Advertisement
ತಮ್ಮ ತಂದೆ ಡಾ| ರಾಜ್‌ಕುಮಾರ್ ಆವರೊಂದಿಗೆ ಚಿಕ್ಕ ವಯಸ್ಸಿನಲ್ಲೇ ದಾವಣಗೆರೆಗೆ ಬಂದು ಹೋಗುತ್ತಿದ್ದ ಪುನೀತ್‌ಗೆ ದಾವಣಗೆರೆ ಎಂದರೆ ಫೇವರಿಟ್. ಚಿತ್ರಗಳ ಪ್ರಚಾರ, ಸಂಭ್ರಮಾಚರಣೆಗೆ ಬಂದ ಸಂದರ್ಭದಲ್ಲಿ ರಾಜ್‌ಕುಮಾರ್ ರವರು ದಾವಣಗೆರೆಯ ಬಗ್ಗೆ ಹೇಳುತ್ತಿದ್ದುದ್ದನ್ನು ಸದಾ ಸ್ಮರಿಸುತ್ತಿದ್ದರು.
Related Articles
Advertisement
ಜಗಳೂರಿನಂತಹ ಸಣ್ಣ ಪಟ್ಟಣವನ್ನು ಆಯ್ಕೆ ಮಾಡಿಕೊಂಡು ಚಿತ್ರೀಕರಣ ನಡೆಸಿದ್ದನ್ನು ಜನರು ಮರೆಯುವಂತೆಯೇ ಇಲ್ಲ. ದಾನಶೂರ ಕರ್ಣನಾಗಿದ್ದರು: ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗದಂತೆ ದಾನ, ಧರ್ಮ, ಸಹಾಯ ಮಾಡಬೇಕು ಎನ್ನುವ ಮಾತಿ ನಂತೆ ನಡೆದುಕೊಳ್ಳುತ್ತಿದ್ದ ಪುನೀತ್ ರಾಜ್‌ಕುಮಾರ್, ಅನೇಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡಿದ್ದಾರೆ.
ಚನ್ನಗಿರಿ ಪಟ್ಟಣದ ಕಣಸಾಲು ಬಡಾವಣೆ ನಿವಾಸಿ ಕುಮಾರ್ ಮತ್ತು ಮಂಜುಳಾ ದಂಪತಿ ಪುತ್ರಿ ಪ್ರೀತಿಯೂ ಸಹಾಯ ಪಡೆದವರಲ್ಲಿ ಒಬ್ಬರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರೀತಿಯ ಶಸ್ತ್ರಚಿಕಿತ್ಸೆಗೆ 12.5 ಲಕ್ಷ ರೂ.ಗಳನ್ನು ಪುನೀತ್ ರಾಜ್ ಕುಮಾರ್‌ರವರೇ ಭರಿಸಿದ್ದರು. ಮಗಳಿಗೆ ಪುನರ್ಜನ್ಮ ನೀಡಿರುವ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಕುಮಾರ್ ಕುಟುಂಬ ಕಂಬನಿ ಮಿಡಿದಿದೆ.
ದೊಡ್ಮನೆ ಹುಡುಗ, ನಟಸಾರ್ವಭೌಮ, ಯುವರತ್ನ ಚಿತ್ರಗಳ ಪ್ರಚಾರ, ಸಂಭ್ರಮಾಚರಣೆಗೆ ದಾವಣಗೆರೆಗೆ ಪುನೀತ್ ರಾಜ್‌ಕುಮಾರ್ ಬಂದಿದ್ದರು. ಅವರು ಬಹಳ ಇಷ್ಟಪಡುತ್ತಿದ್ದ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಚಿಕ್ಕಪ್ಪನಿಗೆ ಸಾಥ್ ನೀಡಿದ್ದರು. ನಟಸಾರ್ವಭೌಮ ಚಿತ್ರದ 25ನೇ ದಿನದ ಸಂಭ್ರಮಾಚರಣೆಗೆ ದಾವಣಗೆರೆಗೆ ಬಂದಿದ್ದ
ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಪುನೀತ್ ರಾಜ್‌ಕುಮಾರ್, ಒಂದೊಳ್ಳೆಯ ಕಥೆ ದೊರೆತಲ್ಲಿ ನಾನು, ಶಿವಣ್ಣ, ರಾಘಣ್ಣ ಒಟ್ಟಿಗೆ ಫಿಲ್ಮ್ ಮಾಡುತ್ತೇವೆ. ಕಥೆಗಾಗಿ ಹುಡುಕಾಟ ನಡೆಯುತ್ತಿದೆ ಎಂದಿದ್ದರು. ಆದರೆ ವಿಧಿಯಾಟದ ಮುಂದೆ ಈ ಕನಸು ನನಸಾಗಲೇ ಇಲ್ಲ.
ಕಳೆದ ಜ.18 ರಂದು ಹರಿಹರ ಪೀಠದಲ್ಲಿ ನಡೆದ ಹರ ಜಾತ್ರಾ ಮಹೋತ್ಸವದಲ್ಲಿ ಸಚಿವ ಮುನಿರತ್ನಂ ಅವರೊಂದಿಗೆ ಬಂದಿದ್ದ ಪುನೀತ್ ರಾಜ್‌ಕುಮಾರ್ ಈಗ ನೆನಪುಮಾತ್ರ. ದಾವಣಗೆರೆ ಜಿಲ್ಲೆಯ ವಿವಿಧೆಡೆ ಅಚ್ಚಳಿಯದ ನೆನಪುಗಳ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.
-ರಾ. ರವಿಬಾಬು