Advertisement
ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಚಾಮರಾಜನಗರ ಜಿಲ್ಲೆ ಜೀವ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಸಂಪನ್ಮೂಲ ಮತ್ತು ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ. ಚಾಮರಾಜನಗರ ಜಿಲ್ಲೆ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುವಂತೆ ಸಮಗ್ರ ಅಭಿವೃದ್ಧಿಯೊಂದಿಗೆ ಜಿಲ್ಲೆಯನ್ನು ಚೆಂದಗಾಣಿಸುವ ಉದ್ದೇಶವನ್ನು ಸಮರ್ಥವಾಗಿ ಬಿಂಬಿಸಲು ಜಿಲ್ಲೆಯ ರಾಯಭಾರಿಯಾಗಿ ಮೂಲತ: ಚಾಮರಾಜನಗರ ಜಿಲ್ಲೆಯವರೇ ಆದ ನಟ ಪುನೀತ್ ರಾಜ್‌ಕುಮಾರ್ ಇನ್ನುಮುಂದೆ ಕಾರ್ಯನಿರ್ವಹಿಸಲಿದ್ದಾರೆ.
Related Articles
Advertisement
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಪುನೀತ್ ರಾಜ್‌ಕುಮಾರ್ ಅವರು ಅಭಿವೃದ್ಧಿ ರಾಯಭಾರಿಯಾಗಿ ಸೇವೆ ಸಲ್ಲಿಸುವುದರಿಂದ ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಇತರೆ ಕ್ಷೇತ್ರಗಳು ಪ್ರಗತಿಯಾಗಿ ಜಿಲ್ಲೆಯ ಅಭಿವೃದ್ಧಿ ವೇಗ ಇನ್ನೂ ಹೆಚ್ಚಾಗಲಿದೆ. ಜಿಲ್ಲಾಡಳಿತದ ಪ್ರಸ್ತಾವಕ್ಕೆ ತುಂಬಾ ಪ್ರೀತಿಯಿಂದ ಪುನೀತ್ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಚಾಮರಾಜನಗರ ಅನೇಕ ದೃಷ್ಟಿಯಿಂದ ಸಂಪದ್ಭರಿತವಾಗಿದೆ. ಆದರೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಬಂದಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ನೈಸರ್ಗಿಕ ಸಂಪತ್ತು ಸಂರಕ್ಷಣೆಯೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಂದೋಲನವಾಗಬೇಕು. ಈ ನಿಟ್ಗಟಿನಲ್ಲಿ ಜಿಲ್ಲಾಧಿಕಾರಿಯವರು ಕಾರ್ಯಚಟುವಟಿಕೆಗಳನ್ನು ರೂಪಿಸಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಚಟುವಟಿಕೆ ಹಾಗೂ ಆಂದೋಲನಕ್ಕೆ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಪುನೀತ್ ರಾಜ್‌ಕುಮಾರ್ ಅವರು ರಾಯಭಾರಿಯಾಗಿ ಒಪ್ಪಿದ್ದಾರೆ ಎಂದು ಸುರೇಶ್‌ಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಪರಿಸರ, ಸಂಪನ್ಮೂಲ ರಕ್ಷಣೆ, ಸ್ವಚ್ಚತೆ, ಸಾಕ್ಷರತೆಯೊಂದಿಗೆ ಜಿಲ್ಲೆಯನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯನ್ನು ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ಬಿಂಬಿಸಲು ಜಿಲ್ಲೆಯ ರಾಯಭಾರಿಯಾಗಲು ಜಿಲ್ಲಾಡಳಿತ ನೀಡಿದ ಆಹ್ವಾನಕ್ಕೆ ಪುನೀತ್ ರಾಜ್‌ಕುಮಾರ್ ಅವರು ಸಮ್ಮತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಜಿಲ್ಲೆಯ ಋಣ ತೀರಿಸುವ ಅವಕಾಶಕ್ಕೆ ಸಂತಸಚಾಮರಾಜನಗರ ಅಭಿವೃದ್ಧಿಯ ರಾಯಭಾರಿಯಾಗಲು ನೀಡಿದ ಆಹ್ವಾನಕ್ಕೆ ತುಂಬಾ ಪ್ರೀತಿಯಿಂದಲೇ ಸಮ್ಮತಿ ಸೂಚಿಸಿ ಮಾತನಾಡಿದ ಪುನೀತ್ ರಾಜ್‌ಕುಮಾರ್, ನಮ್ಮ ತಂದೆ ಡಾ. ರಾಜ್‌ಕುಮಾರ್ ಅವರು ಹುಟ್ಟಿ ಬೆಳೆದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಕೆಲಸ ಮಾಡುವುದು ನಿಜಕ್ಕೂ ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ. ನನ್ನ ಜಿಲ್ಲೆಯ ಋಣ ತೀರಿಸುವ ಅವಕಾಶ ಒದಗಿ ಬಂದಿರುವುದು ಸಂತಸ ತಂದಿದೆ ಎಂದು ನುಡಿದರು.