ಪುಣೆ: ಪುಣೆ ಕನ್ನಡ ಸಂಘದ ವತಿಯಿಂದ ಮಾ. 1 ರಂದು ಸಂಘದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ವೈಶಿಷ್ಟÂಪೂರ್ಣವಾಗಿ ವಾರ್ಷಿಕ ಪ್ರತಿಭಾ ಪ್ರದರ್ಶನವನ್ನು ಸಂಘದ ಸದಸ್ಯರು ಮತ್ತು ಅವರ ಪರಿವಾರದ ಸದಸ್ಯರಿಗಾಗಿ ಆಯೋಜಿಸಲಾಗಿತ್ತು.
ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ| ಶ್ಯಾಮರಾವ್ ಕಲ್ಮಾಡಿಯವರ ಜನ್ಮ ದಿನದಂದು ಅವರ ನೆನಪಿಗಾಗಿ ಆಚರಿಸುವ ಕಾರ್ಯಕ್ರಮ ಈ ವರ್ಷ ಅವರ ಜನ್ಮಶತಾಬ್ಧಿಯ ಪ್ರಯುಕ್ತ ವಿಶೇಷ ಅದೂxರಿಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಬಾಲ ವೃದ್ಧ ಸದಸ್ಯರು ತಮ್ಮ ಪರಿವಾರದೊಂದಿಗೆ ಭಾಗವಹಿಸಿ ಸಮಾರಂಭಕ್ಕೆ ಶೋಭೆ ತಂದರು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ತದನಂತರ ನೃತ್ಯ, ಸಂಗೀತ, ಕವನ, ಹಾಸ್ಯ ಚಟಕಿಗಳ ಕಾರ್ಯಕ್ರಮಗಳು ನಡೆದವು. ಈ ವರ್ಷದ ಕಾರ್ಯಕ್ರಮದಲ್ಲಿ ಶಾಮರಾವ್ ಅವರ ಕುಟುಂಬ ಸದಸ್ಯರು ಆಸಕ್ತಿಯಿಂದ ಭಾಗವಹಿಸಿ ದಿವಂಗತರ ಮನ ಮೆಚ್ಚಿನ ಹಾಡುಗಳನ್ನು ಒಟ್ಟಾಗಿ ಹಾಡಿ ತಮ್ಮ ಶ್ರದ್ಧಾಂಜಲಿಯನ್ನರ್ಪಿಸಿದರು. ಶಾಮರಾವ್ ಅವರ ಜ್ಯೇಷ್ಠ ಪುತ್ರ ಮಾಜಿ ಕೇಂದ್ರೀಯ ಮಂತ್ರಿ ಸುರೇಶ ಕಲ್ಮಾಡಿ, ಡಾ| ಪ್ರಕಾಶ್ ಕಲ್ಮಾಡಿ, ಮುಕೇಶ್ ಕಲ್ಮಾಡಿ, ಶ್ರೀಧರ್ ಕಲ್ಮಾಡಿ ದಂಪತಿ ಮತ್ತು ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳ ಜೊತೆಗೂಡಿ ಹಾಡನ್ನು ಹಾಡಿದರು.
ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ಇವರು ಶಾಮರಾಯರ ಸಹವಾಸದಲ್ಲಿನ ಅವಿಸ್ಮರಣೀಯ ನೆನಪುಗಳನ್ನು ಹೇಳಿ, ಅವರ ಬಗ್ಗೆ ಬರೆದ ಕಾವ್ಯ ವಾಚನ ಮಾಡಿದರು. ದಿವಂಗತ ಶಾಮರಾವ್ ಪುಣೆಯಲ್ಲಿ ಒಬ್ಬ ಆದರ್ಶ ವೈದ್ಯ, ಸಮಾಜ ಸೇವಕ, ಕಲೋಪಾಸಕ ಮತ್ತು ವಿದ್ಯಾ ಪ್ರೇಮಿಯಾಗಿ ತನ್ನನ್ನು ತೊಡಗಿಸಿಕೊಂಡು ಪುಣೆಯ ಕನ್ನಡಿಗರನ್ನು ಒಟ್ಟುಗೂಡಿಸಿಕೊಂಡು ಸಾರ್ಥಕ ಜೀವನ ನಡೆಸಿದ ಆದರಣೀಯ ವ್ಯಕ್ತಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅವಳಿ ಸಹೋದರಿಯರಾದ ಮೇಘಾ ಮತ್ತು ಮೇಧಾ ನಗರದ ಇವರಿಂದ ಮೋಹಕ ಕಥಕ್ ನೃತ್ಯ, ಸುಚಿಕಾ ಜೋಷಿಯವರ ಭರತ ನಾಟ್ಯ, ಶಾಮರಾಯರ ಮರಿ ಮೊಮ್ಮಕ್ಕಳ ವಾಯೊಲಿನ್ ವಾದನ, ಪುಟ್ಟಬಾಲೆ ಶ್ರೀಜ ಆಚಾರ್ಯಳ ಪಾಪ್ ನೃತ್ಯ, ಅತ್ಯಂತ ಹಿರಿಯ ವಯಸ್ಸಿನವರ ಸುಶ್ರಾವ್ಯ ಹಾಡು ಮುಖ್ಯವಾಗಿ ಪ್ರೇಕ್ಷಕರ ಮನ ಸೂರೆಗೊಂಡಿತು.
ಪ್ರದರ್ಶನದಲ್ಲಿ ಭಾಗವಹಿಸಿದ ಎÇÉಾ ಸದಸ್ಯರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನಿತ್ತು ಪ್ರೋತ್ಸಾಹಿಸಲಾಯಿತು. ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥೆ ರಾಧಿಕಾ ಶರ್ಮ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ, ಕನ್ನಡ ಮಾಧ್ಯಮ ಹೈಸ್ಕೂಲ್ ಪ್ರಾಂಶುಪಾಲರಾದ ಚಂದ್ರಕಾಂತ್ ಹಾರಕೂಡೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪ್ರೇಕ್ಷಕರು ಭಾಗವಹಿಸಿದರು. ಶಿಕ್ಷಕಿ ವಿಲ್ಮಾ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು. ರಾಮದಾಸ ಆಚಾರ್ಯ ವಂದಿಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.