Advertisement
ನಮ್ಮ ನಾಡಿನ ಭಾಷೆ, ಸಂಸ್ಕೃತಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ ಸಾಹಿತಿಗಳ ಸಾಲಿನಲ್ಲಿ ಪಂಚ ಭಾಷಾ ವಿದ್ವಾಂಸರಾದ ದಿವಂಗತ ಡಾ| ವೆಂಕಟರಾಜ ಪುಣಿಂಚತ್ತಾಯರ ಸಾಧನೆ ಅನನ್ಯವಾದುದು. ಕೇರಳದ ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡದ ಉಳಿವಿ ಗಾಗಿ ಹೋರಾಟಗಳಲ್ಲಿ ಭಾಗಿಯಾಗಿದ್ದ ಇವರು ಕನ್ನಡ ಮಾತ್ರವಲ್ಲದೆ, ತುಳುವಿನಲ್ಲೂ ಅಮೋಘ ಸಾಧನೆ ಮಾಡಿದ್ದಾರೆ. ಸಂಸ್ಕೃತ, ಹಿಂದಿಯಲ್ಲೂ ಉತ್ಕೃಷ್ಟವಾದ ಸಾಹಿತ್ಯಗಳನ್ನು ರಚಿಸಿದ್ದಾರೆ. ಯಕ್ಷಗಾನ ಕಲಾವಿದರಾಗಿ, ಅರ್ಥಧಾರಿಯಾಗಿ, ಅನೇಕ ಯಕ್ಷಗಾನ ಪ್ರಸಂಗ, ನಾಟಕಗಳನ್ನು ರಚಿಸಿದ್ದಾರೆ.
ಪು.ವೆಂ.ಪು ಕಾವ್ಯನಾಮದಿಂದ ಖ್ಯಾತರಾದ ದಿ| ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯರು ಪುಂಡೂರು ದಾಮೋದರ ಪುಣಿಂಚತ್ತಾಯರು ಮತ್ತು ಸರಸ್ವತಿಯಮ್ಮನವರ ದ್ವಿತೀಯ ಪುತ್ರನಾಗಿ 1936ರ ಅಕ್ಟೋಬರ್ 10ರಂದು ಪುಂಡೂರಿನಲ್ಲಿ ಜನಿಸಿದರು. ಅಗಲ್ಪಾಡಿಯ ಶ್ರೀ ಅನ್ನಪೂರ್ಣೇಶ್ವರಿ ಸಂಸ್ಕೃತ ಪಾಠಶಾಲೆಯಲ್ಲಿ ಆರಂಭದ ಶಿಕ್ಷಣ ಪಡೆದ ಇವರು ಮುಂದೆ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ, ಸಂಸ್ಕೃತ ಶಿರೋ ಮಣಿ ಮತ್ತು ಕನ್ನಡ ವಿದ್ವಾನ್ ಪದವಿಗಳನ್ನು ಗಳಿಸಿದರು. ಇದರೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂಎ ಪದವಿ, ದಕ್ಷಿಣ ಭಾರತ ಹಿಂದಿ ಪ್ರಚಾರಕ ಸಭಾದಿಂದ ರಾಷ್ಟ್ರಭಾಷಾ ವಿಶಾರದವನ್ನೂ ಮಾಡಿದರು.
Related Articles
Advertisement
ಶ್ರೀ ಎಡನೀರು ಮಠದ ಸಂಪರ್ಕದಿಂದಾಗಿ ಅವರಿಗೆ ಒಬ್ಬ ಅರ್ಥಧಾರಿಯಾಗಿ ಬೆಳೆಯುವ ಅವಕಾಶ ದೊರಕಿತು. ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಯಕ್ಷಗಾನ ಅಭಿರುಚಿಯಿಂದಾಗಿ ಅಲ್ಲಿನ ವಾತಾ ವರಣದಲ್ಲಿ ಪುಣಿಂಚತ್ತಾಯರು ಬೇರೆ ಬೇರೆ ಪಾತ್ರಗಳ ಅರ್ಥಗಾರಿಕೆಯಲ್ಲಿ ಮಿಂಚಿದರು. ಯಕ್ಷಗಾನ ವೇಷಧಾರಿಯಾಗಿಯೂ ರಂಗ ವೇರಿ ಪ್ರತಿಭೆಯನ್ನು ತೋರಿದರು. ಯಕ್ಷಗಾನ ಪ್ರಸಂಗಗಳನ್ನು ಮಾತ್ರವಲ್ಲದೆ ಹಲವಾರು ನಾಟಕ ಗಳನ್ನು ರಚಿಸಿದ್ದಾರೆ. ಒಬ್ಬ ಅಧ್ಯಾಪಕನಾಗಿ ಮಕ್ಕಳ ನಾಟಕದ ಕೊರತೆಯನ್ನು ಈ ಮೂಲಕ ನೀಗಿಸಲು ಪ್ರಯತ್ನಿಸಿದ್ದರಲ್ಲದೆ ಮಕ್ಕಳಿಗಾಗಿ ಶಿಶುಗೀತೆಗಳ ಗುತ್ಛವನ್ನು ನೀಡಿದ್ದಾರೆ. ಅನ್ಯ ಭಾಷೆಯ ಸೊಗಡನ್ನು ನಮ್ಮ ಭಾಷೆಗೆ ಪರಿಚಯಿಸುವ ಭಾಷಾಂತರ ಕಲೆ ಇವರಿಗೆ ಲೀಲಾಜಾಲವಾಗಿ ಒಲಿದಿದೆ. ಮಲಯಾಳದ ಹಲವು ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇನ್ನು ತುಳು ಸಾಹಿತ್ಯ ಲೋಕಕ್ಕೆ ಪುಣಿಂಚತ್ತಾಯರು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ತುಳು ಲಿಪಿಯ ಮೇಲೆ ಬೆಳಕು ಚೆಲ್ಲಿದ್ದಾರೆ. ಪ್ರಾಚೀನ ಕಾವ್ಯಗಳನ್ನು ಪತ್ತೆ ಮಾಡಿ ಸಂಶೋಧನೆಗಳನ್ನು ಮಾಡಿದ್ದಾರೆ. ತಾಳೆಗರಿ ಯಿಂದ ಸಂಗ್ರಹಿಸಿದ ಗ್ರಂಥಗಳನ್ನು ಸಂಶೋಧಿಸಿದ್ದಾರೆ. ಡಾ| ವೆಂಕಟರಾಜ ಪುಣಿಂಚತ್ತಾಯರ ಸಾಧನೆಗೆ ಸಂದ ಗೌರವ, ಪ್ರಶಸ್ತಿ, ಸಮ್ಮಾನಗಳು ಲೆಕ್ಕವಿಲ್ಲದಷ್ಟು. ರಾಷ್ಟ್ರಪತಿಯಾಗಿದ್ದ ಆರ್. ವೆಂಕಟರಾಮನ್‌ಅವರಿಂದ 1991ರಲ್ಲಿ ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿವಿಧ ಸಂಘ- ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿರುವ ಇವರು ಶೃಂಗೇರಿ ಜಗದ್ಗುರುಗಳಿಂದ, ಎಡನೀರು ಶ್ರೀಗಳಿಂದ ವಿದ್ವತ್ ಸಂಭಾವನೆ ಪಡೆದಿರುವುದು ಅವರ
ಅಗಾಧವಾದ ಪ್ರತಿಭೆಗೆ ಸಂದ ಮನ್ನಣೆ. ಅವರ ಈ ಸಾಧನೆಗೆ ಮುಕುಟವಿಟ್ಟಂತೆ ಮಂಗಳೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ಅನಾರೋಗ್ಯದಿಂದಾಗಿ 2012ರಲ್ಲಿ ಡಾ| ವೆಂಕಟ ರಾಜ ಪುಣಿಂಚತ್ತಾಯರು ನಿಧನ ಹೊಂದಿದರು. ತಮ್ಮ ಅನನ್ಯವಾದ ಸಾಹಿತ್ಯ ಸೇವೆಯ ಮೂಲಕ ಜನಮಾನಸ ದಲ್ಲಿ ಎಂದೆಂದಿಗೂ ಮರೆಯಾಗದೆ ಪುಣಿಂಚತ್ತಾಯರು ಉಳಿದಿದ್ದಾರೆ. ಪದ್ಮಾ ಆಚಾರ್ಯ, ಪುತ್ತೂರು