Advertisement

ಪಂಪ್‌ವೆಲ್‌ ಫ್ಲೈಓವರ್‌-ನಂತೂರು ವೃತ್ತದ ಮುಗಿಯದ ವೃತ್ತಾಂತ!

09:54 AM Sep 14, 2019 | sudhir |

ತಲಪಾಡಿಯಿಂದ ಕೊಟ್ಟಾರ ತನಕ ಮಂಗಳೂರು ನಗರವನ್ನು ಸವರಿಕೊಂಡು ಹೋಗುವ ರಾ. ಹೆದ್ದಾರಿ 66 ಚತುಷ್ಪಥ ಎನ್ನಲು ನಾಚಿಕೆಯಾಗುವ ಸ್ಥಿತಿಯಿದೆ. ರಸ್ತೆ ದಾಟಲು ಸೌಲಭ್ಯ ಇಲ್ಲದಿರುವುದು, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಲಾವಣೆ, ಸರ್ವೀಸ್‌ ರಸ್ತೆಗಳ ಕೊರತೆ, ಬಸ್‌ ತಂಗುದಾಣ ಇಲ್ಲ- ಹೀಗೆ ಅವಘಡಗಳನ್ನು ಹೆಚ್ಚಿಸಲು ಹಲವು ಕಾರಣ. ಈ ನಡುವೆ ಕನಸಾಗಿರುವ ಪಂಪ್‌ವೆಲ್‌ ಫ್ಲೈಓವರ್‌.

Advertisement

ಮಂಗಳೂರು: ದ.ಕ. ಜಿಲ್ಲೆಯನ್ನು ಹಾದು ಹೋಗುವ ಮತ್ತೂಂದು ಪ್ರಮುಖ ರಾಷ್ಟ್ರೀಯ ಹೆದ್ದಾರಿ 66. ಕೇರಳದ ಗಡಿ ತಲಪಾಡಿಯಿಂದ ಬೈಂದೂರು ಮೂಲಕ ಸಾಗುವ ಈ ಹೆದ್ದಾರಿ ಯಲ್ಲಿ ಹೆಜಮಾಡಿ ಟೋಲ್‌ ವರೆಗಿನ 46 ಕಿ.ಮೀ. ಚತುಷ್ಪಥ ರಸ್ತೆ ಜಿಲ್ಲೆಗೆ ಸೇರುತ್ತದೆ. ಹದಗೆಟ್ಟ ರಸ್ತೆ, ಅವೈಜ್ಞಾನಿಕ ಕಾಮಗಾರಿ, ಸಂಚಾರ ನಿಯಮ ಪಾಲಿಸದಿರುವ ಕಾರಣ ಅಪಘಾತ ಹೆಚ್ಚುತ್ತಿದೆ.
ಹಲವು ಅಪಾಯಕಾರಿ ಜಂಕ್ಷನ್‌ ಗಳು, ಸರ್ವೀಸ್‌ ರಸ್ತೆ ಇಲ್ಲದಿರು ವುದು, ಬಸ್‌ ತಂಗುದಾಣವಿಲ್ಲದ ಸ್ಥಿತಿ ಇದೆ. ತಲಪಾಡಿ- ಪಂಪ್‌ವೆಲ್‌ ಮಧ್ಯೆ ಸ್ವಲ್ಪಮಟ್ಟಿಗೆ ಸುಧಾರಿಸಿದಂತೆ ಕಂಡರೂ ಉಳಿದೆಡೆ ಜನ ದಾಟಲು ಸುರಕ್ಷತಾ ವಲಯಗಳಿಲ್ಲ.

ಏಕಮುಖ ಉಲ್ಲಂಘನೆ
ಪಂಪ್‌ವೆಲ್‌-ತಲಪಾಡಿ ಮಧ್ಯೆ ಐದಾರು ಕಡೆ ವಾಹನಗಳು ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತವೆ. ಎಕ್ಕೂರಿನಿಂದ ಪಂಪ್‌ವೆಲ್‌ಗೆ 1 ಕಿ.ಮೀ. ಅಂತರ. ಆದರೆ ವಾಹನ ಸವಾರರು ಜಪ್ಪಿನ ಮೊಗರು ಜಂಕ್ಷನ್‌ಗೆ
ಹೋಗಿ ಯೂ-ಟರ್ನ್ ಮಾಡಿ ಬರಬೇಕು. ಇದನ್ನು ತಪ್ಪಿಸಲು ಎಕ್ಕೂರಿನಿಂದ ಗೋರಿಗುಡ್ಡ ತನಕ ಒನ್‌ವೇಯಲ್ಲೇ ಬರುತ್ತಾರೆ.

ಜಪ್ಪಿನಮೊಗರು ಜಂಕ್ಷನ್‌ ಬಳಿಕವೂ ಇದೇ ಸಮಸ್ಯೆ. ಕೊಲ್ಯ ದವರದೂ ಇದೇ ಕತೆ. ಇದನ್ನು ತಪ್ಪಿಸಲು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ. ಒಂದೆರಡು ಕಡೆ ಬಿಟ್ಟರೆ ಬೇರೆಲ್ಲೂ ಸರ್ವೀಸ್‌ ರಸ್ತೆ/ಸುರಕ್ಷಿತ ತಂಗುದಾಣಗಳಿಲ್ಲ. ಜಪ್ಪಿನಮೊಗರು ಜಂಕ್ಷನ್‌ನಲ್ಲೇ ಬಸ್‌ ನಿಲುಗಡೆಯಿದೆ.

ಹೆದ್ದಾರಿ ಬದಿ ಲಾರಿ ನಿಲುಗಡೆ
ಘನ ವಾಹನಗಳು ತಲಪಾಡಿ ಟೋಲ್‌ಗೇಟ್‌ ಬಳಿ ಹೆದ್ದಾರಿ ಬದಿ ಸಾಲುಗಟ್ಟಿ ನಿಂತಿರುತ್ತವೆ. ಇವುಗಳ ನಿಲುಗಡೆಗೆ ಪ್ರತ್ಯೇಕ ಟ್ರಕ್‌-ಬೇ ಇಲ್ಲ.

Advertisement

ಮುಗಿಯದ ತಲೆನೋವು
8 ವರ್ಷಗಳಿಂದ ಪಂಪ್‌ವೆಲ್‌ ಫ್ಲೆ$çಓವರ್‌ ಕಾಮಗಾರಿ ಸಮಸ್ಯೆಯಾಗಿದೆ. ಸಾಕಷ್ಟು ಪ್ರತಿಭಟನೆ, ಟೀಕೆ ವ್ಯಕ್ತವಾಗಿ ದ್ದರೂ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಅಪಘಾತ ವಲಯವಾಗಿಯೂ ಪಂಪ್‌ವೆಲ್‌ ವೃತ್ತ ಬದಲಾಗಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭ ಕಾಮಗಾರಿ ಪೂರ್ಣಗೊಳಿಸಲು ಡೆಡ್‌ಲೈನ್‌ ಕೂಡ ನಿಗದಿಯಾಗಿತ್ತು. ಸೆಪ್ಟಂಬರ್‌ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಸಂಸದರು ಭರವಸೆ ನೀಡಿದ್ದರು. ಶೇ. 50ರಷ್ಟು ಕಾಮಗಾರಿ ಇನ್ನೂ ಬಾಕಿಯಿದ್ದು, 2 ತಿಂಗಳು ಕಳೆದರೂ ಪೂರ್ಣಗೊಳ್ಳುವುದು ಅನುಮಾನ. ಒಂದೆರಡು ತಿಂಗಳಿನಿಂದ ಕಾಮಗಾರಿಯೂ ನಡೆಯುತ್ತಿಲ್ಲ. ಅಪಘಾತ ವಲಯವಾಗಿ ಬದಲಾದ ಇಲ್ಲಿ ಇತ್ತೀಚೆಗಷ್ಟೇ ಬೈಕ್‌ ಸ್ಕಿಡ್‌ ಆಗಿ ಯುವಕ ಪ್ರಾಣ ಕಳೆದುಕೊಂಡಿದ್ದ.

ಡಾಮರು ಡಬ್ಬಿ ಆಧಾರ!
ಪಂಪ್‌ವೆಲ್‌-ತಲಪಾಡಿ ನಡುವೆ ಪಾದಚಾರಿ ದಾಟು ಸೌಲಭ್ಯವಿಲ್ಲ. ಗೋರಿಗುಡ್ಡೆಯಿಂದ ತಲ ಪಾಡಿ ವರೆಗೆ 5-6 ಕಡೆ ತಿರುವುಗಳಿದ್ದು, ನಿಯಮ ಪಾಲನೆ ಆಗಿಲ್ಲ. ತೊಕ್ಕೊಟ್ಟು ಮೇಲ್ಸೇತುವೆ ಯಿಂದ ಇಳಿಯುತ್ತಿದ್ದಂತೆ ತಿರುವಿದ್ದು, ವಾಹನಗಳು ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆಯುವ ಸಾಧ್ಯತೆಯಿದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಅವೈಜ್ಞಾನಿಕ ಬ್ಯಾರಿಕೇಡ್‌ಗಳಿವೆ. ಡಾಮರು ಡಬ್ಬಿಗಳೇ ಅವುಗಳಿಗೆ ಆಧಾರ!

ಅವೈಜ್ಞಾನಿಕ ನಂತೂರು ವೃತ್ತ
ನಂತೂರು ಮತ್ತು ಕೆಪಿಟಿ ಮಂಗಳೂರು ನಗರಕ್ಕೆ ಹೊಂದಿಕೊಂಡ ಬಹುದೊಡ್ಡ ಜಂಕ್ಷನ್‌ಗಳಾಗಿದ್ದು, ಅವೈಜ್ಞಾನಿಕ ರೀತಿಯಲ್ಲಿವೆ. ಕಚೇರಿ ವೇಳೆಯಲ್ಲಿ ಇಲ್ಲಿ ಸಂಚಾರ ದಟ್ಟಣೆ ತಪ್ಪಿದ್ದಲ್ಲ. ನಾಲ್ಕು ದಿಕ್ಕುಗಳಲ್ಲೂ ವಾಹನಗಳ ಮೈಲುದ್ದ ಸರದಿ ಸಾಲು ಸಾಮಾನ್ಯ. ಈ ಜಂಕ್ಷನ್‌ಗಳು ಹಲವು ಅಮಾಯಕ ಜೀವಗಳನ್ನು ಬಲಿ ಪಡೆದಿವೆ. ಕೆಪಿಟಿ ವೃತ್ತವೂ ನಿಯಮಗಳಿಗೆ ಪೂರಕವಾಗಿಲ್ಲದ ಕಾರಣ ಸರಣಿ ಅಪಘಾತಗಳಾಗುತ್ತಿವೆ. ಇನ್ನೊಂದೆಡೆ ಈ ಎರಡು ಜಂಕ್ಷನ್‌ಗಳಲ್ಲಿ ಈಗ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರತಿದಿನವೂ ಟ್ರಾಫಿಕ್‌ ಜಾಮ್‌ ತಪ್ಪಿದ್ದಲ್ಲ. ಕಚೇರಿ ವೇಳೆಯಲ್ಲಿ ವಾಹನ ಸವಾರರ ಪರದಾಟ ಹೇಳತೀರದ್ದು.

Advertisement

Udayavani is now on Telegram. Click here to join our channel and stay updated with the latest news.

Next