ಪುನೀತ್ ರಾಜಕುಮಾರ್ ಅಭಿನಯದ “ನಟಸಾರ್ವಭೌಮ’ ಚಿತ್ರದ ಮೂಲಕ ಅನುಪಮಾ ಪರಮೇಶ್ವರನ್ ಎಂಬ ಮಲಯಾಳಿ ಕುಟ್ಟಿ ಹೊಸ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 2015ರಲ್ಲಿ ಮಲೆಯಾಳಂನಲ್ಲಿ ತೆರೆಗೆ ಬಂದ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ “ಪ್ರೇಮಂ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಅನುಪಮ, ಆ ಚಿತ್ರ ಬಿಡುಗಡೆಯಾದ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ಬಳಿಕ ಮಲೆಯಾಳಂನ “ಜೇಮ್ಸ್ ಆ್ಯಂಡ್ ಅಲೈಸ್’, “ಜೊಮೊಂಟೆ ಸುವಿಶೇಷಂಗಳ್’, ತಮಿಳಿನ “ಕೋಡಿ’, ತೆಲುಗಿನ “ಅ ಆ..’, “ಶತಮಾನಂ ಭವತಿ’, “ಕೃಷ್ಣಾರ್ಜುನ ಯುದ್ಧಂ’, “ತೇಜ್ ಐ ಲವ್ ಯು’ ಹೀಗೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಾಕೆ. ಈಗ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡುತ್ತಿರುವ ಅನುಪಮಾ ಪರಮೇಶ್ವರನ್ ತಮ್ಮ ಚೊಚ್ಚಲ ಕನ್ನಡ ಚಿತ್ರ “ನಟಸಾರ್ವಭೌಮ’ನ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ.
“ಕಳೆದ ಎರಡು-ಮೂರು ವರ್ಷಗಳಿಂದಲೂ ಕನ್ನಡ ಚಿತ್ರರಂಗದಿಂದ ಹಲವು ಚಿತ್ರಗಳಲ್ಲಿ ಅಭಿನಯಿಸುವ ಆಫರ್ ಬರುತ್ತಿದ್ದವು. ಆದರೆ ಸಮಯದ ಕೊರತೆ ಮತ್ತು ನನಗೆ ಕೆಲವೊಂದು ಕಥೆಗಳು, ಪಾತ್ರಗಳು ಅಷ್ಟಾಗಿ ಹೊಂದಾಣಿಕೆ ಆಗುವುದಿಲ್ಲ ಎಂದೆನಿಸಿದ್ದರಿಂದ ಕೆಲವು ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. “ನಟಸಾರ್ವಭೌಮ’ ಚಿತ್ರದಲ್ಲೂ ಹಾಗೇ ಒಂದು ಅವಕಾಶ ಬಂತು. ಚಿತ್ರದ ಕಥೆ, ನನ್ನ ಪಾತ್ರ, ಜೊತೆಗೆ ದೊಡ್ಡ ದೊಡ್ಡ ಕಲಾವಿದರು, ತಂತ್ರಜ್ಞರ ಟೀಮ್ ಸಿಕ್ಕಿದ್ದರಿಂದ ಚಿತ್ರವನ್ನು ಒಪ್ಪಿಕೊಂಡೆ.
ಮೊದಲ ಕನ್ನಡ ಚಿತ್ರದಲ್ಲೇ ಇಂಥದ್ದೊಂದು ಟೀಮ್ ಸಿಕ್ಕಿರುವುದಕ್ಕೆ ತುಂಬಾ ಖುಷಿ ಇದೆ. ನನ್ನ ಪಾತ್ರ ಕನ್ನಡ ಆಡಿಯನ್ಸ್‌ಗೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ಅನುಪಮಾ ಪರಮೇಶ್ವರನ್. ಇನ್ನು ಪುನೀತ್ ರಾಜಕುಮಾರ್ ಜೊತೆಗಿನ ಅಭಿನಯದ ಬಗ್ಗೆ ಮಾತನಾಡುವ ಅನುಪಮಾ, “ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಹಲವು ಚಿತ್ರಗಳನ್ನು ನೋಡಿದ್ದೆ. ಕನ್ನಡದಲ್ಲಿ ಅವರೊಬ್ಬ ದೊಡ್ಡ ಸ್ಟಾರ್ ನಟ ಅನ್ನುವುದನ್ನೂ ಕೇಳಿದ್ದೆ.
ನನ್ನ ಮೊದಲ ಚಿತ್ರದಲ್ಲೇ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ಮೊದಲ ಸಲ ಅವರ ಜೊತೆ ಕೆಮಿಸ್ಟ್ರಿ ಹೇಗಿರುತ್ತದೆಯೋ, ಏನೋ ಎಂಬ ಭಯವಿತ್ತು. ಆದರೆ ಅವರು ಅಷ್ಟು ದೊಡ್ಡ ಸ್ಟಾರ್ ಆದ್ರೂ ತುಂಬಾ ಫ್ರೆಂಡ್ಲಿ ಆಗಿದ್ರು. ಯಾವಾಗಲೂ ಎನರ್ಜಿಟಿಕ್ ಆಗಿ, ನಗುನಗುತ್ತ ಅವರು ಇರುವುದರಿಂದ ಅವರ ಜೊತೆ ಕೆಲಸ ಮಾಡೋದು ತುಂಬಾ ಕಂಫರ್ಟ್ ಫೀಲ್ ಕೊಟ್ಟಿತು’ ಎನ್ನುತ್ತಾರೆ ಅನುಪಮಾ.
ಆದರೆ ಚಿತ್ರದಲ್ಲಿ ತಮ್ಮ ಪಾತ್ರವೇನು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡದ ಅನುಪಮ “ನನ್ನ ಪಾತ್ರದ ಬಗ್ಗೆ ಮಾತ್ರ ಹೆಚ್ಚೇನು ಕೇಳಬೇಡಿ. ಅದನ್ನು ಥಿಯೇಟರ್‌ನಲ್ಲಿ ನೋಡಿ, ಆಮೇಲೆ ನನ್ನ ಅಭಿನಯ ಹೇಗಿದೆ ಅಂತ ಹೇಳಿ’ ಎನ್ನುತ್ತಾರೆ. “ಸದ್ಯ ನನ್ನ ಗಮನ ಕನ್ನಡ ಪ್ರೇಕ್ಷಕರು “ನಟಸಾರ್ವಭೌಮ’ನನ್ನು, ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವುದರ ಕಡೆಗೆ ತುಂಬ ಕುತೂಹಲವಿದೆ. ಇನ್ನೂ ಮೂರ್‍ನಾಲ್ಕು ಚಿತ್ರಗಳ ಆಫರ್ ಕನ್ನಡದಲ್ಲಿ ಬರುತ್ತಿದ್ದರೂ, ಅದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎನ್ನುವ ಅನುಪಮಾ,
“ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ ಮುಂದೆ ನನಗಿಷ್ಟವಾಗುವ ಅವಕಾಶಗಳು ಸಿಕ್ಕರೆ ಖಂಡಿತಾ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ರೆಡಿ’ ಎನ್ನುತ್ತಾರೆ. ಒಟ್ಟಾರೆ ಮಲೆಯಾಳಂ, ತಮಿಳು, ತೆಲುಗು ಹೀಗೆ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಸಿನಿಪ್ರಿಯರ ಮನಗೆದ್ದಿರುವ ಅನುಪಮ ಕನ್ನಡ ಸಿನಿಪ್ರಿಯರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು “ನಟಸಾರ್ವಭೌಮ’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.