು ಮಾಡಬೇಕು ಎಂಬುದು. ಅದರ ಪರಿಣಾಮವಾಗಿಯೇ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಾಕಿದ ಸಂಸ್ಥೆ “ಪಿಆರ್‌ಕೆ’.

Advertisement

ಇದು ಪುನೀತ್‌ರಾಜ್‌ಕುಮಾರ್‌ ಅವರ ಕನಸಿನ ಕೂಸು. “ಪಿಆರ್‌ಕೆ’ ಎಂದರೆ ಪುನೀತ್‌ ರಾಜ್‌ಕುಮಾರ್‌ ಎಂದಲ್ಲ. ಬದಲಿಗೆ ಪಾರ್ವತಮ್ಮ ರಾಜ್‌ಕುಮಾರ್‌ ಎಂದು. ಈ ಸಂಸ್ಥೆಯಲ್ಲಿ ಮೊದಲು ನಿರ್ಮಾಣವಾದ ಚಿತ್ರ “ಕವಲುದಾರಿ’. ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪುನೀತ್‌ ತಮ್ಮ ಕನಸಿನ ಬ್ಯಾನರ್‌ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅವರ ಆ ಮಾತು ಕಿವಿಯಲ್ಲಿ ಈಗಲೂ ಪ್ರತಿಧ್ವನಿಸುತ್ತಿದೆ. ಅಂದು ಅವರು ಹೇಳಿದ್ದನ್ನು ಅವರ ಮಾತಲ್ಲೇ ಹೇಳುವುದಾದರೆ, “ಇದು ನಾವು ಅಮ್ಮನ ಹೆಸರಿನಲ್ಲಿ ಆರಂಭಿಸಿರುವ ಬ್ಯಾನರ್‌. ಪಿಆರ್‌ಕೆ ಎಂದರೆ ಪಾರ್ವತಮ್ಮ ರಾಜಕುಮಾರ್‌. ಇದು ವಜ್ರೇಶ್ವರಿಯಿಂದ ಹೊರತಾದ ಸಂಸ್ಥೆಯಲ್ಲ. ವಜ್ರೇಶ್ವರಿಯಡಿಯಲ್ಲೇ ಬರುವ ಮತ್ತೂಂದು ಸಂಸ್ಥೆ. “ನನಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ತುಂಬಾ ವರ್ಷಗಳಿಂದ ಇತ್ತು. ಅದಕ್ಕಿಂತ ಹೆಚ್ಚಾಗಿ ನಮ್ಮ ಬ್ಯಾನರ್‌ನಲ್ಲಿ ತುಂಬಾ ಸಿನಿಮಾ ಮಾಡಬೇಕೆಂಬ ಆಸೆ ನನಗೆ ಚಿಕ್ಕಂದಿನಿಂದಲೇ ಇತ್ತು. ನಮ್ಮ ತಾಯಿ ನಮಗೆ ಒಂದು ಹೇಳಿಕೊಟ್ಟಿದ್ದಾರೆ. ಸದಾ ಬಿಝಿಯಾಗಿರಬೇಕು, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು. ನಾನು ನೋಡಿದಂತೆ ನಮ್ಮ ತಾಯಿ ಸದಾ ಬಿಝಿಯಾಗಿದ್ದರು. ಅವರು ಫ್ರೀಯಾಗಿರೋದನ್ನು ನಾನು ನೋಡೇ ಇಲ್ಲ. ಅವರು 80ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಅದನ್ನು 100 ದಾಟಿಸಬೇಕೆಂಬುದು ನಮ್ಮ ಆಸೆ’ ಎಂದು ಕನಸು ತುಂಬಿದ ಕಂಗಳೊಂದಿಗೆ ಪುನೀತ್‌ ಹೇಳಿದ್ದರು.

ಇದನ್ನೂ ಓದಿ:ಅಪ್ಪು ಅಂತಿಮ ನಮನ : ಕಂಠೀರವ ಸ್ಟೇಡಿಯಂ ಬಳಿ ನೂಕು ನುಗ್ಗಲು

ಅದರಂತೆ ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. “ಕವಲು ದಾರಿ’, “ಮಾಯಾ ಬಜಾರ್‌’, “ಲಾ’, “ಫ್ರೆಂಚ್‌ ಬಿರಿಯಾನಿ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಪುನೀತ್‌, ಮತ್ತೂಂದಿಷ್ಟು ಸಿನಿಮಾಗಳ ನಿರ್ಮಾಣಕ್ಕೆ ತಯಾರಿ ಮಾಡಿಕೊಂಡಿದ್ದರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ಎಲ್ಲಾ ಸಿನಿಮಾಗಳ ಕಥೆ ಭಿನ್ನವಾಗಿರುವ ಜೊತೆಗೆ ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು. ಪಿಆರ್‌ಕೆ ಹೆಸರಿನಲ್ಲಿಯೇ “ಪಿಆರ್‌ಕೆ ಆಡಿಯೋ’ ಆರಂಭಿಸಿ, ಆ ಮೂಲಕ ಹೊಸ ಪ್ರತಿಭೆಗಳ ಆಡಿಯೋಗಳನ್ನು ಹೊರ ತಂದಿದ್ದರು. ಆದರೆ, ಈಗ ಪಿಆರ್‌ಕೆ ಯಜಮಾನನ್ನೇ ಕಳೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next