Advertisement

ಪುಣೆ ತುಳುಕೂಟದ ಪಿಂಪ್ರಿ-ಚಿಂಚ್ವಾಡ್‌ ಸಮಿತಿಯ ವಾರ್ಷಿಕೋತ್ಸವ 

04:55 PM Jan 18, 2017 | Team Udayavani |

ಪುಣೆ: ಪುಣೆ ತುಳುಕೂಟದ ಈ ಪ್ರಾದೇಶಿಕ ಸಮಿತಿಯು ಹಿಂಗಾರ ಮತ್ತು ವೀಳ್ಯದೆಲೆಯನ್ನು ನೀಡಿ ಅತಿಥಿಗಳನ್ನು ಸ್ವಾಗತಿಸಿ, ತುಳುನಾಡಿನ ಆದರ್ಶ ಸಂಸ್ಕೃತಿಯ ಪರಿಚಯ  ನೀಡಿ ಎಲ್ಲರಿಗೂ ಮಾದರಿಯಾಗಿದೆ. ತುಳುನಾಡಿನ ಭವ್ಯ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠವಾಗಿ ಗುರುತಿಸಿಕೊಂಡಿದೆ. ಜಗತ್ತಿನ ಸಾಮಾಜಿಕ ಕಟ್ಟುಕಟ್ಟಳೆಗಳನ್ನು ಅವಲೋಕಿಸಿದಾಗ ಗಂಡು ಮತ್ತು ಹೆಣ್ಣಿಗೆ ಸಮಾನತೆಯ ಅಧಿಕಾರ ಹೊಂದಿದ ಅಪರೂಪವಾದ ಸಂಸ್ಕೃತಿಯೊಂದಿದ್ದರೆ ಅದು ನಮ್ಮ ತುಳುನಾಡಿನದ್ದಾಗಿದೆ. ಇಂದಿನ ದಿನಗಳಲ್ಲಿ ವಿಶ್ವದಾದ್ಯಂತ ಸಂಸ್ಕೃತಿ  ನಾಶ ಮಾಡುವ ವ್ಯವಸ್ಥಿತ ಕಾರ್ಯ ನಡೆಯುತ್ತಿರುವುದು ದುರಾದೃಷ್ಟಕರವಾಗಿದೆ. ಆದ್ದರಿಂದ ನಮ್ಮ ಕಲೆ, ಸಾಹಿತ್ಯ, ಸಂಪ್ರದಾಯಗಳನ್ನು ಉಳಿಸಿ ನಮ್ಮತನವನ್ನು ಉಳಿಸುವ ಕಾರ್ಯ ನಮ್ಮಿಂದಾಗಬೇಕು. ನಮ್ಮ ಸಂಸ್ಕೃತಿ ಅಳಿದರೆ ನಾವು ಅಳಿದಂತೆ. ಆದ್ದರಿಂದ ನಮ್ಮ ಮನೆಯಿಂದಲೇ ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಯ ಕ್ರಾಂತಿಯಾಗಬೇಕಾಗಿದೆ. ನಮ್ಮ ತುಳುನಾಡಿನಲ್ಲಿ 16 ಒಟ್ಟು ಬರಿಗಳಿದ್ದು, 16 ನದಿಗಳ ಮೂಲವಾಗಿದೆ. ಆ ಮೂಲವನ್ನು ನಾವು ಅರ್ಥೈಸಿಕೊಂಡಾಗ ಜಾತ್ಯಾತೀತ ತಳಹದಿಯ ಭವ್ಯ ಒಗ್ಗಟ್ಟಿನ, ಸಾಂಸ್ಕೃತಿಕ ಶಕ್ತಿಯ ತುಳುನಾಡು ನಮ್ಮ ಮನಸ್ಸಿನಲ್ಲಿ ಅರಳಿ ಸಂಸ್ಕೃತಿ ಪುನರ್‌ ಸಂಘಟಿಸುವ ದಾಯಿತ್ವ ನಮ್ಮದಾಗುತ್ತದೆ ಎಂದು ನಗರದ  ಸಾಹಿತಿ ರವಿ ರಾ. ಅಂಚನ್‌ ಹೇಳಿದರು.

Advertisement

ಜ. 15ರಂದು ಚಿಂಚಾÌಡ್‌ನ‌ ಶುಭಂ ಲಾನ್ಸ್‌ನಲ್ಲಿ ನಡೆದ ಪುಣೆ ತುಳುಕೂಟ ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ 6ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. 

ತುಳುಭಾಷೆಗೆ ಸುಮಾರು 6ಸಾವಿರ ವರ್ಷಗಳ ಇತಿಹಾಸವಿದ್ದು, ಅಮೇರಿಕಾದ ಒಂದು ದ್ವೀಪದ ಹೆಸರು ತುಳುವಿನಲ್ಲಿದೆ. ತುಳುನಾಡಿನ ಒಬ್ಬ ರಾಜ ಲಡಾಖನ್ನು ಆಳಿದ ಇತಿಹಾಸವಿದೆ. ಸಿಂಧೂ ಸಂಸ್ಕೃತಿಯನ್ನು ಕಟ್ಟಲು ಬಹಳಷ್ಟು ತುಳುವರು ಶ್ರಮಿಸಿದ ಚರಿತ್ರೆಯಿದೆ. ಆದರೆ ಇಷ್ಟೊಂದು ಚರಿತ್ರೆ  ಹೊಂದಿದ ನಮ್ಮ ತುಳು ಭಾಷೆಯನ್ನು ಮರೆಯುತ್ತಿರುವುದು ದುರಾದೃಷ್ಟಕರವಾಗಿದೆ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್‌ ಸುವರ್ಣ ಅವರು ಮಾತನಾಡಿ, ನಾವು ಉತ್ತಮವಾದ ಕಾರ್ಯವೊಂದನ್ನು ಕೈಗೆತ್ತಿಕೊಂಡಾಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂಬ ಭಾವನೆ ಇಂದು ನಿಜವಾಗಿದೆ. ಪಿಂಪ್ರಿ -ಚಿಂಚಾÌಡ್‌, ಪುಣೆ ನಗರ ಸೇರಿದಂತೆ ಎಲ್ಲಾ ತುಳುನಾಡ ಬಾಂಧವರು ಸಮಿತಿಯ ಮೇಲಿನ ಪ್ರೀತಿ ವಿಶ್ವಾಸದೊಂದಿಗೆ ಸಹಕಾರ ನೀಡಿ ಬೆಂಬಲಿಸಿರುವುದು ನಮ್ಮ ಸಂಘಟಿತ ಕಾರ್ಯಕ್ಕೆ ಧೈರ್ಯ ತುಂಬಿದೆ ಮುಂದೆಯೂ ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಪುಣೆ ತುಳುಕೂಟದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲ್ಮಾ ಮಾರ್ಟಿಸ್‌, ಸಮಿತಿಯ ಉಪ ಕಾರ್ಯಾಧ್ಯಕ್ಷರುಗಳಾದ ಹರೀಶ್‌  ಶೆಟ್ಟಿ ಕುರ್ಕಾಲ್‌, ದಿನೇಶ್‌ ಶೆಟ್ಟಿ ಉಜಿರೆ, ಕೋಶಾಧಿಕಾರಿ ಸಂತೋಷ್‌ ಕಡಂಬ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಚಾಕನ್‌, ಕ್ರೀಡಾ ಕಾರ್ಯಾಧ್ಯಕ್ಷ ಪ್ರಕಾಶ್‌ ಪೂಜಾರಿ ಬೈಲೂರು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಪ್ರೇಮಾ ಪೂಜಾರಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್‌ ಪೂಜಾರಿ ಮುನಿಯಾಲ್‌ ಉಪಸ್ಥಿತರಿದ್ದರು.

Advertisement

ವಿನೋದಾ ವಿ. ಪೂಜಾರಿ, ಭವಂತಿ ವಿ. ಪೂಜಾರಿ ಮತ್ತು ಶೋಭಾ ಜೆ. ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯದರ್ಶಿ ನಿತಿನ್‌ ಶೆಟ್ಟಿ ನಿಟ್ಟೆ ವಾರ್ಷಿಕ ವರದಿ ವಾಚಿಸಿದರು. ಸಂತೋಷ್‌ ಕಡಂಬ ಮತ್ತು ಶೋಭಾ ಜೆ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು ಗೌರವಿಸಲಾಯಿತು. ದಿನೇಶ್‌ ಶೆಟ್ಟಿ ಉಜಿರೆ ಸತ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಹರೀಶ್‌ ಶೆಟ್ಟಿ ಕುರ್ಕಾಲ್‌ ಸ್ವಾಗತಿಸಿ, ಸಂತೋಷ್‌  ಶೆಟ್ಟಿ ಪೆರ್ಡೂರು ವಂದಿಸಿದರು. ನೂತನ್‌ ಸುವರ್ಣ ನಿರ್ವಹಿಸಿದ್ದರು. 

ಸದಸ್ಯರುಗಳಿಂದ ನೃತ್ಯ ಕಾರ್ಯಕ್ರಮ, ಮಹಿಳಾ ಸದಸ್ಯರಿಂದ ಹಾಸ್ಯ ಪ್ರಹಸನ, ತೆಲಿಕೆದ ತೆನಾಲಿ ಕಾರ್ಕಳ ಕಲಾವಿದರಿಂದ ಸುನಿಲ್‌ ನೆಲ್ಲಿಗುಡ್ಡೆ ನೇತೃತ್ವದಲ್ಲಿ ತೆಲಿಕೆದ ಬರ್ಸ ಹಾಸ್ಯ ಕಾರ್ಯಕ್ರಮ, ಜಾದೂ ಪ್ರದರ್ಶನ ನಡೆಯಿತು. ಸುಮಂಗಲಾ ಆರ್‌. ಶೆಟ್ಟಿ ಅವರಿಂದ ತನ್ನಿಮಾನಿಗ ಹಾಗೂ ಹೇಮಾ ಎಸ್‌. ಅಮೀನ್‌ ಅವರಿಂದ ಕಲ್ಲುರ್ಟಿ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಯುವ ವಿಭಾಗದ ಸದಸ್ಯರು  ಕಾರ್ಯಕ್ರಮದ ಯಶಸ್ಸಿಗೆ  ಶ್ರಮಿಸಿದರು.       

ನಮ್ಮ  ತುಳುಭಾಷೆ, ನಮ್ಮ ಶ್ರೇಷ್ಠ ಸಂಸ್ಕೃತಿ, ಕಲೆ, ದೈವ ದೇವರ ಮೇಲಿನ ನಂಬಿಕೆ, ಗುರುಹಿರಿಯರಲ್ಲಿನ ವಿಧೇಯತೆ, ಸಂಪ್ರದಾಯಗಳು ಜಗತ್ತಿನಲ್ಲಿಯೇ ವಿಶೇಷವಾಗಿದ್ದು, ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಇದನ್ನು ಕಲಿಸುವ ಪರಿಪಾಠ ನಮ್ಮದಾಗಬೇಕು. ಇದರಿಂದಾಗಿ ನಮ್ಮ ಮಕ್ಕಳು ಮುಂದೆ ಸಂಸ್ಕಾರವಂತರಾಗಿ  ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗಬಹುದಾಗಿದೆ. ನಾವು ಮಾಡಿದ ಪೂರ್ವಜನ್ಮದ ಪುಣ್ಯ ಫಲಗಳಿಂದಾಗಿಯೇ ಇಂದು ತುಳುನಾಡಿನಲ್ಲಿ ಹುಟ್ಟಿದ್ದೇವೆ ಎಂಬ ಹೆಮ್ಮೆ ನಮ್ಮದಾಗಿದೆ. ಹೊರನಾಡಿನಲ್ಲಿದ್ದುಕೊಂಡು ನಮ್ಮ ತುಳುನಾಡಿನ ಮಣ್ಣಿನ ಕಂಪನ್ನು ಉಳಿಸುವುದರೊಂದಿಗೆ ಇಷ್ಟೊಂದು ಸಂಖ್ಯೆಯಲ್ಲಿ ಒಗ್ಗಟ್ಟಿನಿಂದ ಸೇರಿರುವುದು ತುಳುನಾಡಿನ ತುಳುವರ  ಶಕ್ತಿಯಿಂದಾಗಿದೆ – ಶಿವಧ್ವಜ್‌ (ಚಲನಚಿತ್ರ ನಟ, ನಿರ್ದೇಶಕ).

ನಮ್ಮ ಸಂಘದ ಪಿಂಪ್ರಿ-ಚಿಂಚಾÌಡ್‌ ಪರಿಸರದ ತುಳುವರನ್ನು ಇಷ್ಟೊಂದು ಸಂಖ್ಯೆಯಲ್ಲಿ ಸಾಂಸ್ಕೃತಿಕವಾಗಿ ಒಗ್ಗೂಡಿಸಿ ಉತ್ತಮ ಕಾರ್ಯಕ್ರಮವನ್ನು ಸಂಘಟಿಸಿರುವುದಕ್ಕೆ ಸಮಿತಿಯ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳ ಶ್ರಮ ಕಾರಣವಾಗಿದೆ. ಸಂಘಟನೆಯೆಂಬುದು ನಮ್ಮಲ್ಲಿನ ದೊಡ್ಡ ಶಕ್ತಿಯಾಗಿದ್ದು ವ್ಯಕ್ತಿಗಿಂತ ಸಂಘವು ಮುಖ್ಯ ಎಂಬ ಸಿದ್ಧಾಂತದಲ್ಲಿ ನಮ್ಮ ನಂಬಿಕೆಯಾಗಿದೆ. ಭವಿಷ್ಯದಲ್ಲಿ ಸಮಿತಿ ಇನ್ನೂ ಹೆಚ್ಚಿನ ಕ್ರಿಯಾಶೀಲತೆಯೊಂದಿಗೆ ಅಭಿವೃದ್ಧಿ ಹೊಂದಲಿ 

– ತಾರನಾಥ ರೈ ಮೇಗಿನಗುತ್ತು ಅಧ್ಯಕ್ಷರು: ಪುಣೆ ತುಳುಕೂಟ
  
 ಫೋಟೊ :ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next