ಪುಣೆ : ತನ್ನ ಮನೆಯ ಕಿಟಕಿಯ ಹೊರಗೆ ಆಗಸದಲ್ಲಿ ತಾನು ಅನ್ಯಗ್ರಹದ ನಿಗೂಢ ಸಾಧನವೊಂದನ್ನು ಕಂಡೆ ಎಂದು ಪುಣೆಯ 47ರ ಹರೆಯದ ವ್ಯಕ್ತಿಯೋರ್ವ ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್ ಮಾಡಿದುದನ್ನು ಅನುಸರಿಸಿ ತತ್‌ಕ್ಷಣವೇ ಪುಣೆ ಪೊಲೀಸರು ಕ್ರಿಯಾಶೀಲರಾಗಿ ಅಂತಿಮವಾಗಿ ಬೇಸ್ತುಬಿದ್ದ ವಿದ್ಯಮಾನವೊಂದು ವರದಿಯಾಗಿದೆ.
ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್ ಮಾಡಿದ 47ರ ಹರೆಯದ ವ್ಯಕ್ತಿಯು ಕೊಥ್ರೂಡ್ ಪ್ರದೇಶದ ನಿವಾಸಿ ಎಂದು ಪತ್ತೆ ಹಚ್ಚಿದ ಪೊಲೀಸರಿಗೆ ಆತ ಮನೋರೋಗದಿಂದ ಬಳಲುತ್ತಿರುವುದಾಗಿ ಗೊತ್ತಾಯಿತು. ಆತನು ತನ್ನ ಮನೆಯ ಕಿಟಕಿಯ ಆಗಸದಲ್ಲಿ ಅನ್ಯಗ್ರಹ ವಸ್ತುವನ್ನು ಕಂಡದ್ದು ಕೇವಲ ಭ್ರಾಂತಿ ಎಂಬುದನ್ನು ಪೊಲೀಸರು ಅನಂತರ ಅರಿತುಕೊಂಡರು.
ಪ್ರಧಾನಿ ಕಾರ್ಯಾಲಯದವರು ಅನ್ಯಗ್ರಹ ವಸ್ತು ಕಾಣಲಾಯಿತೆಂಬ ಬಗೆಗಿನ ಇ-ಮೇಲ್ ಪತ್ರವನ್ನು ಕೂಡಲೇ ಮಹಾರಾಷ್ಟ್ರ ಸರಕಾರಕ್ಕೆ ಕಳುಹಿಸಿದ್ದರು. ಪರಿಣಾಮವಾಗಿ ಸರಕಾರದಿಂದ ಪೊಲೀಸರಿಗೆ ಕೂಡಲೇ ಸಂದೇಶ ಹೋಗಿತ್ತು. ಅಂತೆಯೇ ಸಿಂಘದ್ ರೋಡ್ ಠಾಣೆಯ ಪೊಲೀಸರು ಕರ್ತವ್ಯಕ್ಕೆ ಮುನ್ನುಗ್ಗಿದ್ದರು.
ಅನ್ಯಗ್ರಹ ವಸ್ತುವನ್ನು ಆಗಸದಲ್ಲಿ ಕಂಡೆನೆಂದು ಹೇಳಿಕೊಂಡಿದ್ದ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆ ಮೆದುಳಾಘಾತವಾಗಿತ್ತು. ಪರಿಣಾಮವಾಗಿ ಮಾನಸಿಕ ಸಂತುಲನೆಯನ್ನು ಕಳೆದುಕೊಂಡಿದ್ದ. ಕೆಲ ತಿಂಗಳ ಹಿಂದೆ ತನ್ನ ಮನೆಯ ಹೊರಗಿನ ಮರಗಳೆಡೆಯಿಂದ ಬೆಳಕು ಹರಿದು ಬರುತ್ತಿದ್ದುದನ್ನು ಕಂಡ ಈ ವ್ಯಕ್ತಿ ಅದನ್ನೇ ಅನ್ಯಗ್ರಹ ವಸ್ತುವೆಂದು ಭ್ರಮಿಸಿದ್ದ. ಈ ಅನ್ಯ ಗ್ರಹ ವಸ್ತುವು ಭೂಗ್ರಹದ ಬಹುಮುಖ್ಯ ಮಾಹಿತಿಗಳನ್ನು ತನ್ನ ಗ್ರಹಕ್ಕೆ ರವಾನಿಸುತ್ತಿದೆ ಎಂಬ ಭೀತಿ ಆತನನ್ನು ಕಾಡತೊಡಗಿತ್ತು.
ಈ ಭೀತಿಯಲ್ಲಿ ಆತ ಪ್ರಧಾನಿ ಕಾರ್ಯಾಲಯಕ್ಕೆ ಇಮೇಲ್ ಕಳಿಸಿದ್ದ ಸಂಗತಿ ಆತನ ಮನೆಯವರಿಗೂ ಗೊತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.