Advertisement

ಮರೆಯದ ಪಾಠ ಕಲಿಸಬೇಕು

12:30 AM Feb 19, 2019 | |

ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು 40 ಸಿಆರ್‌ಪಿಎಫ್ ಯೋಧರನ್ನು ಆತ್ಮಾಹುತಿ ದಾಳಿ ಮೂಲಕ ಸಾಯಿಸಿದ ಘಟನೆಗೆ ಭದ್ರತಾ ಪಡೆ ನಾಲ್ಕೇ ದಿನದಲ್ಲಿ ಪ್ರತೀಕಾರ ತೀರಿಸಿಕೊಂಡಿದೆ. ಪಿಂಗಿಲಾನ ಎಂಬ ಹಳ್ಳಿಯಲ್ಲಿ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಮೂವರು ಉಗ್ರರನ್ನು ಸೇನೆ ಸಾಯಿಸಿದೆ. ಈ ಪೈಕಿ ಒಬ್ಬ ಪುಲ್ವಾಮ ದಾಳಿಯ ಸಂಚುಕೋರ ಹಾಗೂ ಜೈಶ್‌ ಉಗ್ರ ಸಂಘಟನೆಯ ಕಮಾಂಡರ್‌ ಅಬ್ದುಲ್‌ ರಶೀದ್‌ ಘಾಜಿ ಅಲಿಯಾಸ್‌ ಕಮ್ರಾನ್‌. ಈತನೇ ಆತ್ಮಹತ್ಯಾ ಬಾಂಬರ್‌ಗೆ ತರಬೇತಿ ನೀಡಿದವ. ತನ್ನ ಅಳಿಯನ ಹತ್ಯೆಯ ಪ್ರತೀಕಾರ ತೀರಿಸಲು ಜೈಶ್‌ ಮುಖಂಡ ಮಸೂದ್‌ ಅಜರ್‌ ಇವನನ್ನು ಕಾಶ್ಮೀರ ಕಣಿವೆಗೆ ಕಳುಹಿಸಿದ್ದ. ಈತನ ಹತ್ಯೆಯೊಂದಿಗೆ ಪುಲ್ವಾಮ ದಾಳಿಯ ಬಳಿಕ ಭುಗಿಲೇದಿದ್ದ ಭಾರತೀಯರ ರೋಶ ಒಂದಷ್ಟು ತಣಿಯಬಹುದು. ಆದರೆ 18 ತಾಸುಗಳಷ್ಟು ಕಾಲ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಮೇಜರ್‌ ಸೇರಿ ನಾಲ್ವರು ಯೋಧರು ಮೃತಪಟ್ಟಿದ್ದು ಹಾಗೂ ಹಲವು ಮಂದಿ ಗಾಯಗೊಂಡಿರುವುದು ಬೇಸರದ ಸಂಗತಿ. 

Advertisement

ಪುಲ್ವಾಮ ದಾಳಿ ನಡೆದ ನಾಲ್ಕೇ ದಿನಗಳಲ್ಲಿ ದಾಳಿಯ ರೂವಾರಿಯನ್ನು ಹತ್ಯೆಗೈಯ್ಯಲು ಸಾಧ್ಯವಾಗಿರುವುದು ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕಾರ್ಯಾಚರಣೆಯೂ ಹೌದು. ಮುಕ್ತ ಸ್ವಾತಂತ್ರ್ಯ ಸಿಕ್ಕಿದರೆ ನಮ್ಮ ಯೋಧರು ಎಂಥ ಉಗ್ರರನ್ನಾದರೂ ಹೆಡೆಮುರಿ ಕಟ್ಟುವ ದಿಟ್ಟತನ ಹೊಂದಿದ್ದಾರೆ ಎಂಬುದನ್ನು ಈ ಕಾರ್ಯಾಚರಣೆಯ ಮೂಲಕ ಭದ್ರತಾ ಪಡೆ ಸಾಬೀತುಪಡಿಸಿದೆ. 

ಉಗ್ರರಿಗೆ ಅವರ ಭಾಷೆಯಲ್ಲೇ ಉತ್ತರ ನೀಡಬೇಕೆಂಬ ಕೂಗು ಪುಲ್ವಾಮ ದಾಳಿಯ ಬಳಿಕ ಕೇಳಿ ಬಂದಿತ್ತು. ಭದ್ರತಾ ಪಡೆಯೀಗ ಆ ಕೆಲಸವನ್ನು ಮಾಡಿದೆ. ಈ ಮಾದರಿಯ ಹೊಡೆತಗಳನ್ನು ನೀಡಿಯೇ ಉಗ್ರರನ್ನು ಮಟ್ಟ ಹಾಕಬೇಕು. ಏಟಿಗೆ ತಕ್ಷಣ ಎದಿರೇಟು ಸಿಕ್ಕಿದರೆ ಅದರ ತೀವ್ರತೆ ಹೆಚ್ಚಿರುತ್ತದೆ. ಒಂದೆಡೆ ರಾಜತಾಂತ್ರಿಕ ಮಾರ್ಗ ಮತ್ತು ಅಂತರಾಷ್ಟ್ರೀಯ ವೇದಿಕೆಗಳನ್ನು ಬಳಸಿಕೊಂಡು ಉಗ್ರರನ್ನು ಪ್ರಾಯೋಜಿಸುತ್ತಿರುವ ಪಾಕಿಸ್ತಾನವನ್ನು ಜಗತ್ತಿನೆದುರು ಅಸಹಾಯಕವಾಗುವಂತೆ ಮಾಡುತ್ತಿರುವಾಗಲೇ ಇನ್ನೊಂದೆಡೆ ಉಗ್ರ ಬೇಟೆಯೂ ನಡೆಯುತ್ತಿದೆ. ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಕೇಂದ್ರ ಸರಕಾರ ಬಲವಾದ ಹೊಡೆತಗಳನ್ನು ನೀಡುತ್ತಿದ್ದು ಶ್ರೀನಗರ-ಮುಜಫ‌ರಬಾದ್‌ ನಡುವಿನ ಶಾಂತಿ ಬಸ್‌ ಯಾತ್ರೆಯನ್ನು ರದ್ದುಗೊಳಿಸಿರುವುದು ಇಂಥ ಕ್ರಮಗಳಲ್ಲಿ ಒಂದು. ಭಯೋತ್ಪಾದಕರ ಮೂಲಕ ಕಿರುಕುಳ ನೀಡುತ್ತಿರುವ ದೇಶದ ಜತೆಗೆ ಯಾವ ರೀತಿಯ ಸಂಬಂಧವೂ ಬೇಡ ಎನ್ನುವುದು ಸಮರ್ಪಕವಾದ ನಿಲುವು. ಆರಂಭದಿಂದಲೂ ಭಾರತ ಇದನ್ನೇ ಪ್ರತಿಪಾದಿಸಿಕೊಂಡು ಬಂದಿದೆ. ದ್ವಿಪಕ್ಷೀಯ ಮಾತುಕತೆ ಬೇಕಿದ್ದರೆ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಿ ಎನ್ನುವುದೇ ಭಾರತದ ವಾದವಾಗಿತ್ತು. ಆದರೆ ಇಂಥ ಸಭ್ಯ ಕ್ರಮಗಳ ಮೂಲಕ ಆ ದೇಶವನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ ಎನ್ನುವುದು ಆಗಾಗ ಸಾಬೀತಾಗುತ್ತಿರುತ್ತದೆ. ಇನ್ನೀಗ ಉಳಿದಿರುವುದು ಕಠಿನ ಕ್ರಮಗಳು ಮಾತ್ರ. 

ಕಳೆದ ನಾಲ್ಕು ದಶಕಗಳಿಂದ ಭಾರತಕ್ಕೆ ದೊಡ್ಡ ತಲೆನೋವಾಗಿರುವುದೇ ನೆರೆ ದೇಶ. ಉಗ್ರರನ್ನು ಛೂಬಿಟ್ಟು ರಕ್ತಪಾತ ಮಾಡುತ್ತಿರುವ ದೇಶವನ್ನು ಯಾವ ರೀತಿ ನಿಭಾಯಿಸುವುದು ಎಂದು ತಿಳಿಯದೆ ನಾವು ಕಂಗಾಲಾಗಿದ್ದೆವು. ಮಾತುಕತೆ, ಯುದ್ಧ, ಎಚ್ಚರಿಕೆ, ಪ್ರತಿ ಏಟು ಎಲ್ಲ ನೀಡಿದರೂ ಆ ದೇಶ ಬುದ್ಧಿ ಕಲಿತುಕೊಳ್ಳುತ್ತಿಲ್ಲ. ಮೂರು ಯುದ್ಧಗಳಲ್ಲಿ ಸೋತ ಬಳಿಕವೂ ಸುಮ್ಮನಿರಲು ಆ ದೇಶಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಎದಿರೇಟು ನೀಡಿಯೂ ಆಯಿತು. ಶಾಂತಿ ಮಾತುಕತೆಗಳಿಗೆ ಮತ್ತು ಒಪ್ಪಂದಗಳಿಗೆ ಪಾಕ್‌ ಕವಡೆ ಕಿಮ್ಮತ್ತಿಲ್ಲ. ಇನ್ನೀಗ ಉಳಿದಿರುವುದು ಈ ರೀತಿ ತಕ್ಷಣ ತಿರುಗೇಟು ನೀಡುವ ಮಾರ್ಗ. 

ಪಾಕಿಸ್ತಾನದ ಈ ಕಾರಸ್ಥಾನದ ಹಿಂದೆ ಒಂದು ಸರಳ ಲೆಕ್ಕಾಚಾರವಿದೆ. ಅದು ಭಾರತವನ್ನು ಅಸ್ಥಿರಗೊಳಿಸುವುದು. ನಿತ್ಯ ರಕ್ತಪಾತವಾಗುವಂತೆ ಮಾಡಿ ಭದ್ರತೆಗೆ ಸವಾಲೊಡ್ಡುವುದು, ಕಾಶ್ಮೀರ ಹೊತ್ತಿ ಉರಿಯುವಂತೆ ಮಾಡುವುದು, ಅಲ್ಲಿನ ಯುವಕರನ್ನು ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರೇರೇಪಿಸುವುದು… ಇಂಥ ಕೃತ್ಯಗಳಿಂದ ನೇರ ಯುದ್ಧದಲ್ಲಿ ಮಾಡಲು ಸಾಧ್ಯವಾಗದ್ದನ್ನು ಪರೋಕ್ಷವಾಗಿ ಸಾಧಿಸುವುದು ಪಾಕಿಸ್ತಾನದ ಉದ್ದೇಶ. ಇಂಥ ಹೇಡಿ ದೇಶಕ್ಕೆ ಎಂದೂ ಮರೆಯದ ಪಾಠ ಕಲಿಸುವ ಕಾಲ ಬಂದಿದೆ. ಈ ಪಾಠ ಪಾಕಿಸ್ತಾನದ ಪಾಲಿಗೆ ದುಬಾರಿಯಾಗಬೇಕು. ಮಡಿದ ಯೋಧರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಇದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next