Advertisement

ಪಂಪ್‌ವೆಲ್‌: ಕೇಂದ್ರ ಬಸ್‌ ಟರ್ಮಿನಲ್‌ಗೆ ಟೆಂಡರ್‌

09:44 PM Sep 03, 2020 | mahesh |

ಮಹಾನಗರ: ಮಂಗಳೂರು ನಗರದ, ಜಿಲ್ಲೆಯ ಬಹುಕಾಲದ ಬೇಡಿಕೆಯಾಗಿರುವ ಸುಸಜ್ಜಿತ ಕೇಂದ್ರ ಬಸ್‌ನಿಲ್ದಾಣ ನಿರ್ಮಾಣ ಯೋಜನೆ ನನಸಾಗುವಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದ್ದು ಟೆಂಡರ್‌ ಕರೆಯಲಾಗಿದೆ. ಒಟ್ಟು 445 ಕೋ.ರೂ.ವೆಚ್ಚದಲ್ಲಿ ಇಂಟಿ ಗ್ರೇಟೆಡ್‌ ಬಸ್‌ ಟರ್ಮಿನಲ್‌ ಮತ್ತು ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಯೋಜನೆ ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವತಿಯಿಂದ ಅನುಷ್ಠಾನಗೊಳ್ಳಲಿದ್ದು ಟೆಂಡರ್‌ ಸಲ್ಲಿಸಲು ಅಕ್ಟೋಬರ್‌ 13 ಕೊನೆಯ ದಿನವಾಗಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ಸಾರ್ವ ಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಪಂಪ್‌ವೆಲ್‌ನಲ್ಲಿ ಇಂಟಿ ಗ್ರೇಟೆಡ್‌ ಬಸ್‌ ಟರ್ಮಿನಲ್‌ ಮತ್ತು ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 3 ವರ್ಷಗಳ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ.

180 ಬಸ್‌ ಬೇಗಳೊಂದಿಗೆ ಬಸ್‌ ಟರ್ಮಿನಲ್‌, ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಸೇವೆ ಮತ್ತು ದೂರದ ಪ್ರಯಾಣದ ಬಸ್‌ ವ್ಯವಸ್ಥೆಯನ್ನು ನೂತನ ಬಸ್‌ಟರ್ಮಿನಲ್‌ ಒಳಗೊಂಡಿದೆ. ಸುಮಾರು 10 ಲಕ್ಷ ಚದರ ಅಡಿ ವಿಸ್ತೀರ್ಣದ ಶಾಪಿಂಗ್‌ ಮಾಲ್‌, ಕಚೇರಿ ಸ್ಥಳ, ನಗರದ ಜನರಿಗಾಗಿ ಮಲ್ಟಿ-ಲೆವೆಲ್‌ ಕಾರ್‌ ಪಾರ್ಕಿಂಗ್‌ ಮುಂತಾದ ವ್ಯವಸ್ಥೆಗಳು ಇರಲಿದ್ದು ರಾಜ್ಯದಲ್ಲೇ ವಿನೂತನ ಮಾದರಿ ಬಸ್‌ ನಿಲ್ದಾಣ ಕಲ್ಪನೆಯಾಗಿದೆ. ಪಿಪಿಪಿ ಮಾಡೆಲ್‌ನ ಗುತ್ತಿಗೆ ಯಾರು ಪಡೆದಿದ್ದಾರೋ ಅವರು 40 ವರ್ಷಗಳ ಕಾಲ ಅದನ್ನು ನಿರ್ವಹಿಸಿ ನಂತರ ಈ ಬಸ್‌ ನಿಲ್ದಾಣವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕರಾರು ಯೋಜನೆ ಒಳಗೊಂಡಿದೆ.

11ವರ್ಷಗಳ ಹಿಂದೆ ಭೂಸ್ವಾಧೀನ
ಪಂಪ್‌ವೆಲ್‌ನಲ್ಲಿ ಕೇಂದ್ರ ಬಸ್‌ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ 2009ರಲ್ಲಿ 7.23 ಎಕ್ರೆ ಖಾಸಗಿ ಜಮೀನು ಸ್ವಾಧೀನ ಪಡಿಸಲಾಗಿತ್ತು. ಈ ಪ್ರದೇಶಕ್ಕೆ ಮಣ್ಣುತುಂಬಿಸುವ ಕಾರ್ಯ ಆರಂಭಗೊಂಡು 3 ವರ್ಷಗಳಾಗುತ್ತಾ ಬಂದಿವೆ. ಮೂರು – ನಾಲ್ಕು ವರ್ಷಗಳ ಹಿಂದೆ ಇಲ್ಲಿ ಇಂಟರ್‌ಲಾಕ್‌ ಅಳವಡಿಸಿ ತಾತ್ಕಾಲಿಕವಾಗಿ ಪ್ರಾಯೋಗಿಕ ನೆಲೆ ಯಲ್ಲಿ ಸರ್ವಿಸ್‌ ಬಸ್‌ನಿಲ್ದಾಣವನ್ನು ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವಿಸಲಾಗಿತ್ತು. ಇದೆಲ್ಲದರ ನಡುವೆ ಬಸ್‌ನಿಲ್ದಾಣ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಬಗ್ಗೆಯೂ ಮಾತುಕತೆ ನಡೆದಿತ್ತು. ಪಡೀಲ್‌, ಕುಳೂರು ಮುಂತಾ ದ ಪ್ರದೇಶಗಳ ಹೆಸರು ಪ್ರಸ್ತಾವನೆಯಾಗಿ ಸ್ಥಳ ಪರಿಶೀಲನೆ ನಡೆದಿತ್ತು. ಕಡೆಗೆ ಪಂಪ್‌ವೆಲ್‌ನ ಜಾಗವೇ ಅಂತಿಮಗೊಂಡಿತು.

24 ವರ್ಷಗಳಿಂದ ತಾತ್ಕಾಲಿಕ ನೆಲೆ
ನೆಹರೂ ಮೈದಾನದ ಬಳಿ ಇರುವ ಹಾಕಿ ಮೈದಾನದಲ್ಲಿ 24 ವರ್ಷಗಳ ಸುದೀರ್ಘ‌ ಅವಧಿಯಿಂದ ತಾತ್ಕಾಲಿಕ ನೆಲೆಯಲ್ಲಿ ಸರ್ವಿಸ್‌ ಬಸ್‌ನಿಲ್ದಾಣ ಕಾರ್ಯಾಚರಿಸುತ್ತಿದೆ. ಸರ್ವಿಸ್‌ ಬಸ್‌ನಿಲ್ದಾಣವನ್ನು ಹಂಪನಕಟ್ಟೆಯಿಂದ 1996ರ ಅ. 6ರಂದು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆಗಲೇ ಸೂಕ್ತ ಪ್ರದೇಶದಲ್ಲಿ ವಿಶಾಲ ಮತ್ತು ಸುಸಜ್ಜಿತ ಬಸ್‌ನಿಲ್ದಾಣವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಮಂಗಳೂರಿನಲ್ಲಿ ವಾಹನದಟ್ಟನೆ ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರ ಬಸ್‌ನಿಲ್ದಾಣವನ್ನು ಹಂಪನಕಟ್ಟೆ ಪ್ರದೇಶದಿಂದ ಹೊರಗೆ ಸ್ಥಳಾಂತರಿಸುವುದು ಅನಿವಾರ್ಯ.

Advertisement

ಮಹತ್ವದ ಯೋಜನೆ
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಕೇಂದ್ರ ಬಸ್‌ನಿಲ್ದಾಣ ನಿರ್ಮಾಣ ಬಹುಕಾಲದ ಬೇಡಿಕೆಯಾಗಿದ್ದು, ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆೆ. ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ ಜಿಲ್ಲೆಯ ಪಾಲಿಗೆ ಅತಿ ಮಹತ್ವದ್ದಾಗಿದ್ದು, ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಕಾರ್ಯಗತಗೊಳ್ಳುತ್ತಿದೆ. ಇದರ ಸಾಕಾರದಲ್ಲಿ ಸರ್ವರ ಸಹಕಾರ ಅವಶ್ಯವಿದೆ.
 - ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next