ಹುಬ್ಬಳ್ಳಿ: ಭಾರತರತ್ನ ಪಂ| ಭೀಮಸೇನ ಜೋಶಿ ಅವರು ಸಂಗೀತದ ಕ್ಷೇತ್ರದ ದೇವ ಪುರುಷ. ಅವರ ಸಂಗೀತ ಕೇಳುವುದಕ್ಕೆ ನಸೀಬು ಮತ್ತು ತಾಕತ್ತು ಬೇಕೆಂದು ನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತರತ್ನ ಪಂ| ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಭೀಮಸೇನ ಜೋಶಿ ಹಾಗೂ ಗಂಗೂಬಾಯಿ ಹಾನಗಲ್ಲ ಹುಬ್ಬಳ್ಳಿಯವರು. ಇಬ್ಬರೂ ಸವಾಯಿ ಗಂಧರ್ವ ಅವರ ಬಳಿ ಶಿಷ್ಯರಾಗಿ ಸಂಗೀತ ಅಭ್ಯಾಸ ಮಾಡಿದರು. ಇವರಿಬ್ಬರೂ ಹುಬ್ಬಳ್ಳಿಯವರೆಂಬುದು ನಮ್ಮೆಲ್ಲರಿಗೂ ಹೆಮ್ಮೆ ಎಂದರು. ಅವರ ಸಂಗೀತ ಆಲಿಸಿದರೆ ಆಧ್ಯಾತ್ಮಿಕ ಅನುಭೂತಿ ಲಭಿಸುತ್ತಿತ್ತು. ಭೀಮಸೇನ ಜೋಶಿಯವರ ಜೀವನೋತ್ಸಾಹ, ಆಸಕ್ತಿ, ಪ್ರೀತಿ ಮತ್ತು ನಡೆದು ಬಂದ ಹಾದಿ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಧಾರವಾಡ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಇದ್ದಾರೆ. ಸಂಗೀತ ಕ್ಷೇತ್ರದಲ್ಲಿ ಒಂದು ತೂಕ ಜಾಸ್ತಿ. ಅವರು ಬದುಕಿದ್ದು ಸಂಗೀತದ ಜತೆ. ಸರಸ್ವತಿ ಎಲ್ಲಾ ಸ್ವರಗಳನ್ನು ಅವರಿಗೆ ನೀಡಿದ್ದಾಳೆ. ಅವರ ಸಂಗೀತ ಕೇಳುತ್ತಿದ್ದರೆ ಕುಳಿತಲ್ಲಿಯೇ ಆಧ್ಯಾತ್ಮ ಲೋಕಕ್ಕೆ ಸೇರಿದಂತಾಗುತ್ತದೆ. ಸಂಗೀತದ ದೇವರೆಂದು ನಾವು ಅವರನ್ನು ಭಾವಿಸುತ್ತೇವೆ ಎಂದರು.
ವಿಭವ ಇಂಡಸ್ಟ್ರಿ ಸಿಇಒ ಹೆಚ್.ಎನ್.ನಂದಕುಮಾರ ಮಾತನಾಡಿ, ಭಾರತರತ್ನ ಭೀಮಸೇನ ಜೋಶಿಯವರು ನಡೆ ಮತ್ತು ನುಡಿ ಸಂಗೀತವಾಗಿದೆ. ಸರ್ಕಾರ ಜನ್ಮಶತಮಾನೋತ್ಸವ ಮಾಡುವ ಮೂಲಕ ಅವರ ಸಂಗೀತೋಪಾಸನೆಯ ಜೀವನ ಮುಂಬರುವ ಪೀಳಿಗೆಗೆ ಆದರ್ಶವಾಗಲಿದೆ. ಭೀಮಸೇನ ಜೋಶಿಯವರ ಸಂಗೀತ ಕೇಳುತ್ತಿದ್ದರೆ ಮೈಯಲ್ಲಿರುವ ನರನಾಡಿಗಳು ರೋಮಾಂಚನಗೊಳ್ಳುತ್ತಿದ್ದವು. ಬಹಳ ಹತ್ತಿರದಿಂದ ಅವರ ಸಂಗೀತ ಕೇಳಿದ್ದೇನೆ. ಸರಕಾರ ಅವರಿಗೆ ಭಾರತ ರತ್ನ ನೀಡಿದ್ದು, ಅದು ಭಾರತರತ್ನ ಪ್ರಶಸ್ತಿಗೆ ದೊರೆತ ಗೌರವವಾಗಿದೆ ಎಂದರು. ಪಂಡಿತ ವೆಂಕಟೇಶ ಆಲ್ಕೋಡ್, ಪಂಡಿತ ಜಯತೀರ್ಥ ಮೇವುಂಡಿ,
ವಿದುಷಿ ರೇಣುಕಾ ನಾಕೋಡ್ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪಂಡಿತ ರಾಜಗೋಪಾಲ ಕಲ್ಲೂರಕರ್ ಅವರ ನಿರ್ದೇಶನದಲ್ಲಿ ಕಲ್ಲೂರ ಮಹಾಲಕ್ಷಿ ತಬಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಮೂಹ ತಬಲಾ ವಾದನ ನುಡಿಸಿದರು. ಪಂಡಿತ ರಘುನಾಥ್ ನಾಕೋಡ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತಬಲಾ ಸಾಥ್ ನೀಡಿದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ಡಾ| ವೀರಣ್ಣ ಪತ್ತಾರ, ವಿದುಷಿ ಹೇಮಾ ವಾಗೊಡೆ, ಡಾ| ಪದ್ಮನಿ ಓಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಹಾಗೂ ಇನ್ನಿತರರಿದ್ದರು.