ಮಂಗಳೂರು: ಸುಮಾರು 10 ವರ್ಷಗಳಿಂದ ನನೆಗುದಿಗೆ ಬಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪಂಪ್‌ವೆಲ್ ಮೇಲ್ಸೇತುವೆಯು ಶುಕ್ರವಾರ ಲೋಕಾರ್ಪ ಣೆಯಾಗಿ ವಾಹನಗಳ ಸಂಚಾರ ಪ್ರಾರಂಭಗೊಂಡಿದೆ.
ಉದ್ಘಾಟನೆಯ ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಸರಕಾರವೇ ಕಾರಣ. ಮನಮೋಹನ್ ಸಿಂಗ್ ಪ್ರಧಾನಿ ಯಾಗಿದ್ದ ವೇಳೆ ತೆಗೆದುಕೊಂಡ ಕೆಲವು ನಿಯಮಗಳಿಂದಾಗಿ ಕಾಮಗಾರಿ ಮುಗಿಯುವುದಕ್ಕೆ ತಡವಾಗಿದೆ. ಅಲ್ಲದೆ ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಮಹಾನಗರ ಪಾಲಿಕೆ, ಅಂದಿನ ಕಾಂಗ್ರೆಸ್ ಶಾಸಕರು, ಉಸ್ತುವಾರಿ ಸಚಿವರು ಕೂಡ ನೇರ ಹೊಣೆ ಎಂದು ಆರೋಪಿಸಿದರು.
2004ರಲ್ಲಿ ಪಂಪ್‌ವೆಲ್ ಮೇಲ್ಸೇತುವೆಗೆ ಅನುಮೋದನೆ ದೊರಕಿತ್ತು. 2010ರಲ್ಲಿ ಟೆಂಡರ್ ನಡೆದು 2012ರಲ್ಲಿ ಕಾಮಗಾರಿ ಆರಂಭ ಗೊಂಡಿತ್ತು. 2016ರಲ್ಲಿ ಮಹಾವೀರ ವೃತ್ತ ಮತ್ತು ಅದರಲ್ಲಿದ್ದ ಕಲಶವನ್ನು ತೆರವುಗೊಳಿಸಲು ಪಾಲಿಕೆಯಿಂದ ಒಪ್ಪಿಗೆ ದೊರಕಿತ್ತು. ಆ ವೇಳೆ ಅಂಡರ್ ಪಾಸ್ ಬೇಕೆಂಬ ಕಾರಣಕ್ಕೆ ಕಾಮಗಾರಿ ವಿಳಂಬ ವಾಯಿತು. ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣ ವಾಗುತ್ತದೆ ಎಂಬ ಕಾರಣಕ್ಕೆ ವಿನ್ಯಾಸ ಬದಲಿಸ ಬೇಕಾಯಿತು. ಇಷ್ಟೆಲ್ಲ ತೊಡಕು ಇದ್ದರೂ ಎಲ್ಲದಕ್ಕೂ ಅವಕಾಶ ನೀಡಿಯೇ ಕಾಮಗಾರಿ ಪೂರ್ಣ ಗೊಳಿಸಲಾಗಿದೆ ಎಂದರು.
ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನ ಸಮಾರಂಭಕ್ಕೆ ವಿಪಕ್ಷದ ಟೀಕಾ ಕಾರರು ಬರಬೇಕಿತ್ತು. ಹಲವು ವರ್ಷಗಳಿಂದ ಉಳ್ಳಾಲದಲ್ಲಿ 400 ಮನೆಗಳಿಗಾಗಿ ಬಡವರು ಕಾಯುತ್ತಿದ್ದಾರೆ. ಯಾರ್ಯಾರ ಕಾಲು ಹಿಡಿದು ಜನಪ್ರತಿನಿಧಿಯಾದವರು ಉಳ್ಳಾಲದಲ್ಲಿ ಕಾಮಗಾರಿಗೆ ಬಾಕಿ ಇರುವ ಮನೆಗಳ ಬಗ್ಗೆ ಸತ್ಯಶೋಧನೆ ನಡೆಸಲಿ. ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಗೂ ಕಾನೂನಿನ ತೊಡಕು ಎದುರಾಗಿತ್ತು. ಕಾಮಗಾರಿ ಉದ್ದೇಶದಿಂದ ಕೆಲವು ಕಟ್ಟಡ ತೆರವುಗೊಳಿಸಲು ಆ ಭಾಗದ ಶಾಸಕರು ಅಡ್ಡಿಪಡಿಸಿದ್ದರು. ಇನ್ನೂ 5ರಿಂದ 6 ಕಟ್ಟಡ ತೆರವಿಗೆ ಬಾಕಿ ಇದೆ. ಈ ವಿಚಾರಕ್ಕೆ ಕಾಂಗ್ರೆಸ್‌ನವರು ಯಾವಾಗ ಪಾದಯಾತ್ರೆ ನಡೆಸುತ್ತಾರೆ ಎಂದು ಲೇವಡಿ ಮಾಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಸಂಜೀವ ಮಠಂದೂರು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಮುಖರಾದ ಕಿಶೋರ್ ರೈ, ಸಂದೀಪ್ ಗರೋಡಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ನವಯುಗ ಸಂಸ್ಥೆ ಅಧಿಕಾರಿಗಳು ಉಪಸ್ಥಿತರಿದ್ದರು. ಕೇರಳದ ಚೆಂಡೆ, ವಾದ್ಯ, ಬೊಂಬೆಗಳು ಮೇಲ್ಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಗಮನ ಸೆಳೆದವು.
ಪಂಪ್‌ವೆಲ್ ಮೇಲ್ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.