Advertisement

ಹತ್ತು ವರ್ಷದ ಬಳಿಕ ಪಂಪ್‌ವೆಲ್‌ ಮೇಲ್ಸೇತುವೆಗೆ ಮುಕ್ತಿ!

09:05 AM Jan 29, 2020 | mahesh |
ಮಂಗಳೂರು: ಹಲವು ವರ್ಷಗಳಿಂದ ಸಾಕಷ್ಟು ಟೀಕೆ ಹಾಗೂ ಅಪಹಾಸ್ಯಕ್ಕೆ ಗುರಿಯಾಗಿರುವ ನಗರದ ಹೃದಯ ಭಾಗದಲ್ಲಿರುವ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜ. 31ರಂದು ಉದ್ಘಾಟನೆಗೊಂಡು ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಮೇಲ್ಸೇತುವೆಯು ಒಟ್ಟು 600 ಮೀಟರ್‌ ಉದ್ದ ಹಾಗೂ 20 ಮೀಟರ್‌ ಅಗಲ ಇದೆ. ಮೊದಲ ಆರು ವರ್ಷದಲ್ಲಿ ಕುಂಟುತ್ತಾ ಸಾಗಿದ ಕಾಮಗಾರಿಗೆ ಕಳೆದ ಮೂರು ವರ್ಷಗಳ ಹಿಂದೆ ವೇಗ ದೊರೆಯಿತು. ಬಳಿಕ ಮತ್ತೆ ನಿಧಾನಗತಿಯಲ್ಲಿ ಸಾಗಿ ಈ ಬಾರಿಯ ಮಳೆಗಾಲದಲ್ಲಿ ಕಾಮಗಾರಿ ಆಮೆಗತಿಗೆ ತಿರುಗಿತು. 2019ರ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಸಂಸದರು ನವಯುಗ್‌ ಸಂಸ್ಥೆಯ ಮೇಲೆ ಒತ್ತಡ ತಂದರೂ ಇದು ಸಾಧ್ಯವಾಗಲಿಲ್ಲ. ಬಳಿಕ ಫೆಬ್ರವರಿ, ಮೇ ಸೇರಿದಂತೆ ಗಡುವುಗಳು ವಿಸ್ತರಣೆಗೊಂಡವು. ಡಿಸೆಂಬರ್‌ 31ರೊಳಗೆ ಕಾಮಗಾರಿ ಪೂರ್ಣಗೊಂಡು ಜನವರಿ ಮೊದಲ ವಾರ ಉದ್ಘಾಟನೆ ಎಂದು ಸಂಸದ ನಳಿನ್‌ ಕುಮಾರ್‌ ಕೊನೆಯ ಡೆಡ್‌ಲೈನ್‌ ನೀಡಿದ್ದರು. ಇದು ಕೂಡ ಸಾಧ್ಯವಾಗದಿದ್ದಾಗ ಆ ವೇಳೆ ಸಂಸದರು ಪಂಪ್‌ವೆಲ್‌ ಮೇಲ್ಸೇತುವೆಯ ಸಂಪೂರ್ಣ ಮೇಲುಸ್ತುವಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಿದ್ದರು.
ಕಾಮಗಾರಿ ಕೈಗೆತ್ತಿಕೊಂಡಿರುವ ನವಯುಗ್‌ ಸಂಸ್ಥೆಯು ಜನವರಿ ಕೊನೆಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿಲ್ಲಾಡಳಿತಕ್ಕೆ ಭರವಸೆ ನೀಡಿತ್ತು. ಪ್ರತೀ ದಿನದ ಕಾಮಗಾರಿ ಪ್ರಗತಿ ವರದಿಯನ್ನು ಜಿಲ್ಲಾಡಳಿತಕ್ಕೆ ಅಧಿಕಾರಿಗಳು ಸಲ್ಲಿಸುತ್ತಿದ್ದರು. ಅದರಂತೆ ಕಾಮಗಾರಿ ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜ. 31ರಂದು ಉದ್ಘಾಟನೆಗೊಳ್ಳುವ ಸಾಧ್ಯತೆ ಹೆಚ್ಚಿದೆ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧ ಕಾರಿ ಸಿಂಧೂ ಬಿ. ರೂಪೇಶ್‌, “ಮಂಗಳವಾರ ಇಡೀ ದಿನ ಪ್ರಮುಖ ಸಭೆಗಳಲ್ಲಿ ಭಾಗವಹಿಸಿದ್ದ ಕಾರಣ, ಜ.31ರಂದು ಫ್ಲೈಓವರ್‌ ಉದ್ಘಾಟನೆಯಾಗುವ ಬಗ್ಗೆ ಮಾಹಿತಿಯಿಲ್ಲ. ಆದರೆ ನಾವು ಈಗಾಗಲೇ ಗಡುವು ನೀಡಿದಂತೆ ಜ. 31ರಂದು ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದು ನವಯುಗ ಸಂಸ್ಥೆಯ ಅಧಿಕಾರಿಗಳು ಈಗಾಗಲೇ ತಿಳಿಸಿರುವುದಾಗಿ ಹೇಳಿದ್ದಾರೆ.
ಜಾಲ ತಾಣದಲ್ಲಿ ಟ್ರೆಂಡ್‌
ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಟೀಕೆ ವ್ಯಕ್ತವಾಗಿತ್ತು. ಫೇಸ್‌ಬುಕ್‌ನಲ್ಲಿ ಟ್ರೆಂಡ್‌ ಆಗಿರುವ 10 ವರ್ಷದ ಚಾಲೆಂಜ್‌ನಲ್ಲಿ ಪಂಪ್‌ವೆಲ್‌ ಮೇಲ್ಸೇತುವೆ ಚಿತ್ರ ಬಳಸಿ ಕಳೆದ ಹತ್ತು ವರ್ಷಗಳ ಹಿಂದೆ ಇದ್ದ ಪಂಪ್‌ವೆಲ್‌ ವೃತ್ತ ಮತ್ತು ಈಗಿನ ಮೇಲ್ಸೇತುವೆ ಕಾಮಗಾರಿ ಸ್ಥಿತಿಯನ್ನು ಹೋಲಿಕೆ ಮಾಡಿ ನೆಟ್ಟಿಗರು ಟ್ರೋಲ್‌ ಮಾಡಿದ್ದರು. ಜೊತೆ “ಪಂಪ್‌ವೆಲ್‌ಗೆ ಬಲೆ’ ಎಂಬ ಹಾಡು ಕೂಡ  ಪ್ರಸಿದ್ಧಿ ಪಡೆದಿತ್ತು.  ಸಂಸದ ನಳಿನ್‌ ಅವರು ಮೇಲ್ಸೇತುವೆ ಉದ್ಘಾಟನೆ ಜನವರಿ ಮೊದಲ ವಾರ ಎಂದು ಈ ಹಿಂದೆ ಹೇಳಿದ್ದರು. ಇದೇ ಮಾತಿನ ತುಣುಕನ್ನು ಬೇರೆ ಬೇರೆ ರೀತಿಯಲ್ಲಿ ಟ್ರೋಲ್‌ ಆಗಿತ್ತು.
Advertisement

Udayavani is now on Telegram. Click here to join our channel and stay updated with the latest news.

Next