ಪುಣೆ: ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ವತಿಯಿಂದ ಫೆ. 19ರಂದು ಹೊಟೇಲ್ ನ್ಯೂ ಸಾಗರ್ ವಾರ್ಜೆ ಇಲ್ಲಿ ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾದ ಸಿಆರ್‌ಪಿಎಫ್ ಯೋಧರಿಗಾಗಿ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಟ್ಯಗುರು ಮದಂಗಲ್ಲು ಆನಂದ ಭಟ್, ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಇವರು ಉಪಸ್ಥಿತರಿದ್ದು ದೀಪ ಹಚ್ಚಿಟ್ಟು ಹುತಾತ್ಮರಿಗೆ ಪುಷ್ಪ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭ ಪಾಂಗಾಳ ವಿಶ್ವನಾಥ ಶೆಟ್ಟಿ ಮಾತನಾಡಿ, ಫೆ. 14ರಂದು ಮೋಸದಿಂದ ನಮ್ಮ ಸೈನಿಕರನ್ನು ಬಲಿಪಡೆದ ನರರಾಕ್ಷಸರ ಕೃತ್ಯವನ್ನು ದೇಶವಾಸಿಗಳೆಲ್ಲರೂ ಯಾವುದೇ ಭೇದಭಾವ ಮಾಡದೆ ಖಂಡಿಸಲೇಬೇಕಾಗಿದೆ. ಹುತಾತ್ಮರಾದ ನಮ್ಮ ಹೆಮ್ಮೆಯ ಸೈನಿಕರ ಕುಟುಂಬದೊಂದಿಗೆ ನಾವೆಲ್ಲರೂ ದುಃಖದ ಘಳಿಗೆಯಲ್ಲಿದ್ದೇವೆ. ಇಂತಹ ಕೃತ್ಯಗಳು ಇನ್ನೆಂದೂ ನಡೆಯದಿರಲೆಂದು ನಾವು ದೇವರಲ್ಲಿ ಪ್ರಾರ್ಥಿಸುತ್ತಾ ಅಗಲಿದ ವೀರಯೋಧರ ಆತ್ಮಗಳಿಗೆ ಭಗವಂತ ಚಿರಶಾಂತಿ ನೀಡಲಿ ಎಂದು ಎರಡು ನಿಮಿಷಗಳ ಮೌನ ಪ್ರಾರ್ಥನೆಯನ್ನು ಸಲ್ಲಿಸೋಣ. ಇದು ದೇಶದ ನಾಗರಿಕರಾದ ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುತ್ತೇನೆ ಎಂದರು.
ನಾಟ್ಯಗುರು ಮದಂಗಲ್ಲು ಆನಂದ ಭಟ್ ಅವರು ಮಾತನಾಡಿ, ಇಂದು ನಾವು ನೆಮ್ಮದಿಯಿಂದ ದೇಶದಲ್ಲಿ ಯಾವುದೇ ಭಯವಿಲ್ಲದೆ ಬದುಕಲು ನಮ್ಮ ದೇಶರಕ್ಷಣೆ ಹೊತ್ತ ಸೈನಿಕರೇ ಕಾರಣ. ಅವರು ಇಂದು ಭಯೋತ್ಪಾದಕರ ಕುಕೃತ್ಯಕ್ಕೆ ಬಲಿಯಾಗಿದ್ದು ನಮಗೆಲ್ಲರಿಗೂ ಅತೀವ ನೋವಿನ ಸಂಗತಿಯಾಗಿದೆ. ಅವರ ಕುಟುಂಬದ ದುಃಖದಲ್ಲಿ ನಾವೆಲ್ಲರೂ ಸಮಾನ ದುಃಖೀಗಳಾಗಿದ್ದೇವೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ. ನಮ್ಮ ದೇಶದ ಪ್ರಧಾನ ಮಂತ್ರಿಗಳು ಮಾಡುವ ಉತ್ತಮ ಕಾರ್ಯಗಳನ್ನು ನಾವೆಲ್ಲರೂ ಬೆಂಬಲಿಸೋಣ ಎಂದು ನುಡಿದರು.
ಈ ಸಂದರ್ಭ ಸಂಘದ ಕಲಾವಿದರಾದ ವಾಸು ಕುಲಾಲ್ ವಿಟ್ಲ, ಸುಕೇಶ್ ಶೆಟ್ಟಿ ಎಣ್ಣೆಹೊಳೆ, ನಯನಾ ಸಿ. ಶೆಟ್ಟಿ, ಗೀತಾ ಡಿ. ಪೂಜಾರಿ, ಸರಸ್ವತಿ ಸಿ. ಕುಲಾಲ್, ಸಹನಾ ಸಿ. ಕುಲಾಲ…, ಪ್ರತೀûಾ ಡಿ. ಪೂಜಾರಿ, ರೀಷ್ಮಾ ಆರ್. ಶೆಟ್ಟಿ, ಸದಸ್ಯರಾದ ಸಾಧು ಶೆಟ್ಟಿ, ನಿತಿನ್ ಶೆಟ್ಟಿ, ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಪುಷ್ಪ ನಮನಗಳನ್ನು ಸಲ್ಲಿಸಿದರು.
ಚಿತ್ರ-ವರದಿ: ಕಿರಣ್ ರೈ ಕರ್ನೂರು