ಪುಣೆ:ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವು ನೀಡುವ ಬದಲಾಗಿ ಪ್ರಯಾಣಿಕರು, ಸಾರ್ವಜನಿಕರು ಫೋಟೋ ಕ್ಲಿಕ್ಕಿಸುತ್ತಾ, ವಿಡಿಯೋ ಶೂಟ್ ಮಾಡುತ್ತಿದ್ದ ಘಟನೆ ಪುಣೆಯಲ್ಲಿ ನಡೆದಿದೆ. ಮಾನವೀಯತೆ ಮರೆತ ಜನರಿಂದಾಗಿ ಕಣ್ಣೆದುರೇ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗುವಂತಾಗಿದೆ!
ಪುಣೆ ಮೂಲದ ಟೆಕ್ಕಿ 25 ವರ್ಷದ ಸತೀಶ್ ಪ್ರಭಾಕರ್ ಮೆಟೆ ಕಚೇರಿಗೆ ತೆರಳುತ್ತಿದ್ದ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಹೋಗಿತ್ತು. ಪುಣೆಯ ಭೋಸಾರಿಯ ಇಂದ್ರಾಣಿನಗರ್ ತಿರುವಿನ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಅಪಘಾತದಿಂದ ಸತೀಶ್ ಸ್ಥಿತಿ ಚಿಂತಾಜನಕವಾಗಿತ್ತು. ಹಲವಾರು ಮಂದಿ ವಾಹನವನ್ನು ನಿಲ್ಲಿಸಿ ಫೋಟೋ ತೆಗೆದುಕೊಂಡು ಹೊರಟು ಹೋಗಿದ್ದರೇ ವಿನಃ, ಯಾರೂ ಕೂಡಾ ಆತನ ನೆರವಿಗೆ ಧಾವಿಸಿರಲಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಏತನ್ಮಧ್ಯೆ ಬೋಸಾರಿ ಮೂಲದ ದಂತವೈದ್ಯರಾದ ಕಾರ್ತಿಕ್ ರಾಜ್ ಕಾಟೆ ಕ್ಲಿನಿಕ್ ಗೆ ಹೋಗಲು ಅದೇ ಮಾರ್ಗವಾಗಿ ಸಾಗುತ್ತಿದ್ದಾಗ ತಮ್ಮ ವಾಹನ ನಿಲ್ಲಿಸಿ ಸತೀಶ್ ಅವರ ನೆರವಿಗೆ ಧಾವಿಸಿದ್ದರು.
ಸತೀಶ್ ರಸ್ತೆಯ ಮಧ್ಯೆ ಜೀವನ್ಮರಣ ಹೋರಾಟ ನಡೆಸುತ್ತ ಬಿದ್ದಿದ್ದರು, ಆಗ ಸತೀಶ್ ಮುಖವನ್ನು ಬಟ್ಟೆಯಿಂದ ಮುಚ್ಚಲಾಗಿತ್ತು ಎಂದು ಕಾಟೆ ವಿವರಿಸಿದ್ದಾರೆ. ಸತೀಶ್ ಕಾಲು ಮತ್ತು ಕೈಗಳು ಅಲುಗಾಡುತ್ತಿದ್ದವಂತೆ. ಈ ವೇಳೆ ಕೆಲವರು ಅಪಘಾತದ ದೃಶ್ಯದ ಫೋಟೋ ತೆಗೆದುಕೊಳ್ಳುತ್ತಿದ್ದರು. ಕೆಲವರು ವಿಡಿಯೋ ಶೂಟ್ ಮಾಡುತ್ತಿದ್ದರು. ಆದರೆ ಯಾರೊಬ್ಬರೂ ಸಹಾಯ ಮಾಡಲು ತಯಾರಾಗಿರಲಿಲ್ಲ ಎಂದು ಕಾಟೆ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಬಳಿಕ ಕಾಟೆ ಅವರು ಆಟೋವೊಂದನ್ನು ನಿಲ್ಲಿಸಿ ಚಾಲಕನಲ್ಲಿ ಮನವಿ ಮಾಡಿಕೊಂಡು ಪ್ರಯಾಣಿಕರನ್ನು ಕೆಳಗಿಳಿಸಿ, ಅದರಲ್ಲಿ ಸತೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಸತೀಶ್ ಅವರ ತಲೆಗೆ ಗಂಭೀರ ಏಟು ಬಿದ್ದಿತ್ತು, ಮೂಗು ಮತ್ತು ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಹೊಟ್ಟೆಯ ಮೇಲೆ ಟಯರ್ ನ ಅಚ್ಚು ಬಿದ್ದಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಕೂಡಾ ಯಾವುದೇ ಫಲಕಾರಿಯಾಗಲಿಲ್ಲ ಎಂದು ವರದಿ ತಿಳಿಸಿದೆ. ತದನಂತರ ಸತೀಶ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ವರದಿ ಹೇಳಿದೆ.
ಒಂದು ವೇಳೆ ಅಪಘಾತ ನಡೆದದ್ದ ವೇಳೆಯಲ್ಲಿ ಯಾರಾದರೂ ಆಸ್ಪತ್ರೆಗೆ ದಾಖಲಿಸಿದ್ದರೆ ಸತೀಶ್ ಬದುಕುಳಿಯುತ್ತಿದ್ದರು ಎಂದು ಕಾಟೆ ತಿಳಿಸಿದ್ದಾರೆ.