Advertisement
ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನಿನ ಬುಟ್ಟಿಗಳನ್ನು ಹೊತ್ತು ಕೂಲಿ ಮಾಡಿ ಬದುಕು ನಡೆಸುತ್ತಿದ್ದ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ವಲಸೆ ಕಾರ್ಮಿಕರ ಮಗ, ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸೆಸೆಲ್ಸಿ ವಿದ್ಯಾರ್ಥಿ ಪುನೀತ್ ನಾಯ್ಕ 625ರಲ್ಲಿ 625 ಅಂಕ ಪಡೆದು ರಾಜ್ಯವೇ ತನ್ನತ್ತ ತಿರುಗಿ ನೋಡುವಂತ ಸಾಧನೆ ಮಾಡಿದ್ದಾನೆ. ಆದರೆ ಈತ ತಾನು ಟಾಪರ್ ಆಗಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಮರುದಿನ ಎಂದಿನಂತೆ ಮೀನು ಹೊರುವ ಕೆಲಸಕ್ಕೆ ಹಾಜರಾಗಿದ್ದಾನೆ. ಮಲ್ಪೆ ಬಂದರಿನಲ್ಲಿ ಜೂ. 5, ರವಿವಾರದ ವರೆಗೆ ಮೀನು ಖಾಲಿ ಮಾಡಲು ಅವಕಾಶ ಇದ್ದುದರಿಂದ ಅಲ್ಲಿಯತನಕವೂ ಈತ ಕೆಲಸ ಮಾಡಿದ್ದಾನೆ. ಇನ್ನು ಸ್ವಲ್ಪಸಮಯ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಪುನೀತನ ಕೆಲಸಕ್ಕೂ ಅಲ್ಪ ವಿರಾಮ.
3 ವರ್ಷಗಳ ಹಿಂದೆ ಕೊರೊನಾದಿಂದ ಬದುಕು ತತ್ತರಿಸಿದ ಸಂದರ್ಭದಲ್ಲಿ ಕಿರಣ್ ಮತ್ತು ಪುನೀತ್ ತಾಯಿಗೆ ಹೆಗಲು ಕೊಟ್ಟು ದುಡಿದರು. ಅಂದಿನಿಂದ ಇವತ್ತಿನವರೆಗೂ ಪುನೀತ್ ಬೆಳಗ್ಗೆ 4 ಗಂಟೆಗೆ ಎದ್ದು 9ರ ವರೆಗೆ ಬಂದರಿನಲ್ಲಿ ಮೀನು ಹೊತ್ತು ಸಿಕ್ಕ ಹಣವನ್ನು ತಾಯಿಗೆ ನೀಡಿ ಬಳಿಕ ಶಾಲೆಗೆ ಹೋಗುತ್ತಿದ್ದ. ತಾನು ಕಲಿಯುವ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಪುನೀತ್ ಮಾತ್ರ ಯಾವುದೇ ಟ್ಯೂಶನ್ ಪಡೆಯದೇ ಸಾಧನೆ ಮಾಡಿದ್ದಾನೆ. ಪ್ರಸ್ತುತ ಪುನೀತ್ ಕಡಿಯಾಳಿಯ ಜ್ಞಾನಸುಧಾ ಪಿ.ಯು.ಕಾಲೇಜಿಗೆ ಸೇರಿದ್ದಾನೆ. ಮುಂದಿನ ಶಿಕ್ಷಣದ ಬಗ್ಗೆ ಯಾವುದೇ ರೀತಿಯ ನೆರವನ್ನು ನೀಡಲು ಸಿದ್ದನಿದ್ದೇನೆ ಎಂದು ಬೆಳಗಾವಿ ಜಿಲ್ಲೆಯ ಕುಡಜಿ ಶಾಸಕ ರಾಜೀವ ಎಂಬವರು ಫೋನ್ ಮಾಡಿ ತಿಳಿಸಿದ್ದಾರೆ ಎನ್ನುತ್ತಾನೆ ಪುನೀತ್.
Related Articles
ಕೆಲಸಕ್ಕೆ ಹೋದರೂ ಶಾಲೆಗೆ ಎಂದೂ ಗೈರಾಗು ತ್ತಿರಲಿಲ್ಲ. ಶಾಲೆ ಬಿಟ್ಟ ಅನಂತರ ರಾತ್ರಿಯ ವರೆಗೆ ಮನೆಯಲ್ಲಿ ಓದು. ಮುಂದೆ ಜಿಲ್ಲಾಧಿ ಕಾರಿ ಯಾಗಬೇಕೆಂಬ ಇರಾದೆ ಇದೆ ಎನ್ನುತ್ತಾರೆ ಪುನೀತ್ ನಾಯ್ಕ. ಅವರ ಸಾಧನೆಯನ್ನು ಕಂಡು ಜಿಲ್ಲಾಡಳಿತ ಸೇರಿದಂತೆ ಹಲವಾರು ಮಂದಿ ಸಮ್ಮಾನ ಮಾಡಿದ್ದಾರೆ. ಶಾಸಕ ಕೆ. ರಘುಪತಿ ಭಟ್, ಶಾಲಾ ಹಿರಿಯ ಶಿಕ್ಷಕಿ ಸಂಧ್ಯಾ ಹಾಗೂ ಶಿಕ್ಷಕ ವರ್ಗ, ಕೆಎಫ್‌ಡಿಸಿ ಸಮ್ಮಾನಿಸಿದೆ.
Advertisement
ಮನೆಯಲ್ಲಿ ಬಡತನ. ಹಾಗಾಗಿ ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೋಗಿ ತಾಯಿಗೆ ಸಹಾಯ ಮಾಡುತ್ತೇನೆ. ಶಾಲೆಯಲ್ಲಿ ಯಾವುದೇ ಸಂಶಯಗಳಿದ್ದರೆ ಶಿಕ್ಷಕರಲ್ಲಿ ಕೇಳಿಕೊಂಡು ಸಮಸ್ಯೆ ಪರಿಹರಿಸುತ್ತಿದ್ದೆ. ಪೂರ್ಣ ಅಂಕ ಸಿಗುವುದೆಂದು ನಿರೀಕ್ಷೆ ಇತ್ತು. ಎಲ್ಲರ ಪ್ರೋತ್ಸಾಹ, ಶ್ರದ್ಧೆಯಿಂದ ಓದಿದ್ದ ಕಾರಣ ಉನ್ನತ ಅಂಕ ಗಳಿಸಲು ಸಾಧ್ಯವಾಯಿತು.-ಪುನೀತ್ ನಾಯ್ಕ ಮಗ ಪೂರ್ಣ ಅಂಕ ಗಳಿಸಿರುವುದು ಖುಷಿ ತಂದಿದೆ. ಎಲ್ಲರೂ ಈಗ ದಾರಿಯಲ್ಲಿ ಕರೆದು ಮಾತನಾಡುವಾಗ ಪುನೀತ್‌ನ ತಾಯಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿ¤ದೆ. ಅವನ ಕಲಿಕೆಗೆ ಮುಂದೆಯೂ ತನ್ನಿಂದ ಸಾಧ್ಯವಾದಷ್ಟು ಪ್ರೋತ್ಸಾಹ ನೀಡುತ್ತೇನೆ.
-ಲಲಿತಾ, ಪುನೀತ್ ತಾಯಿ -ನಟರಾಜ್ ಮಲ್ಪೆ