ಮಹಾರಾಷ್ಟ್ರ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಬುಧವಾರ ಪುಣೆ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ರೋನಾ ವಿಲ್ಸನ್, ಶೋಮಾ ಸೇನ್, ಸುರೇಂದ್ರ ಗಾಡ್ಲಿಂಗ್, ಮಹೇಶ್ ರೌತ್, ವರವರ ರಾವ್ ಹಾಗೂ ಸುಧೀರ್ ಧಾವ್ಲೆ ಸೇರಿದಂತೆ ಆರು ಮಂದಿ ಆರೋಪಿಗಳಾಗಿದ್ದಾರೆ.
ಇದಕ್ಕೂ ಮುನ್ನ ಬಾಂಬೆ ಹೈಕೋರ್ಟ್ ಸುಧಾ ಭಾರದ್ವಾಜ್, ವೆರ್ನೋನ್ ಗೋನ್ಸಾಲ್ವೀಸ್ ಮತ್ತು ಅರುಣ್ ಫೆರ್ರೇರಾ ಜಾಮೀನು ಅರ್ಜಿಯನ್ನು ಕೂಡಾ ವಜಾಗೊಳಿಸಿತ್ತು. 2018ರ ನವೆಂಬರ್ ನಲ್ಲಿ ಪುಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಪಟ್ಟಿ ಸಲ್ಲಿಸಿದ್ದರು.
2017ರ ಡಿಸೆಂಬರ್ 31ರಂದು ಪುಣೆಯ ಎಲ್ಗಾರ್ ಪರಿಷತ್ ನಲ್ಲಿನ ಸಮಾವೇಶದಲ್ಲಿ ಭಾಷಣ ಮಾಡಿದ್ದು, 2018ರ ಜನವರಿ 1ರಂದು ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ನಡೆದಿತ್ತು. ಈ ಸಮಾವೇಶಕ್ಕೆ ಆರ್ಥಿಕ ನೆರವು ನೀಡಿದ್ದು ಮಾವೋವಾದಿಗಳು ಎಂದು ಪೊಲೀಸರು ಆರೋಪಿಸಿದ್ದರು.
ಮೊದಲ ಆರೋಪಪಟ್ಟಿಯಲ್ಲಿ ಕಾರ್ಯಕರ್ತರಾದ ಸುರೇಂದ್ರ ಗಾಡ್ಲಿಂಗ್, ರೋನಾ ವಿಲ್ಸನ್, ಶೋಮಾ ಸೇನ್, ಮಹೇಶ್ ರೌತ್ ಮತ್ತು ಸುಧೀರ್ ಧಾವ್ಲೆ ಹೆಸರನ್ನು ದಾಖಲಿಸಿದ್ದರು. 2018ರ ಜೂನ್ ನಲ್ಲಿ ಇವರನ್ನೆಲ್ಲಾ ಬಂಧಿಸಲಾಗಿತ್ತು. ಅಲ್ಲದೇ ತಲೆಮರೆಯಿಸಿಕೊಂಡಿರುವ ಮಾವೋವಾದಿ ಮುಖಂಡ ದೀಪಕ್ ಅಲಿಯಾಸ್ ಮಿಲಿಂದ್ ಟೆಲ್ ಟುಂಬಾಡೆ, ಕಿಶಾನ್ ಡಾ ಅಲಿಯಾಸ್ ಪ್ರಶಾಂತ್ ಬೋಸ್ ಮತ್ತು ಪ್ರಕಾಶ್ ಅಲಿಯಾಸ್ ರಿತುಪರ್ಣ ಗೋಸ್ವಾಮಿ ಹೆಸರನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂದು ವರದಿ ತಿಳಿಸಿದೆ. ಭಾರದ್ವಾಜ್ ಮತ್ತು ಇತರರನ್ನು ಸೆಪ್ಟೆಂಬರ್ ನಲ್ಲಿ ಬಂಧಿಸಲಾಗಿತ್ತು.