ಕುಂದಗೋಳ: ಇಂದು ನಾವೆಲ್ಲ ಭೌತಿಕ ದಾರಿದ್ರ್ಯದಿಂದ ಕೂಡಿದ್ದು, ಇದನ್ನು ಹೋಗಲಾಡಿಸುವ ಶಕ್ತಿ ಸಂಗೀತಕ್ಕಿದೆ. ಅಲ್ಲದೇ ಸಮಾಜವನ್ನು ಒಗ್ಗೂಡಿಸಲು ಸಂಗೀತದಿಂದ ಮಾತ್ರ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶಕುಮಾರ ಹೇಳಿದರು.
ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಸವಾಯಿ ಗಂಧರ್ವರ 65ನೇ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಂಡ ಸಂಗೀತ ಮಹೋತ್ಸವಕ್ಕೆ ಗುರುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜ ಕಟ್ಟಲು ಸಿಮೆಂಟ್, ಇಟ್ಟಿಗೆಗಳಿಂದ ಸಾಧ್ಯವಿಲ್ಲ. ಕಲೆಗೆ ಸಮಾಜವನ್ನು ಕಟ್ಟುವ ಮಹಾನ್ ಶಕ್ತಿಯಿದೆ.
ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಶಿಕ್ಷಣದಿಂದ ಇಡೀ ಸಮಾಜದಲ್ಲಿ ಶಾಂತಿ ನೆಲೆಸುತ್ತಿದೆ. ಅದೇ ರೀತಿ ಕುಂದಗೋಳದಲ್ಲಿ ಸವಾಯಿ ಗಂಧರ್ವರು ಬೆಳೆಸಿದ ಸಂಗೀತ ಲೋಕದ ಪಾವಿತ್ರ್ಯಕ್ಕೆ ಯಾವುದೇ ಸೋಂಕು ತಗುಲದಂತೆ ನೋಡಿಕೊಳ್ಳುವ ಮೂಲಕ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕಿದೆ ಎಂದರು.
ಸಂಗೀತದ ಜ್ಞಾನವಿಲ್ಲದಿದ್ದರೂ ಸಂಗೀತಕ್ಕೆ ತಲೆದೂಗದಿರುರುವ ಮನುಷ್ಯ ಜಗತ್ತಿನಲ್ಲಿಯೇ ಕ್ರೂರ ಮನುಷ್ಯನಾಗುತ್ತಾನೆ. ಹಾವು ಸಹ ಪುಂಗಿಯ ಸಂಗೀತಕ್ಕೆ ತಲೆದೂಗುತ್ತದೆ. ಆದರೆ, ಇಂದು ಮನುಷ್ಯ ಹಾವಿಗಿಂತ ವಿಷಕಾರಿಯಾಗಿದ್ದು ವಿಷಾದದ ಸಂಗತಿ ಎಂದು ಹೇಳಿದರು.
ಪುರಸ್ಕಾರ: ಧಾರವಾಡದ ಪದ್ಮಶ್ರೀ ಪುರಸ್ಕೃತಗಾಯಕ ಪಂ| ಎಂ. ವೆಂಕಟೇಶಕುಮಾರ ಅವರಿಗೆ ರಾಷ್ಟ್ರೀಯ ಸಂಗೀತ ಪುರಸ್ಕಾರವನ್ನು ಶಾಸಕ ಸಿ.ಎಸ್. ಶಿವಳ್ಳಿ ಪ್ರದಾನ ಮಾಡಿದರು. ಖ್ಯಾತ ಗಾಯಕ ಪಂ| ಬಾಲಚಂದ್ರ ನಾಕೊಡ, ವಿದುಷಿ ಗೀತಾ ಜಾವಡೇಕರ, ವಿದುಷಿ ಮಂಜರಿ ಕರ್ವೆ, ಉಸ್ತಾದ್ ಮೆಹಬೂಬಸಾಬ ನದಾಫ ಅವರನ್ನು ಸನ್ಮಾನಿಸಲಾಯಿತು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ವಿಶ್ವಸ್ಥ ಸಮಿತಿ ಅಧ್ಯಕ್ಷ ಅರವಿಂದ ಕಟಗಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಎಮ್. ಎಸ್. ಅಕ್ಕಿ, ಡಾ| ಆನಂದ ಪಾಂಡುರಂಗಿ, ವಡಗೂರ ನಾಗರಾಜ, ಇಂದ್ರನೀಲ ಬಾಂಜಾ, ಜಯಶಂಕರ ಎಂ.ಎಂ., ಮಾಧವ ವಿ.ಪಿ., ಶಶಿ ದೇಸಾಯಿ, ಬಿ.ಎನ್. ದೇಸಾಯಿ, ವಿಶಾಲ, ಚಂದ್ರು, ಟಿ.ಎಸ್. ಗೌಡಪ್ಪನವರ, ಮುತ್ತಣ್ಣ ತಡಸೂರ, ವಿ.ಬಿ. ಧಾರವಾಡಶೆಟ್ರ, ಜಿತೇಂದ್ರ ಕುಲಕರ್ಣಿ, ಆರ್.ಐ.ಬ್ಯಾಹಟ್ಟಿ, ಎ.ಕೆ. ಕುಲಕರ್ಣಿ, ಅಶೋಕ ನಾಡಗೇರ, ಬಾಬುರಾವ್ ಹಾನಗಲ್ ಉಪಸ್ಥಿತರಿದ್ದರು. ಐ.ಎಮ್. ನಾವಳ್ಳಿ ಸ್ವಾಗತಿಸಿದರು. ಲಿಂಗರಾಜ ಸಂಶಿ ನಿರೂಪಿಸಿ, ವಂದಿಸಿದರು.