Advertisement
ನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಹೊಸ ವರ್ಷದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಅಪರಾಧ ನಿಯಂತ್ರಣ ವಿಚಾರದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಹಾಗೂ ಹಲ್ಲೆ ನಡೆಸಲು ಮುಂದಾದರೆ ಅಂತಹ ವ್ಯಕ್ತಿಗೆ ಗುಂಡಿನ ಮೂಲಕವೇ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದರು.
Related Articles
Advertisement
ಮತ್ತೂಂದೆಡೆ ತಮ್ಮ ವ್ಯಾಪ್ತಿಯ ಹಳೇ ಅಪರಾಧಿಗಳು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳ ಚಲವಲನಗಳ ಮೇಲೆ ನಿಗಾವಹಿಸುವಂತೆ ಪ್ರತಿ ವಲಯ ಡಿಸಿಪಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಇತ್ತೀಚೆಗಷ್ಟೇ ಸರ್ಕಾರ ಒದಗಿಸಿರುವ 911 ಗಸ್ತು ವಾಹನಗಳ ಮೂಲಕ ಎಲ್ಲೆಡೆ ಗಸ್ತು ಹೆಚ್ಚಿಸಲಾಗುವುದು ಎಂದು ಹೇಳಿದರು.
100-500ಕ್ಕೂ ಹೆಚ್ಚು ಜನ ಸೇರುವ ಸ್ಥಳಗಳು, ಸಂಸ್ಥೆ ಅಥವಾ ಮಾಲ್‌ಗಳ ಮಾಲೀಕರು ಆಯಾ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಎಂದಿಗೂ ಸಹಿಸುವುದಿಲ್ಲ. ಅನ್ಯಾಯಕ್ಕೊಳಗಾದ ಮಹಿಳೆ ಯಾವುದೇ ಮಾರ್ಗದ ಮೂಲಕ (ಆನ್‌ಲೈನ್, ಸಾಮಾಜಿಕ ಜಾಲತಾಣಗಳು) ಮೂಲಕ ದೂರು ನೀಡಿದರೂ, ನಿರ್ದಿಷ್ಟ ಸಮಯದಲ್ಲೇ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಪ್ರಮುಖವಾಗಿ ಪೊಕೊ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಪತ್ತೆಗೆ ಆದ್ಯತೆ ಕೊಡುವುದಲ್ಲದೆ, ಅರೋಪಿಗಳ ಪತ್ತೆಗೂ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಅಭಿಯಾನ ಮುಂದುವರಿಕೆ: ಕಳೆದ ಆರೇಳು ತಿಂಗಳಿಂದ ನಗರದಲ್ಲಿ ಮಾದಕ ವಸ್ತು ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗಿದೆ. ಮೂವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ. ಜತೆಗೆ ಪ್ರಸಕ್ತವು ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗಿದೆ. ಜತೆಗೆ ನಗರದ ಎಲ್ಲ ಶಾಲಾ-ಕಾಲೇಜುಗಳು, ಸಾರ್ವಜನಿಕರ ಸ್ಥ ಳಗಳಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಅಲ್ಲದೆ, ನಗರದ ಮಾದಕ ವಸ್ತು ಮಾರಾಟಗಾರರಿಗೆ ಗಾಂಜಾ ಹಾಗೂ ಇತರೆ ಮಾದಕ ವಸ್ತು ಸರಬರಾಜು ಮಾಡುತ್ತಿರುವ ನೆರೆ ರಾಜ್ಯಗಳ ವ್ಯಕ್ತಿಗಳ ಪತ್ತೆ ಕಾರ್ಯಕ್ಕೆ ಹೊಸ ಪ್ರಯೋಗ ಮಾಡಲಾಗಿದ್ದು, ನೆರೆ ರಾಜ್ಯಗಳ ಜಿಲ್ಲಾವರಿಷ್ಠಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿನ ಪೂರೈಕೆದಾರರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ ಎಂದರು.
ಭಯದಿಂದ ನಿಯಮ ಪಾಲಿಸುವದು ಬೇಡ: ದಂಡ ವಸೂಲಿ ಮಾಡುವುದು ನಮ್ಮ ಉದ್ದೇಶ ಅಲ್ಲ. ಪೊಲೀಸರಿಗೆ ಹೆದರಿ ಸಾರ್ವಜನಿಕರು ನಿಯಮ ಪಾಲನೆ ಮಾಡುವುದು ಬೇಡ. ಅವರ ಜೀವನ ಹಾಗೂ ಜೀವದ ಮೌಲ್ಯವನ್ನು ಅರಿತು ಸಂಚಾರಿ ನಿಯಮ ಪಾಲನೆ ಮಾಡಿಬೇಕು. ಹೆಲ್ಮೆಟ್ ಧರಿಸುವುದು, ಸಿಗ್ನಲ್ ಜಂಪ್ ಮಾಡುವುದು, ಫುಟ್‌ಪಾತ್ ಮೇಲೆ ವಾಹನ ಚಾಲನೆ ಮಾಡುವುದು ಒಳ್ಳೆ ನಾಗರೀಕನ ವ್ಯಕ್ತಿತ್ವ ಅಲ್ಲ. ಸಂಚಾರ ಪೊಲೀಸರು ಎಲ್ಲ ವೃತ್ತಗಳಲ್ಲಿಯೂ ಹೆಚ್ಚುವರಿ ಸಿಗ್ನಲ್ ದೀಪಗಳು, ಟೈಮರ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.ಮುಂಬೈ ಹಾಗೂ ದೆಹಲಿಗೆ ಹೊಲಿಸಿದರೆ ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದಲ್ಲಿ ಸಿಬ್ಬಂದಿ ನೇಮಕ ಕುರಿತು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಟಿ.ಸುನಿಲ್‌ಕುಮಾರ್, ನಗರ ಪೊಲೀಸ್ ಆಯುಕ್ತ * ಮೋಹನ್ ಭದ್ರಾವತಿ