ಪುಣೆ:ಮಾರಣಾಂತಿಕ ಕೋವಿಡ್ 19 ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ 20 ಸಾವಿರ ಜನರನ್ನು ಸುರಕ್ಷಿತ ವಲಯಕ್ಕೆ ಸ್ಥಳಾಂತರಿಸಲು ಪುಣೆ ಆಡಳಿತ ವರ್ಗ ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಹಲವು ಹಂತಗಳಲ್ಲಿ ಜನರನ್ನು ಸ್ಥಳಾಂತರಿಸುವ ಸಿದ್ದತೆ ನಡೆಸಿದ್ದು, ಮೊದಲ ಹಂತದಲ್ಲಿ 20 ಸಾವಿರ ಜನರನ್ನು ಸ್ಥಳಾಂತರಿಸಲಾಗುವುದು. ನಂತರ ಜನರ ಸಂಖ್ಯೆಯನ್ನು ಹೆಚ್ಚುಗೊಳಿಸುವ ಮೂಲಕ ಸ್ಥಳಾಂತರಿಸಲಾಗುವುದು ಎಂದು ವರದಿ ವಿವರಿಸಿದೆ.
ಜನರಿಗೆ ವಾಸ್ತವ್ಯ ಹೂಡಲು ಪೊಲೀಸರು ವ್ಯವಸ್ಥೆ ಕಲ್ಪಿಸಲಿದ್ದಾರೆ. ಪುಣೆ ಜಿಲ್ಲಾಡಳಿತ ಪುಣೆಯನ್ನು ಎರಡು ವಿಭಾಗಳನ್ನಾಗಿ ವಿಂಗಡಿಸಿದೆ. ಪುಣೆ ನಗರ ಮತ್ತು ಪುಣೆ ಜಿಲ್ಲೆ ಎಂದು ವಿಭಜಿಸಿದೆ. ಮಂಗಳವಾರ ಬೆಳಗ್ಗೆವರೆಗಿನ ಡಾಟಾದ ಪ್ರಕಾರ, ಪುಣೆ ನಗರದಲ್ಲಿ 1,217 ಸೋಂಕಿತರು ಇದ್ದು, ಇಡೀ ಜಿಲ್ಲೆಯಲ್ಲಿ ಒಟ್ಟು 1348 ಕೋವಿಡ್ 19 ಸೋಂಕಿತರಿದ್ದಾರೆ. ಪುಣೆಯಲ್ಲಿ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
ಪುಣೆಯಲ್ಲಿ ಐದು ಪ್ರಮುಖ ಹಾಟ್ ಸ್ಪಾಟ್ ಗಳಿವೆ ಭಾವ್ನಿ ಪೇಟ್, ಕಸ್ಬಾ ಪೇಟ್, ಧೋಲೆ ಪಾಟೀಲ್ ರೋಡ್, ಯೆರವಾಡಾ, ಘೋಲೆ ರೋಡ್. ಈ ಪ್ರದೇಶಗಳಲ್ಲಿ 70 ಸಾವಿರ ಕೊಳಗೇರಿ ಮನೆಗಳಿವೆ. ಇಲ್ಲಿ ಒಟ್ಟು 3.5 ಲಕ್ಷ ಜನಸಂಖ್ಯೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಈ ಪ್ರದೇಶಗಳಲ್ಲಿನ ಮನೆಗಳು ತೀರಾ ಚಿಕ್ಕದಾಗಿದ್ದು, ಒಂದೊಂದು ಮನೆಯಲ್ಲಿ 6ರಿಂದ ಎಂಟು ಮಂದಿ ವಾಸಿಸುತ್ತಿದ್ದಾರೆ. ಇದು ಸಾಮಾಜಿಕ ಅಂತರದ ಉಲ್ಲಂಘನೆಯಾಗಲಿದೆ. ಹೀಗಾಗಿ ಕೊಳಗೇರಿ ಪ್ರದೇಶದಲ್ಲಿದ್ದ ಜನರನ್ನು ಸ್ಥಳಾಂತರಿಸಲು ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.
ಪೊಲೀಸರು ಸಾಕಷ್ಟು ಬಾರಿ ಶ್ರಮಪಟ್ಟಿದ್ದರೂ ಕೂಡಾ ಜನರು ಲಾಕ್ ಡೌನ್ ಆದೇಶ ಪಾಲಿಸಲು ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಕೊಳಗೇರಿ ಪ್ರದೇಶದಲ್ಲಿನ ಮನೆಗಳಲ್ಲಿ ವಾಸವಾಗಿರುವ ಜನರನ್ನು ಸ್ವಲ್ಪ ಕಾಲದವರೆಗೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 8,590 ಪ್ರಕರಣ ಪತ್ತೆ, ಕೋವಿಡ್ 19ಕ್ಕೆ 369 ಜನರು ಸಾವನ್ನಪ್ಪಿದ್ದಾರೆ.