Advertisement

ಬಂಡಿಮಠದಲ್ಲಿ ಪೋಲಾಗುತ್ತಿದೆ ನೀರು …ಕೇಳುವವರಿಲ್ಲ ಯಾರೂ !

09:54 PM Mar 25, 2019 | sudhir |

ಕಾರ್ಕಳ: ಹನಿ ನೀರು ಅಮೂಲ್ಯ ವಾಗಿರುವ ಈ ಬೇಸಗೆಯಲ್ಲೂ ಕಾರ್ಕಳದ ಬಂಡಿಮಠ ಸಂಪ್‌ನಿಂದ ಭಾರೀ ಪ್ರಮಾಣದ ನೀರು ಹರಿದು ಪೋಲಾಗುತ್ತಿರುವ ದೃಶ್ಯ ಕಂಡುಬರುತ್ತಿದೆ.

Advertisement

ಬಿರು ಬಿಸಿಲಿಗೆ ಕೆರೆಬಾವಿ ನೀರು ಬತ್ತಿ ನೀರಿಗಾಗಿ ಪರಿತಪಿಸುತ್ತಿರುವ ಈ ಸಮಯದಲ್ಲಿ ಪುರಸಭಾ ವ್ಯಾಪ್ತಿಯ ಕಲ್ಲೊಟೆ ರಸ್ತೆ ಪಕ್ಕದಲ್ಲಿರುವ ಸಂಪ್‌ ಅಡಿಪಾಯ ಶಿಥಿಲಗೊಂಡು ನೀರು ಸಂಪ್‌ನಿಂದ ಯಥೇತ್ಛವಾಗಿ ಹರಿದು ಚರಂಡಿ ಸೇರುತ್ತಿದೆ.

ಬೃಹತ್‌ ಟ್ಯಾಂಕ್‌
10 ಲಕ್ಷ ಲೀ. ನೀರು ತುಂಬುವ ಸಾಮರ್ಥ್ಯ ಹೊಂದಿರುವ ಬೃಹತ್‌ ಟ್ಯಾಂಕ್‌ಗೆ ಪಕ್ಕದಲ್ಲೇ ಇರುವ ಸಂಪ್‌ನಿಂದ ಪಂಪ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಟ್ಯಾಂಕ್‌ ತುಂಬಲು 7 ಗಂಟೆ ಸಮಯಾವಕಾಶ ಬೇಕಾಗಿರುವ ಕಾರಣ 7 ಗಂಟೆ ಕಾಲ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಜೀವಜಲ ಪೋಲಾಗುತ್ತಿದೆ. ಅದಲ್ಲದೇ ಟ್ಯಾಂಕ್‌ನಲ್ಲೂ ನೀರು ಸೋರಿಕೆಯಾಗಿ ಮಳೆನೀರು ಬಿದ್ದಂತೆ ಸುರಿಯುತ್ತಿದೆ.

ಮುಂಡ್ಲಿಯಿಂದ ನೀರು
ಕಾರ್ಕಳ ಪುರಸಭಾ ವ್ಯಾಪ್ತಿಗೆ ದುರ್ಗ ಗ್ರಾಮದ ಮುಂಡ್ಲಿ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ. ಪುರಸಭಾ ವ್ಯಾಪ್ತಿಗೆ ಮುಂಡ್ಲಿ ಜಲಾಶಯವೇ ನೀರಿನ ಮೂಲ. ಮುಂಡ್ಲಿ ಜಲಾಶಯದಲ್ಲೂ ಹೂಳು ತುಂಬಿದ್ದ ಕಾರಣ ನೀರಿನ ಶೇಖರಣೆ ಪ್ರಮಾಣ ಎಂದಿನಂತಿಲ್ಲ.

ಪರಿಣಾಮ ಬೀರಲಿದೆ
ನೀರಿನ ಬವಣೆ ಎಲ್ಲೆಡೆ ಅತಿಯಾಗಿಯೇ ಕಂಡುಬರುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ನೀರನ್ನು ವೃಥಾ ಪೋಲು ಮಾಡುವುದರಿಂದ ಸದ್ಯವೇ ಘೋರ ಪರಿಣಾಮ ಎದುರಿಸಬೇಕಾದ ಸ್ಥಿತಿ ಬರಬಹುದು. ನೀರಿನ ಮಿತಬಳಕೆ, ನೀರಿನ ಸಂರಕ್ಷಣೆ, ಜಾಗೃತಿ ಕಾರ್ಯಾಗಾರ ನಡೆಸುತ್ತಿರುವ ಆಡಳಿತ ವರ್ಗ ತಮ್ಮ ಕಣ್ಣೆದುರೇ ನೀರು ಪೋಲಾಗುತ್ತಿದ್ದರೂ ಯಾವುದೇ ಕ್ರಮ ವಹಿಸದೇ, ತಮ್ಮ ಕಾರ್ಯವಲ್ಲ ಎಂಬಂತೆ ನಿಶ್ಚಿಂತೆಯಿಂದ ಇದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಯಾಕೆ ನಿರ್ಲಕ್ಷ é?
ಪುರಸಭಾ ವ್ಯಾಪ್ತಿಯ ಈ ಸಂಪ್‌ ಅನ್ನು ಪುರಸಭೆ ನಿರ್ವಹಿಸಬೇಕಾಗಿದೆ. ಸರಕಾರ ನೀರಾವರಿ ಯೋಜನೆ ಹೆಸರಿನಲ್ಲಿ ಕೋಟಿ ಕೋಟಿ ರೂ. ಅನುದಾನ ಮೀಸಲಿರಿಸಿದ್ದರೂ ನೀರನ್ನು ಸಂಗ್ರಹಿಸುವ ಸಂಪ್‌, ಟ್ಯಾಂಕ್‌ ಅನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ. ನೀರಾವರಿ ಇಲಾಖೆ, ಪುರಸಭೆ ಅಧಿಕಾರಿಗಳು ಮುಂಜಾಗ್ರತೆ ವಹಿಸುವಲ್ಲಿ ಉದಾಸೀನ ತೋರ್ಪಡಿಸುವುದು ಸರಿಯಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

ದುರಸ್ತಿಪಡಿಸಲಾಗುವುದು
ಪುರಸಭೆ ವತಿಯಿಂದ ಈಗಾಗಲೇ ಟ್ಯಾಂಕ್‌ ದುರಸ್ತಿಪಡಿಸುವಂತೆ ವಾಟರ್‌ ಸಪ್ಲೆ„ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಂಡಿಮಠದ 50 ಸಾವಿರ ಲೀ. ನೀರಿನ ಸಾಮರ್ಥ್ಯವಿರುವ ಸಂಪ್‌ ರಿಪೇರಿಗೆ 2.5 ಲಕ್ಷ ರೂ., 1 ಲಕ್ಷ ಲೀಟರ್‌ ಸಾಮರ್ಥ್ಯವಿರುವ ಸಂಪ್‌ಗೆ 6 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಓವರ್‌ ಹೆಡ್‌ ಟ್ಯಾಂಕ್‌ ದುರಸ್ತಿಗೆ 3.80 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು 2019-20 ಸಾಲಿನ ಅನುದಾನದಲ್ಲಿ ಹಣ ಕಾಯ್ದಿರಿಸಿ ದುರಸ್ತಿಪಡಿಸಲಾಗುವುದು.
-ಮೇಬಲ್‌ ಡಿ’ಸೋಜಾ, ಪುರಸಭೆ ಮುಖ್ಯಾಧಿಕಾರಿ

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next