ಪುಣೆ: ಹೊಕ್ಕಳು ಬಳ್ಳಿಯ ಮೂಲಕ ತಾಯಿಯಿಂದ ಮಗುವಿಗೆ ಸೋಂಕು ಹರಡಿದ ಪ್ರಕರಣವು ಮಹಾರಾಷ್ಟ್ರದ ಪುಣೆಯ ಆಸ್ಪತ್ರೆಯಲ್ಲಿ ನಡೆದಿದೆ.
ತಾಯಿಗೆ ಕೋವಿಡ್ 19 ಸೋಂಕು ದೃಢಪಟ್ಟ ಕಾರಣ, ಶಿಶುವು ಗರ್ಭಾಶಯದಲ್ಲಿರುವಂತೆಯೇ ಹೊಕ್ಕಳು ಬಳ್ಳಿಯ ಮೂಲಕ ಸೋಂಕು ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜತೆಗೆ ತಾಯಿಗೆ ಸೋಂಕಿದ್ದರೆ, ಮಗು ಜನಿಸಿದ ಬಳಿಕವೂ ಸ್ತನ್ಯಪಾನ ಹಾಗೂ ಇತರೆ ಸಂಪರ್ಕದಿಂದಲೂ ಮಗುವಿಗೆ ಸೋಂಕು ಹಬ್ಬುತ್ತದೆ.
ಆದರೆ ಇಲ್ಲಿ ಮಗು ಜನಿಸುವ ಮುನ್ನವೇ ಹೊಕ್ಕಳು ಬಳ್ಳಿಯ ಮೂಲಕ ಸೋಂಕು ಹರಡಿದೆ. ಶಿಶು ಜನಿಸಿದೊಡನೆ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆಯ ಮಕ್ಕಳ ರೋಗಗಳ ವಿಭಾಗದ ಮುಖ್ಯಸ್ಥೆ ಡಾ| ಆರತಿ ಕಿನಿಕರ್ ಹೇಳಿದ್ದಾರೆ.
2 ವಾರ ಚಿಕಿತ್ಸೆಯ ಬಳಿಕ ಮಗು ಚೇತರಿಸಿಕೊಂಡಿತು. ಅನಂತರ ತಾಯಿ-ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು. ಈಗ ಅವರಿಬ್ಬರ ದೇಹದಲ್ಲೂ ಪ್ರತಿಕಾಯ ಸೃಷ್ಟಿಯಾಗಿದೆ ಎಂದವರು ತಿಳಿಸಿದರು.