ಪುನೀತ್ ರಾಜ್‌ಕುಮಾರ್ ನಿಧನರಾಗಿ ಶನಿವಾರಕ್ಕೆ ಮೂರು ತಿಂಗಳು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ವರ್ಗ ಶನಿವಾರ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ತೆರಳಿ ಪೂಜೆಸಲ್ಲಿಸಿದರು. ಈ ವೇಳೆ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕುಟುಂಬ ವರ್ಗ ಹಾಜರಿತ್ತು.
ಎಂದಿನಂತೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡಾ ಆಗಮಿಸಿ, ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು. ಇನ್ನು ಇದೇ ವೇಳೆ ರಾಜ್ ಕುಟುಂಬ ಅಭಿಮಾನಿಗಳಿಗೆ 500 ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಕಾಳಜಿ ಮೆರೆಯಿತು. ಮುಂದಿನ ದಿನಗಳಲ್ಲಿ ಸಮಾಧಿ ಬಳಿ ಬರುವ ಅಭಿಮಾನಿಗಳಿಗೆ ಮತ್ತಷ್ಟುಗಿಡಗಳನ್ನು ವಿತರಿಸಿ, ಪುನೀತ್ ಹುಟ್ಟುಹಬ್ಬದ ವೇಳೆ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ವಿತರಿಸುವ ಗುರಿ ಹೊಂದಿದೆ. ಈ ಕುರಿತು ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, “ಎಲ್ಲೆಲ್ಲಿಂದಲೋ ಕಷ್ಟಪಟ್ಟು ಅಪ್ಪು ಮೇಲಿನ ಪ್ರೀತಿಗಾಗಿ ಅಭಿಮಾನಿಗಳು ಬರುತ್ತಿದ್ದಾರೆ.
ಹೀಗೆ ಬರುವ ಅಭಿಮಾನಿಗಳಿಗೆ ಒಂದೊಂದು ಗಿಡ ನೀಡಿದರೆ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ. ಅಪ್ಪುಗೆ ಪರಿಸರ, ಕಾಡೆಂದರೆ ತುಂಬಾ ಇಷ್ಟ. ಹೀಗಾಗಿ ಅಭಿಮಾನಿಗಳು ಗಿಡ ನೆಟ್ಟು, ಅದನ್ನು ಒಂದು ವರ್ಷ ನೋಡಿಕೊಂಡರೆ ಮತ್ತೆ ಅದು ಬೆಳೆದುಕೊಂಡು ಹೋಗುತ್ತದೆ. ಇದಲ್ಲದೇ ಗಿಡ, ಮರಗಳಲ್ಲಿ ಆತ್ಮಗಳು ವಾಸಿಸುತ್ತವೆ ಎಂಬ ನಂಬಿಕೆಯೂ ಇದೆ. ಹಾಗಾಗಿ, ಆ ಆತ್ಮಗಳಿಗೂ ನಾವು ಗೌರವ ಕೊಟ್ಟಂತಾಗುತ್ತದೆ. ಅಪ್ಪು ಅಭಿಮಾನಿಗಳು ಗಿಡ ನೆಟ್ಟು ಇಡೀ ಕರ್ನಾಟಕವನ್ನು ಹಸಿರಾಗಿಸಬೇಕು’ ಎಂದು ಮನವಿ ಮಾಡಿದರು.
ಇನ್ನು, ಶನಿವಾರ ಸಮಾಧಿ ಬಳಿ ಅನ್ನದಾನ ಹಾಗೂ ಸಂಜೆ ವೇಳೆ ದೀಪೋತ್ಸವ ಕೂಡಾ ನಡೆಯಿತು.