Advertisement

ಮಗುವಾಗಿ ಚಿತ್ರರಂಗಕ್ಕೆ ಕಾಲಿಟ್ಟ ”ಅಪ್ಪು”ಅರಸಾಗಿ ಮೆರೆದಿದ್ದರು!

03:27 PM Oct 29, 2021 | ವಿಷ್ಣುದಾಸ್ ಪಾಟೀಲ್ |

ಬೆಂಗಳೂರು : 46 ವರ್ಷ ಚಿತ್ರರಂಗದಲ್ಲಿ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ನಿಜವಾಗಿಯೂ ಬಡವಾಗಿದೆ. ಜನ್ಮಜಾತ ಪ್ರತಿಭೆಯಿಂದ ಪಾತ್ರಗಳಿಗೆ ಜೀವ ತುಂಬಿದ್ದ ಪುನೀತ್ ರಾಜ್ ಕುಮಾರ್ ಅವರು ಮರೆಯಾಗಿರುವುದು ಯಾರಿಗೂ ನಂಬಲಸಾಧ್ಯವಾದ ಸುದ್ದಿ.

Advertisement

ಆಗ ‘ಲೋಹಿತ್’ ಎಂದು ಕರೆಯಲ್ಪಡುತ್ತಿದ್ದ ಪುನೀತ್ ಅವರು ಆರು ತಿಂಗಳ ಮಗುವಾಗಿದ್ದಾಗಲೇ ಕ್ಯಾಮರಾ ಮುಂದೆ ಕಾಣಿಸಿಕೊಂಡು ಬಣ್ಣದ ಬದುಕಿಗೆ ನಾಂದಿ ಹಾಡಿದ್ದರು. ಡಾ. ರಾಜ್ ಕುಮಾರ್ ನಟಿಸಿದ್ದ ನಿರ್ದೇಶಕ ವಿ. ಸೋಮಶೇಖರ್ ಅವರ ಥ್ರಿಲ್ಲರ್ ಚಿತ್ರ ‘ಪ್ರೇಮದ ಕಾಣಿಕೆ’ (1976) ಯಲ್ಲಿ ಮಗುವಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದರ ನಂತರ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿಯನ್ನು ಆಧರಿಸಿದ ವಿಜಯ್ ಅವರ ‘ಸನಾದಿ ಅಪ್ಪಣ್ಣ’ (1977), ಒಂದು ವರ್ಷದ ಮಗುವಾಗಿದ್ದಾಗ ”ತಾಯಿಗೆ ತಕ್ಕ ಮಗ” (1978), ಎರಡು ವರ್ಷಗಳ ನಂತರ, ನಿರ್ದೇಶಕರು ದೊರೈ-ಭಗವಾನ್ ಅವರ ”ವಸಂತ ಗೀತ” (1980) ದಲ್ಲಿ ‘ಶ್ಯಾಮ್’ ಪಾತ್ರದಲ್ಲಿ ನಟಿಸಿದರು.

ಕೆ .ಎಸ್ . ಎಲ್ . ಸ್ವಾಮಿಯವರ ಪೌರಾಣಿಕ  ”ಭೂಮಿಗೆ ಬಂದ ಭಗವಂತ” ದಲ್ಲಿ ಭಗವಾನ್ ಕೃಷ್ಣನಾಗಿ ಕಾಣಿಸಿಕೊಂಡರು.

”ಭಾಗ್ಯವಂತ” (1982) ಚಿತ್ರಕ್ಕಾಗಿ ಪುನೀತ್ ತಮ್ಮ ಮೊದಲ ಜನಪ್ರಿಯ ಹಾಡು “ಬಾನ ದಾರಿಯಲ್ಲಿ ಸೂರ್ಯ ತೇಲಿ ಬಂದ.. ” ಧ್ವನಿಮುದ್ರಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಆ ಹಾಡು ಹೊಸ ದಾಖಲೆ ನಿರ್ಮಿಸಿತ್ತು.

‘ಚಲಿಸುವ ಮೊಡಗಳು’ ಮತ್ತು ‘ಹೊಸಬೆಳಕು’ ಚಿತ್ರಗಳಲ್ಲಿ ತಂದೆಯೊಂದಿಗೆ ಅಮೋಘವಾಗಿ ನಟಿಸಿದ ಅಪ್ಪು ‘ಚಲಿಸುವ ಮೊಡಗಳು’ ಚಿತ್ರಕ್ಕಾಗಿ ಮೊದಲ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ‘ಅತ್ಯುತ್ತಮ ಬಾಲ ನಟ’ ಬಾಚಿಕೊಂಡಿದ್ದರು.

Advertisement

ಪ್ರಹ್ಲಾದನಾಗಿ ನಟಸಾರ್ವಭೌಮನ ಕೀರ್ತಿ ಬೆಳಗಿದ್ದ ದೊಡ್ಮನೆ ಹುಡುಗ

1983 ರಲ್ಲಿ ಪುನೀತ್ ಅವರು ಎರಡು ಪೌರಾಣಿಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು: ”ಭಕ್ತ ಪ್ರಹ್ಲಾದ” ಚಿತ್ರದಲ್ಲಿ , ಪ್ರಹ್ಲಾದನ ಪಾತ್ರ ನಿರ್ವಹಿಸಿ ತಂದೆಯ ಹಿರಣ್ಯ ಕಶ್ಯಪು ಪಾತ್ರಕ್ಕೆ ತನ್ನ ಸಮಬಲದ ಅಭಿನಯ ತೋರಿದ್ದರು. ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಎರಡನೇ ಬಾರಿ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ಪಡೆದಿದ್ದರು.

1984 ರಲ್ಲಿ ರಾಜ್‌ಕುಮಾರ್ ಅವರೊಂದಿಗೆ ಥ್ರಿಲ್ಲರ್ ಚಿತ್ರ ”ಯಾರಿವನು” ನಟಿಸಿದರು, ಚಿತ್ರದಲ್ಲಿ ರಾಜನ್-ನಾಗೇಂದ್ರ ಬರೆದ “ಕಣ್ಣಿಗೆ ಕಾಣುವ ದೇವರು…” ಹಾಡನ್ನು ಹಾಡಿ ಇನ್ನಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು.

ಬಾಲನಟನಾಗಿ 1985 ರಲ್ಲಿ ‘ಬೆಟ್ಟದ ಹೂವು’ ಚಿತ್ರದ ಮುಗ್ಧ ರಾಮು ಪಾತ್ರಕ್ಕಾಗಿ ಪುನೀತ್ ಅವರು 33 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ಬಾಲ ಕಲಾವಿದ’ ಪ್ರಶಸ್ತಿಯನ್ನು ಪಡೆದು ತಾನೊಬ್ಬ ಭವಿಷ್ಯದ ದೊಡ್ಡ ಪ್ರತಿಭೆ ಎನ್ನುವುದನ್ನು ತೋರಿದ್ದರು.

ಹದಿಹರೆಯದಲ್ಲಿ ಶಿವ ಮೆಚ್ಚಿದ ಕಣ್ಣಪ್ಪ (1988) ದ ಲ್ಲಿ ತನ್ನ ಹಿರಿಯ ಸಹೋದರ ಶಿವರಾಜ್ ಕುಮಾರ್ ಅವರೊಂದಿಗೆ ಯುವ ಕಣ್ಣಪ್ಪನಾಗಿ ಕಾಣಿಸಿಕೊಂಡರು. ಪುನೀತ್ ಅವರು ಬಾಲನಟನಾಗಿ ಕೊನೆಯದಾಗಿ ”ಪರಶುರಾಮ್” (1989)ಚಿತ್ರದಲ್ಲಿ ತಂದೆಯೊಂದಿಗೆ ನಟಿಸಿದ್ದರು.

ಬಾಲನಟನಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಪುನೀತ್ ಅವರು 2002ರಲ್ಲಿ ”ಅಪ್ಪು” ಚಿತ್ರದ ಮೂಲಕ ನಾಯಕನಾಗಿ ಭರ್ಜರಿ ಪುನರಾಗಮನ ಮಾಡಿದ್ದರು. ಚಿತ್ರ ದಲ್ಲಿ ರಕ್ಷಿತಾ ಅವರು ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next