ಬೆಂಗಳೂರು: ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಮಾನವೀಯ ಸಂಕಷ್ಟಗಳ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರು ಮೊದಲಿಗರಾಗಿ ಸ್ಪಂದಿಸುತ್ತಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಅಗಲಿದ ನಟ ಪುನೀತ್ ಅವರನ್ನು ನೆನೆದು ಜಯಕರ್ನಾಟಕ ಸಂಸ್ಥೆ ಮಲ್ಲೇಶ್ವರದಲ್ಲಿ ಶನಿವಾರ ಏರ್ಪಡಿಸಿದ್ದ ‘ಅಪ್ಪುಗೆ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆರೆ ಹಾವಳಿಯಂತಹ ಸಂಕಷ್ಟದ ವೇಳೆ ಸ್ವತಃ ತಾವಾಗಿಯೇ ಕರೆ ಮಾಡಿ ತನ್ನಿಂದ ಏನು ಸಹಾಯವಾಗಬೇಕೆಂದು ಕೇಳುತ್ತಿದ್ದರು. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಕೂಡ ಅವರು ಇದೇ ರೀತಿ ಮಿಡಿದು ನೆರವು ನೀಡಿದ್ದರು ಎಂದು ಸ್ಮರಿಸಿದರು.
ಪುನೀತ್ ಅವರು ಜನರ ಕಷ್ಟಕ್ಕೆ ಸ್ಪಂದಿಸಿ ದೊಡ್ಡ ಮೊತ್ತದ ಸಹಾಯ ನೀಡುತ್ತಿದ್ದರು. ನಂದಿನಿ ಹಾಲಿಗೆ ಹೇಗೆ ಉಚಿತವಾಗಿ ಜಾಹೀರಾತು ಕೊಟ್ಟು ಸಹಕಾರಿಯಾಗಿದ್ದರೋ ಅದೇ ರೀತಿ ಐಟಿಐ ಸಮವಸ್ತ್ರ ಧರಿಸಿ ಜಾಹೀರಾತು ಕೊಟ್ಟು ವಿದ್ಯಾರ್ಥಿಗಳನ್ನು ಐಟಿಐ ಓದಿನತ್ತ ಸೆಳೆಯಲು ಅನುಕೂಲ ಮಾಡಿಕೊಟ್ಟಿದ್ದರು ಎಂದು ಅಶ್ವತ್ಥ ನಾರಾಯಣ ನೆನೆದರು.
ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ
ಜಯ ಕರ್ನಾಟಕ ಅಧ್ಯಕ್ಷ ಜಗದೀಶ್, ಕಾರ್ಯಾಧ್ಯಕ್ಷ ರಾಮಚಂದ್ರಯ್ಯ, ಬಿಜೆಪಿ ಮುಖಂಡ ನಾಗೇಶ ಈ ಸಂದರ್ಭದಲ್ಲಿ ಇದ್ದರು.