Advertisement

ಪುಣೆ ಬಂಟರ ಸಂಘ: ದಸರಾ ಪೂಜೆ, ದಾಂಡಿಯಾ ರಾಸ್‌

04:08 PM Oct 03, 2017 | Team Udayavani |

ಪುಣೆ: ನವರಾತ್ರಿಯ ಈ ಶುಭ ಪರ್ವದಲ್ಲಿ ಸಮಾಜ ಬಾಂಧವರನ್ನು ಸೇರಿಸಿಕೊಂಡು ಭವ್ಯ ಕಾರ್ಯಕ್ರಮವನ್ನು ಆಯೋಜಿಸಿ ನಾವು ಆರಾಧಿಸಿಕೊಂಡು ಬಂದಿರುವ ಆದಿಶಕ್ತಿಯ ಪೂಜೆಯನ್ನು ಗೈಯ್ಯುವ ಮೂಲಕ ನಮ್ಮ ಧಾರ್ಮಿಕ ಶ್ರದ್ಧೆಯನ್ನು ಉಳಿಸಿಕೊಂಡು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಪುಣೆ ಬಂಟರ ಸಂಘದ ಕಾರ್ಯ ಅಭಿನಂದನೀಯ. ದುಷ್ಟ ಶಕ್ತಿಗಳ ನಿಗ್ರಹಿಸಿ ಲೋಕಕ್ಕೆ ಕಲ್ಯಾಣವನ್ನು ಅನುಗ್ರಹಿಸುವ ಸಂದೇಶ ಸಾರುವ ನವದುರ್ಗೆಯರ ಆರಾಧನೆಯಿಂದ ನಮ್ಮೊಳಗಿನ ಧಾರ್ಮಿಕ ಭಾವನೆಗಳು ಜಾಗೃತಗೊಂಡು ಸನ್ಮಾರ್ಗದ ಬದುಕಿಗೆ ಪ್ರೇರಣೆಯಾಗುತ್ತದೆ ಎಂದು  ಬಂಟ್ಸ್‌ ನ್ಯಾಯಮಂಡಳಿ ಮುಂಬಯಿ ಉಪಾಧ್ಯಕ್ಷ  ರವೀಂದ್ರ ಎಂ. ಅರಸ  ನುಡಿದರು.

Advertisement

ಸೆ. 29ರಂದು ನಗರದ ಪಿವೈಸಿ ಕ್ಲಬ್‌ ಸಭಾಂಗಣದಲ್ಲಿ ನಡೆದ ಪುಣೆ ಬಂಟರ ಸಂಘದ ವಾರ್ಷಿಕ ದಸರಾ ಪೂಜೆ ಹಾಗೂ ದಾಂಡಿಯಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಾವು ಬಂಟರು ವಿದ್ಯೆಯಲ್ಲಿ ಮಹತ್ತರ ಪ್ರಗತಿಯನ್ನು ಪಡೆದುಕೊಂಡು ತಮ್ಮ ವಿಶಿಷ್ಟ ಸಾಧನೆಯೊಂದಿಗೆ ಇಂದು ವಿಶ್ವವ್ಯಾಪಿಯಾಗಿ  ಗುರುತಿಸಿಕೊಂಡು ಉತ್ತಮ ಸಮಾಜವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವುದು ಅಭಿಮಾನದ ವಿಷಯವಾಗಿದೆ. ಅಂತೆಯೇ ಪುಣೆಯಲ್ಲಿ ಸಮಾಜದ ಒಗ್ಗಟ್ಟಿನೊಂದಿಗೆ ಸಂತೋಷ್‌ ಶೆಟ್ಟಿ ಅವರ ನೇತೃತ್ವದಲ್ಲಿ, ಮಾಜಿ ಅಧ್ಯಕ್ಷರುಗಳ ಹಾಗೂ ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ಸುಸಜ್ಜಿತವಾದ ಸಾಂಸ್ಕೃತಿಕ ಭವನವನ್ನು ನಿರ್ಮಿಸಿ ಇತಿಹಾಸ ಸೃಷ್ಟಿಸಿರುವುದಕ್ಕೆ ಅಭಿನಂದಿಸಬೇಕಾಗಿದೆ. ಭವಿಷ್ಯದಲ್ಲಿ ಸ್ಥಳೀಯ ಸಂಸ್ಕೃತಿಯನ್ನೂ ಗೌರವಿಸಿ ಕೊಂಡು ನಮ್ಮ ಸಾಂಸ್ಕೃತಿಕ ಪರಂಪರೆ ಉಳಿಸುವ ಕಾರ್ಯ ನಡೆಯುತ್ತಿರಲಿ ಎಂದರು.

ಅತಿಥಿಯಾಗಿ ಉಪಸ್ಥಿತರಿದ್ದ ಮುಂಬಯಿ ಬಂಟರ ಸಂಘದ ಗೌರವ ಕೋಶಾಧಿಕಾರಿ ಸಿಎ  ಐ. ಆರ್‌. ಶೆಟ್ಟಿ ಮಾತನಾಡಿ, ನಮ್ಮೊಳಗಿನ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳಿಗೆ ಗೌರವ ನೀಡುತ್ತಾ ಬಂದವರು ನಾವು. ಭಕ್ತಿಯಿಂದ ದೇವರ ಪೂಜೆ ಗೈದರೆ ನಮ್ಮೊಳಗಿನ ಋಣಾತ್ಮಕ ಶಕ್ತಿ ಗಳು ದೂರವಾಗಿ ಧನಾತ್ಮಕ ಶಕ್ತಿ ಗಳು ಸಂಚಯನವಾಗಿ ಜೀವನ ಅರ್ಥ ಪೂರ್ಣವಾಗಿ ಬೆಳಗುತ್ತದೆ. ನಾವು ಬಂಟರು  ಜೀವನದಲ್ಲಿ ಕಠಿನ ಪರಿಶ್ರಮದೊಂದಿಗೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಂಡು ವಿಶೇಷವಾಗಿ ಗುರುತಿಸಿಕೊಳ್ಳುವ ಸಮಾಜ ನಮ್ಮದಾಗಿದೆ. ವಿದ್ಯೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಆಧುನಿಕ  ತಂತ್ರಜ್ಞಾನ ಸಾಧನೆಗೆ ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಪುಣೆಯಲ್ಲಿ ಉತ್ಸಾಹಿ ನಾಯಕ ಸಂತೋಷ್‌ ಶೆಟ್ಟಿ ಅವರ ಸಾರಥ್ಯದಲ್ಲಿ ಭವನದ ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಸಂಘದ ಅಧ್ಯಕ್ಷ ಸಂತೋಷ್‌  ಶೆಟ್ಟಿ  ಕುರ್ಕಿಲ್‌ಬೆಟ್ಟು ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ,  ನವರಾತ್ರಿ ಹಬ್ಬದ ಪ್ರಯುಕ್ತ ದಸರಾ ಪೂಜೆ, ತೆನೆ ಹಬ್ಬ ನಮ್ಮ ನಾಡಿನ ಸಂಸ್ಕೃತಿಯನ್ನು ಸಾರುವ ಆಚರಣೆಗಳಾಗಿವೆ. ಇದರೊಂದಿಗೆ ಯುವ ಪೀಳಿಗೆಗೆ ಉತ್ಸಾಹ ತುಂಬುವ ದಾಂಡಿಯಾ ಕಾರ್ಯಕ್ರಮವನ್ನೂ ಹಮ್ಮಿಕೊಂಡು ಸಂಘದ ಮುಖಾಂತರ ಸಮಾಜ ಬಾಂಧವರನ್ನು ಸಾಂಸ್ಕೃತಿಕವಾಗಿ ಸಂಘದೊಂದಿಗೆ ಬೆಸೆಯುವ ಅಂತೆಯೇ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಿ  ಅವರಿಗೆ ನಮ್ಮ ಆಚಾರ, ವಿಚಾರಗಳನ್ನು ತಿಳಿಸುವ ಉದ್ದೇಶವೂ ನಮ್ಮದಾಗಿದೆ. ನಮ್ಮ ಇಂದಿನ  ಕಾರ್ಯಕ್ರಮವನ್ನು ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಅಂತೆಯೇ ಪ್ರಾದೇಶಿಕ ಸಮಿತಿಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ. ನಮ್ಮ ಸಂಘದ ಸಾಂಸ್ಕೃತಿಕ ಭವನದ ಲೋಕಾರ್ಪಣೆಯ ಕ್ಷಣಗಣನೆ ಆರಂಭಗೊಂಡಿದ್ದು ಸಮಾಜ ಬಾಂಧವ ರೆಲ್ಲರೂ ಸಂಭ್ರಮದ ಕ್ಷಣವನ್ನು ಸ್ಮರಣೀಯವನ್ನಾಗಿಸಲು ಸಹಕಾರ ನೀಡಬೇಕು ಎಂದರು.

Advertisement

ಸಂಘದ ಉಪಾಧ್ಯಕ್ಷರಾದ ಮಾಧವ ಆರ್‌. ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಪುಣೇರಿ ಪೇಟ ತೊಡಿಸಿ, ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛ ಹಾಗೂ ಭತ್ತದ ತೆನೆಗಳನ್ನು ನೀಡಿ ಸಮ್ಮಾನಿಸಲಾಯಿತು.

ರಾಮಕೃಷ್ಣ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಸುಮಾ ಶೆಟ್ಟಿ, ಗಣೇಶ್‌ ಪೂಂಜಾ, ಕು| ದಿಯಾ ವಿವೇಕಾನಂದ ಶೆಟ್ಟಿ, ಗೀತಾ ಆರ್‌. ಶೆಟ್ಟಿ ಮತ್ತು ಸಿದ್ಧಾಂತ್‌  ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭ ಸಂಘದ ಸಾಂಸ್ಕೃತಿಕ ಭವನದ ಹಾಗೂ ಸಂಘದ ಸ್ಥೂಲನೋಟವನ್ನು ಬೀರುವ ಪುಸ್ತಿಕೆಯನ್ನು ವೇದಿಕೆಯಲ್ಲಿ ಅತಿಥಿಗಳು ಅನಾವರಣಗೊಳಿಸಿದರು. ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಯಶೋದಾ ಶೆಟ್ಟಿ ಪ್ರಾರ್ಥನೆಗೈದರು. ಅಧ್ಯಕ್ಷ ಸಂತೋಷ್‌ ಶೆಟ್ಟಿ ಸ್ವಾಗತಿಸಿದರು. ಸುಲತಾ ಸತೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಜಿತ್‌ ಹೆಗ್ಡೆ ವಂದಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮತ್ತು ಸದಸ್ಯರು ದೇವಿಯ ಅಲಂಕೃತ ಮಂಟಪಕ್ಕೆ ಆರತಿ ಬೆಳಗಿ ಪ್ರಾರ್ಥಿಸಿದರು. ಸುಖೇಶ್‌ ಶೆಟ್ಟಿ ಎಣ್ಣೆಹೊಳೆ ಮತ್ತು ಬಳಗ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಹಿಳೆಯರಿಗೆ ಹಾಗೂ ಪುರುಷರಿಗೆ  ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ಸಂಘದ ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಆಕರ್ಷಕ ದಾಂಡಿಯಾ ನೃತ್ಯ ಪ್ರದರ್ಶಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು.  ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಜಯಂತ್‌ ಶೆಟ್ಟಿ, ಸದಾನಂದ ಕೆ. ಶೆಟ್ಟಿ, ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ, ಕುಶಲ್‌ ಹೆಗ್ಡೆ, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಅಧ್ಯಕ್ಷ ನಾರಾಯಣ ಕೆ ಶೆಟ್ಟಿ, ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಪುಣೆ ಪ್ರಾಹಾದ ಅಧ್ಯಕ್ಷ ಗಣೇಶ್‌ ಶೆಟ್ಟಿ ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಪುಣೆಯಲ್ಲಿ ಬಂಟರ ಅರಮನೆಯಂತೆ ಸುಂದರವಾಗಿ ಕಂಗೊಳಿಸುವ ಸಾಂಸ್ಕೃತಿಕ ಭವನ ಆದಷ್ಟು ಬೇಗ ಲೋಕಾರ್ಪಣೆಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆಯಾಗಿ ಮೆರೆಯಲಿ 
– ಖಾಂದೇಶ್‌ ಭಾಸ್ಕರ್‌ ಶೆಟ್ಟಿ  (ಕಾರ್ಯಾಧ್ಯಕ್ಷರು : ಬಂಟರ ಸಂಘ  ನವಿಮುಂಬಯಿ ಪ್ರಾದೇಶಿಕ ಸಮಿತಿ).

ನವರಾತ್ರಿಯ ಈ ಹಬ್ಬವನ್ನು ಬಹಳ ಶಿಸ್ತಿನಿಂದ ಆಚರಿಸುತ್ತಿರುವ ಪುಣೆ ಬಂಟರ ಸಂಘದ ಸಾಮಾಜಿಕ, ಸಾಂಸ್ಕೃತಿಕ ಕಾಳಜಿ ಪ್ರಶಂಸನೀಯವಾಗಿದೆ. ಮುಖ್ಯವಾಗಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಈ ಕಾರ್ಯಕ್ರಮ ಪ್ರಯೋಜನವಾಗಲಿದೆ. ಸಂಘದ ಭವನ ಶೀಘ್ರದಲ್ಲಿ ಉದ್ಘಾಟನೆಗೊಂಡು ಸೇವೆ ನೀಡುವಂತಾಗಲಿ 
– ಹರೀಶ್‌ ಶೆಟ್ಟಿ (ನಿರ್ದೇಶಕರು : ರಮಡಾ ಹೊಟೇಲ್‌ ನವಿಮುಂಬಯಿ)

ದಸರಾ ಹಬ್ಬದಂತಹ ಆಚರಣೆಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಲ್ಲಿ ಮಹತ್ವವನ್ನು ಪಡೆಯುತ್ತವೆೆ. ಪುಣೆಯಲ್ಲಿ ಬಂಟರ ಸಂಘ ಭವನವನ್ನು ನಿರ್ಮಿಸಿ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದು ಹೆಮ್ಮೆಯಾಗುತ್ತಿದೆ 
– ದಿನಕರ ಶೆಟ್ಟಿ (ನಿರ್ದೇಶಕರು : ರಮಡಾ ಹೊಟೇಲ್‌ ನವಿಮುಂಬಯಿ)

ಬಹಳಷ್ಟು ಭಕ್ತಿ ಸಂಭ್ರಮದಿಂದ ದಸರಾ ಪೂಜೆ, ತೆನೆಹಬ್ಬವನ್ನು ಆಚರಿಸಿ ನಮ್ಮ ಆಚಾರ ವಿಚಾರಗಳನ್ನು  ಪೋಷಿಸುವ ಕಾರ್ಯವನ್ನು ಪುಣೆ ಬಂಟರ ಸಂಘ ಮಾಡುತ್ತಿರುವುದು ಅಭಿಮಾನದ ವಿಷಯವಾಗಿದೆ. ಸಂಘದಿಂದ ಭವಿಷ್ಯದಲ್ಲಿ ಉತ್ತಮ ಸಾಮಾಜಿಕ ಕಾರ್ಯಗಳು ನಡೆಯುತ್ತಿರಲಿ 
– ಜಯರಾಮ ಶೆಟ್ಟಿ (ಅಜಂತಾ ಕ್ಯಾಟರರ್ಸ್‌ ಮುಂಬಯಿ)

ಪುಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಂಟರ ಭವನವನ್ನು ಕಂಡಾಗ ಬಹಳಷ್ಟು ಆನಂದವಾಗುತ್ತಿದೆ. ಇಂತಹ ಭವನವನ್ನು ಕೊಡುಗೆಯಾಗಿ ಪಡೆದ ಪುಣೆಯಲ್ಲಿರುವ ಬಂಟರು ನಿಜವಾಗಿಯೂ ಭಾಗ್ಯವಂತರು. ಇದಕ್ಕೆ ಕಾರಣರಾದ ಸಂಘದ ಎಲ್ಲರು ನಿಜವಾಗಿಯೂ ಅಭಿನಂದನಾರ್ಹರು 
– ಸಂತೋಷ್‌ ಡಿ. ಶೆಟ್ಟಿ (ಮಾಜಿ ನಗರ ಸೇವಕರು ನವಿಮುಂಬಯಿ)

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next