“ಲಾಸ್ಟ್ ಬಸ್’ ನಂತರ ನಿರ್ದೇಶಕ ಅರವಿಂದ್ ಆ್ಯಕ್ಷನ್ ಕಟ್ ಹೇಳಿರುವ “ಮಟಾಶ್’ ಚಿತ್ರವು ಈಗಾಗಲೇ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಪುನೀತ್ ರಾಜಕುಮಾರ್ ಚಿತ್ರಕ್ಕೊಂದು ಹಾಡು ಹಾಡಿದ್ದು, ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹೌದು! ಇದೇ ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಅವರು ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡು ಮಾಡುತ್ತಿದೆ.
ಈ ಹಾಡು ಚಿತ್ರದ ಆರಂಭದಲ್ಲೇ ಮೂಡಿಬರಲಿದ್ದು, ಚಿತ್ರದ ಕಲಾವಿದರನ್ನು ಪರಿಚಯಿಸುವ ಈ ಹಾಡಲ್ಲಿ, ಯುವ ಪೀಳಿಗೆ ಹೇಗೆಲ್ಲಾ ಹಣ ಮಾಡಲು ಕೆಲ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೆ, ಯಾವ ದಾರಿ ಹಿಡಿಯುತ್ತದೆ, ಬೆಟ್ಟಿಂಗ್, ಬಿಜಿನೆಸ್ ಹೀಗೆ ಹಲವು ವಿಧದ ದಾರಿಯಲ್ಲಿ ಸಾಗುತ್ತಾರೆ ಎಂಬ ಕುರಿತಾದ ಹಾಡಿಗೆ ಪುನೀತ್ ಧ್ವನಿಯಾಗಿದ್ದಾರೆ. ಅಂದಹಾಗೆ, ಬಿಜಾಪುರದ ಸುನೀಲ್ ಕುಮಾರ್ ಸುಧಾಕರ್ ಅವರು ಬರೆದ “ಚಜ್ಜಿ ರೊಟ್ಟಿ ಚವಳಿಕಾಯಿ …’ ಎಂಬ ಗೀತೆಯನ್ನು ಪವರ್ ಸ್ಟಾರ್ ಹಾಡಿದ್ದಾರೆ.
ನಿರ್ದೇಶಕ ಅರವಿಂದ್ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉಳಿದಂತೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರಕ್ಕೆ ಮಲ್ಲಿಕಾರ್ಜುನ್ ಸಂಭಾಷಣೆಗೆ ಸಾಥ್ ನೀಡಿದ್ದಾರೆ. ಚಿತ್ರವು ಕಾಮಿಕಲ್ ಥ್ರಿಲ್ಲರ್ ಆಗಿದ್ದು, ಅಪನಗಧೀಕರಣ ನಂತರ ಆದಂತಹ ಸತ್ಯ ಘಟನೆಗಳ ಆಧಾರಿತ ಕಾಲ್ಪನಿಕ ಸಿನಿಮಾ ಇದು. ಆ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅನುಕೂಲಕ್ಕೆ ಏನೆಲ್ಲಾ ಮಾಡಿದರು.
ಯಾವುದನ್ನೆಲ್ಲಾ ಬಳಸಿಕೊಂಡರು ಎಂಬುದನ್ನು ಒಂದು ಯೂಥ್‌ಫುಲ್ ಸ್ಟೋರಿ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರಂತೆ. ಚಿತ್ರಕ್ಕೆ ಗಿರೀಶ್ ಪಟೇಲ್, ಸತೀಶ್ ಪಾಟಕ್, ಚಂದ್ರಶೇಖರ್ ಜೊತೆಗೂಡಿ ಅರವಿಂದ್ ಕೂಡ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇನ್ನು “ಲಾಸ್ಟ್ ಬಸ್’ನಲ್ಲಿ ನಟಿಸಿದ್ದ ಸಮರ್ಥ್ ನರಸಿಂಹರಾಜು, ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದಿರುವ ಯುವ ಪ್ರತಿಭೆ ಗಣೇಶ್, ವಿ. ಮನೋಹರ್, ರಾಘವೇಂದ್ರ ರಾಮಕೊಪ್ಪ, ಅಮೋಘ ಸೇರಿದಂತೆ ಇನ್ನಷ್ಟು ಹೊಸ ಮುಖಗಳು ಇಲ್ಲಿ ಕಾಣಿಸಿಕೊಂಡಿವೆ.